ADVERTISEMENT

ತುಮಕೂರು | ಪ್ರತ್ಯೇಕ ಪ್ರಕರಣ: ₹31 ಲಕ್ಷ ವಂಚನೆ

ಉಪನ್ಯಾಸಕನಿಗೆ ₹13 ಲಕ್ಷ ಮೋಸ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 14:19 IST
Last Updated 6 ಜೂನ್ 2024, 14:19 IST
ಸೈಬರ್‌
ಸೈಬರ್‌   

ತುಮಕೂರು: ‘ಆನ್‌ಲೈನ್‌ ಟ್ರೇಡಿಂಗ್‌ ಮೂಲಕ ಹೆಚ್ಚಿನ ಲಾಭ ಗಳಿಸಬಹುದು’ ಎಂಬ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಳ್ಳುತ್ತಿರುವುದು ಜಾಸ್ತಿಯಾಗಿದೆ. ಕಳೆದ ಎರಡು ದಿನಗಳಲ್ಲಿ ಸೈಬರ್‌ ಠಾಣೆಯಲ್ಲಿ ದಾಖಲಾದ 4 ಪ್ರಕರಣದಲ್ಲಿ ನಾಲ್ವರಿಗೆ ₹31.36 ಲಕ್ಷ ವಂಚಿಸಲಾಗಿದೆ.

ತಾಲ್ಲೂಕಿನ ಕೆಸ್ತೂರು ಗ್ರಾಮದ ನಿವಾಸಿ, ಉಪನ್ಯಾಸಕ ಎ.ಎಂ.ದೇವರಾಜು ಎಂಬುವರಿಗೆ ‘ಟ್ರೇಡಿಂಗ್‌ ಮುಖಾಂತರ ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದು’ ಎಂದು ನಂಬಿಸಿ ₹13.44 ಲಕ್ಷ ಮೋಸ ಮಾಡಿದ್ದಾರೆ. ವಾಟ್ಸ್‌ ಆ್ಯಪ್‌ ಮೂಲಕ ಅವರಿಗೆ ಮಸೇಜ್‌ ಮಾಡಿ ಹಣ ಹೂಡಿಕೆ ಬಗ್ಗೆ ತಿಳಿಸಿದ್ದಾರೆ. ಒಂದು ಲಿಂಕ್‌ ಕಳುಹಿಸಿದ್ದಾರೆ. ಆ ಲಿಂಕ್‌ ಕ್ಲಿಕ್‌ ಮಾಡಿದ ತಕ್ಷಣಕ್ಕೆ ಅವರನ್ನು ‘ಅಪೋಲೊ ಅಕಾಡೆಮಿ ಎಕ್ಸ್‌ಕ್ಲೂಸಿವ್‌ ವಿಐಪಿ 5544 ಸರ್ವೀಸ್‌’ ಎಂಬ ಗ್ರೂಪ್‌ಗೆ ಸೇರಿಸಿದ್ದಾರೆ.

ನಂತರ ದೇವರಾಜ್‌ ಹೆಸರಿನಲ್ಲಿ ಖಾತೆ ತೆರದು ಆಸಕ್ತಿ ಇದ್ದರೆ ಹಣ ಹೂಡಿಕೆ ಮಾಡುವಂತೆ ತಿಳಿಸಿ, ಬ್ಯಾಂಕ್‌ ಖಾತೆ ವಿವರ ಕಳುಹಿಸಿದ್ದಾರೆ. ಇದನ್ನು ನಂಬಿ ವಿವಿಧ ಬ್ಯಾಂಕ್‌ ಖಾತೆ, ಯುಪಿಐ ಐ.ಡಿಗಳಿಗೆ ಹಂತ ಹಂತವಾಗಿ ₹13,44,500 ವರ್ಗಾಯಿಸಿದ್ದಾರೆ. ಯಾವುದೇ ಹಣ ವಾಪಸ್‌ ಬಾರದಿರುವುದರಿಂದ ಅನುಮಾನಗೊಂಡು ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಇದೇ ರೀತಿಯಾಗಿ ಪಾವಗಡ ಪಟ್ಟಣದ ಕುವೆಂಪು ನಗರ ನಿವಾಸಿ ಶಾಂತೇಶ್‌ ತರಪೂರ್‌ ಎಂಬುವರಿಗೂ ₹9.50 ಲಕ್ಷ ವಂಚಿಸಲಾಗಿದೆ. ‘ಕೋಟಕ್‌ ಆನ್‌ಲೈನ್‌ ಟೀಚಿಂಗ್‌ ಇನ್‌ವೆಸ್ಟ್‌ಮೆಂಟ್‌’ ಎಂಬ ಗ್ರೂಪ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆಯಬಹುದು ಎಂದು ತಿಳಿಸಿದ್ದರು. ಇದನ್ನು ನಂಬಿದ ಶಾಂತೇಶ್‌ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.

ನಗರದ ಚಿಕ್ಕಪೇಟೆಯ ಆರ್‌.ವಿನಯ್‌ ಎಂಬುವರು ಸಹ ಸೈಬರ್‌ ಆರೋಪಿಗಳ ಬಲೆಗೆ ಬಿದ್ದು ₹6.41 ಲಕ್ಷ ಕಳೆದುಕೊಂಡಿದ್ದಾರೆ. ‘ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ, ಹೆಚ್ಚಿನ ಲಾಭ’ ಈ ಎರಡು ಅಂಶಗಳನ್ನು ಮುಂದಿಟ್ಟುಕೊಂಡು ಹಣ ಪೀಕಿದ್ದಾರೆ.

ಒಟಿಪಿ ನೀಡದಿದ್ದರೂ ₹2 ಲಕ್ಷ ಕಡಿತ:

ನಗರದ ಗಂಗೋತ್ರಿ ನಗರದ ಎನ್‌.ರಶ್ಮಿ ಎಂಬುವರು ಯಾವುದೇ ಒಟಿಪಿ ನೀಡದಿದ್ದರೂ ಅವರ ಬ್ಯಾಂಕ್ ಖಾತೆಯಿಂದ ₹2 ಲಕ್ಷ ಕಡಿತವಾಗಿದೆ. ಮೇ 7ರಂದು ಅವರ ಮೊಬೈಲ್‌ಗೆ ‘ಸಿಎಸ್‌–ಕಸ್ಟಮರ್‌ ಎಪಿಕೆ’ ‘ಕಸ್ಟಮರ್‌ ಸಪೋರ್ಟ್‌–1.0’ ಎಂಬ ಲಿಂಕ್‌ ಬಂದಿದೆ. ರಶ್ಮಿ ಕ್ಲಿಕ್‌ ಮಾಡಿ ‘ಎಪಿಕೆ ಫೈಲ್‌’ ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ಜೂನ್‌ 1 ಮತ್ತು 2ರಂದು ಅವರ ಗಮನಕ್ಕೆ ಬಾರದೆ ₹200499 ಹಣ ಬ್ಯಾಂಕ್‌ ಖಾತೆಯಿಂದ ಕಡಿತಗೊಂಡಿದೆ. ಈ ಕುರಿತು ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.