ತುಮಕೂರು: ‘ಶರಣು ಶರಣು ಜ್ಞಾನ ಗಂಗೆ, ಸಿದ್ಧಗಂಗೆ... ಉಘೇ ಉಘೇ ಶಿವಕುಮಾರ ಸ್ವಾಮೀಜಿ' ಎಂಬ ಹಂಸಲೇಖ ಅವರ ಹಾಡಿಗೆ ಸಿದ್ಧಗಂಗಾ ಮಠದ ನೂರಾರು ಮಕ್ಕಳು ಧ್ವನಿಗೂಡಿಸಿದರು.
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ 116ನೇ ಜಯಂತಿ ಮತ್ತು ಗುರುವಂದನಾ ಮಹೋತ್ಸವದ ಪ್ರಯುಕ್ತ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ದ್’ ಮಾಧ್ಯಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಶಿವಕುಮಾರ ಸ್ವಾಮೀಜಿ ಗಾನೋತ್ಸವ' ಸಂಗೀತ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾದರು.
ಖ್ಯಾತ ಗಾಯಕ ಹಂಸಲೇಖ ಅವರ ಹಾಡುಗಳಿಗೆ ನೆರೆದಿದ್ದ ಜನರೂ ಹೆಜ್ಜೆ ಹಾಕಿದರು. ಹಿನ್ನೆಲೆ ಗಾಯಕರಾದ ಕೆ.ಎಸ್. ಚಿತ್ರಾ,ಎಸ್.ಪಿ. ಚರಣ್, ಹೇಮಂತ್ ಕುಮಾರ್, ಪೃಥ್ವಿ, ಅನುರಾಧ ಭಟ್ ಅವರು ತಮ್ಮ ಇಂಪಾದ ಧ್ವನಿ ಮೂಲಕ ಕೇಳುಗರ ಮನ ತಣಿಸಿದರು.
ಮಠದ ಮಕ್ಕಳು, ಪ್ರೇಕ್ಷಕರು ಉತ್ಸಾಹದಿಂದ ಭಾಗವಹಿಸಿದ್ದರು. ಕುಳಿತುಕೊಳ್ಳಲು ಆಸನಗಳು ಸಿಗದೆ ಇದ್ದರೂ ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದರು.
'ಈ ಪಾದ ಪುಣ್ಯ ಪಾದ, ದಯೆ ತೋರುವ ದಿವ್ಯ ಪಾದ' ಎಂಬ ಗೀತೆಗೆ ಮಕ್ಕಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಲತಾ ಹಂಸಲೇಖ ಅವರ 'ಶ್ರೀ ಕ್ಷೇತ್ರ ಜಯಂತ್ಯುತ್ಸವ', ‘ದೇವರೇ, ಓ ದೇವರೇ, ನಡೆದಾಡುವ ದೇವರೇ...’ ಹಾಡಿಗೆ ಮಕ್ಕಳ ಚಪ್ಪಾಳೆ ಮೊಳಗಿದವು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಚಿತ್ರನಟ ಡಾಲಿ ಧನುಂಜಯ್ ಇತರರು ಉಪಸ್ಥಿತರಿದ್ದರು.
ಸ್ಮಾಮೀಜಿ ಸ್ಮರಣೆ: ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 116ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ನಾಡಿನ ವಿವಿಧೆಡೆಗಳಿಂದ ಬಂದಿದ್ದ ಜನರು ಸ್ವಾಮೀಜಿಯನ್ನು ಸ್ಮರಿಸಿದರು.
ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮುಂಜಾನೆ ಪೂಜೆ ಸಲ್ಲಿಸುವ ಮೂಲಕ ಜಯಂತ್ಯುತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಧಾರ್ಮಿಕ ವಿಧಿ ವಿಧಾನಗಳ ಜತೆ ಅಭಿಷೇಕ, ಅಷ್ಟೋತ್ತರ ನೆರವೇರಿದವು. ಭಜನೆ, ಮಂತ್ರ ಘೋಷಗಳು ಮೊಳಗಿದವು. ವಿವಿಧ ಸ್ವಾಮೀಜಿಗಳು ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ಅವಕಾಶ ಮಾಡಿಕೊಡಲಾಯಿತು.
ಸ್ವಾಮೀಜಿ ಕಂಚಿನ ಪುತ್ಥಳಿ ಹೊತ್ತ ರುದ್ರಾಕ್ಷಿ ಮಂಟಪದ ಮೆರವಣಿಗೆ ಮಠದ ಆವರಣದಲ್ಲಿ ನಡೆಯಿತು. ಮಠಕ್ಕೆ ಬಂದಿದ್ದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
116 ಮಕ್ಕಳಿಗೆ ನಾಮಕರಣ
ಸ್ವಾಮೀಜಿ 116ನೇ ಜಯಂತ್ಸುತ್ಸವದ ಅಂಗವಾಗಿ 116 ಮಕ್ಕಳಿಗೆ ‘ಶಿ’ ಅಕ್ಷರದಿಂದ ಪ್ರಾರಂಭವಾಗುವ ಹೆಸರು ಇಡಲಾಯಿತು. ಪ್ರತಿ ವರ್ಷವೂ ಮಕ್ಕಳಿಗೆ ‘ಶಿ’ ಅಕ್ಷರದ ನಾಮಕರಣ ಮಾಡುವ ಸಂಪ್ರದಾಯ ಪಾಲಿಸಲಾಗುತ್ತಿದೆ. ಕಳೆದ ವರ್ಷ 115 ಮಕ್ಕಳಿಗೆ ನಾಮಕರಣ ಮಾಡಲಾಗಿತ್ತು.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಪ್ರತಿ ವರ್ಷವೂ ರಾಜಕಾರಣಿಗಳು, ಅಧಿಕಾರಿಗಳು, ಗಣ್ಯರು ಭಾಗವಹಿಸುತ್ತಿದ್ದರು. ಈ ಬಾರಿ ರಾಜಕಾರಣಿಗಳು ಇತ್ತ ಸುಳಿಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.