ADVERTISEMENT

ವಿದ್ಯುತ್‌ ಕಾಣದ ‘ಗಂಗಾ ಕಲ್ಯಾಣ’; ಇಚ್ಛಾಶಕ್ತಿ ತೋರದ ಬೆಸ್ಕಾಂ

637 ಕೊಳವೆಬಾವಿಗೆ ವಿದ್ಯುತ್‌ ಸಂಪರ್ಕ ಇಲ್ಲ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 7:19 IST
Last Updated 18 ಅಕ್ಟೋಬರ್ 2024, 7:19 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಿಂದ ಕೊರೆಸಿದ ಕೊಳವೆ ಬಾವಿ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಿಂದ ಕೊರೆಸಿದ ಕೊಳವೆ ಬಾವಿ   

ತುಮಕೂರು: ಜಿಲ್ಲೆಯಲ್ಲಿ ‘ಗಂಗಾ ಕಲ್ಯಾಣ’ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ನಾಲ್ಕೈದು ವರ್ಷ ಕಳೆದರೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಬೋರ್‌ವೆಲ್‌ಗಾಗಿ ಖರೀದಿಸಿದ್ದ ಪೈಪ್‌ಗಳು ಮಳೆಗೆ ನೆನೆದು ತುಕ್ಕು ಹಿಡಿಯುತ್ತಿವೆ.

ಪ್ರತಿ ಬಾರಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಈ ವಿಚಾರ ಚರ್ಚೆಯಾಗುತ್ತದೆ. ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆ ಸಿಗುತ್ತದೆ. ಮತ್ತೆ ಅದೇ ಸ್ಥಿತಿ. ಮುಂದಿನ ಸಭೆಯಲ್ಲೂ ಚರ್ಚೆ, ಇಂತಹುದೇ ಭರವಸೆ ನೀಡಲಾಗುತ್ತದೆ. ಕೊಳವೆ ಬಾವಿ ಕೊರೆಸಿದ ರೈತರು ಮಾತ್ರ ವಿದ್ಯುತ್ ಸಂಪರ್ಕಕ್ಕಾಗಿ ಕಾಯುವುದು ತಪ್ಪಿಲ್ಲ.

ಡಾ.ಬಿ.ಆರ್‌.ಅಂಬೇಡ್ಕರ್‌, ಹಿಂದುಳಿದ ವರ್ಗ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಿಂದ ಕೊರೆಸಿದ ಕೊಳವೆ ಬಾವಿಗಳು ‘ಅನಾಥ’ವಾಗಿವೆ. ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ ಅರ್ಧಕ್ಕೆ ಬಿಟ್ಟಿದ್ದಾರೆ. ಪಂಪ್‌ಸೆಟ್‌ ಅಳವಡಿಸಿ ವಿದ್ಯುತ್‌ ಸರಬರಾಜು ಮಾಡುವ ಕಾರ್ಯ ತೆವಳುತ್ತಾ ಸಾಗಿದೆ. ಫಲಾನುಭವಿಗಳು ಹಲವು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೊಬ್ಬರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಗೋಜಿಗೆ ಹೋಗಿಲ್ಲ.

ADVERTISEMENT

ಬೆಸ್ಕಾಂ ಅಂಕಿ–ಅಂಶದ ಪ್ರಕಾರ ಜಿಲ್ಲೆಯಲ್ಲಿ 2020–21ನೇ ಸಾಲಿನಿಂದ 2024–25ರ ವರೆಗೆ 2,742 ಬೋರ್‌ವೆಲ್‌ಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ರೈತರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 2,105 ಕೊಳವೆ ಬಾವಿಗಳಿಗೆ ವಿದ್ಯುತ್‌ ಪೂರೈಕೆ ಮಾಡಲಾಗಿದೆ. ಇನ್ನೂ 637 ಬೋರ್‌ವೆಲ್‌ಗಳು ವಿದ್ಯುತ್‌ಗಾಗಿ ಕಾಯುತ್ತಿವೆ.

2 ವರ್ಷಗಳಿಂದ ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಈ ಬಾರಿ ಪರವಾಗಿಲ್ಲ ಎಂಬಂತೆ ಮಳೆ ಸುರಿದಿದೆ. ಕಳೆದ ವರ್ಷ ಸಂಪೂರ್ಣವಾಗಿ ಬರ ಆವರಿಸಿತ್ತು. ಇತ್ತ ಮಳೆ ಬಾರದೆ, ಮತ್ತೊಂದು ಕಡೆ ಬೋರ್‌ವೆಲ್‌ ಸುಸ್ಥಿತಿಯಲ್ಲಿ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಭಿವೃದ್ಧಿ ನಿಗಮ, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತ ಸಮೂಹ ಬಡವಾಗುತ್ತಿದೆ.

‘ಕೇವಲ ಕಂಬಗಳನ್ನು ಮಾತ್ರ ಹಾಕಿದ್ದಾರೆ. ತಂತಿ ಎಳೆದು ಕೊಟ್ಟು ವಿದ್ಯುತ್‌ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ನಿಗಮದಲ್ಲಿ ಕೇಳಿದರೆ ಬೆಸ್ಕಾಂನಲ್ಲಿ ವಿಚಾರಿಸಿ ಎನ್ನುತ್ತಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಇಂದು, ನಾಳೆ ಎಂದು ಸಬೂಬು ಹೇಳುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ಸಮಸ್ಯೆ ಬಗೆಹರಿಸಿ, ಅವರಿಗೆ ಕನಿಷ್ಠ ಸೌಲಭ್ಯ ಕಲ್ಪಿಸುತ್ತಿಲ್ಲ’ ಎಂದು ಮಾಯಸಂದ್ರದ ಮಂಜುನಾಥಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ನೂರಾರು ರೈತರು ಸರ್ಕಾರಿ ಕಚೇರಿಗೆ ಅಲೆದು ಚಪ್ಪಲಿ ಸವೆಸಿದ್ದಾರೆ. ಅಧಿಕಾರಿಗಳು ತಮ್ಮ ಜಡತ್ವ ಬಿಟ್ಟು ಕೆಲಸ ಮಾಡುತ್ತಿಲ್ಲ. ಅಗತ್ಯ ಇರುವ ಕಡೆ ವಿದ್ಯುತ್‌ ಕಂಬ, ತಂತಿ ಅಳವಡಿಸಿ ಬೋರ್‌ವೆಲ್‌ ಆರಂಭಕ್ಕೆ ಒತ್ತು ನೀಡಬೇಕಿದ್ದವರು ಕಚೇರಿಯಲ್ಲೇ ಉಳಿದಿದ್ದಾರೆ. ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಿದ್ದು, ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ವಿದ್ಯುತ್‌ ಸಂಪರ್ಕ ವಿಳಂಬವಾಗಲು ಇದು ಪ್ರಮುಖ ಕಾರಣ ಎಂದೂ ಆರೋಪಿಸಿದರು.

‘ಬೋರ್‌ವೆಲ್‌ ಕೊರೆಸಿ, ಪಂಪ್‌ಸೆಟ್‌ ಅಳವಡಿಸುವ ಕೆಲಸದ ಗುತ್ತಿಗೆ ಪಡೆದವರು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ರೈತರನ್ನು ಯಾಮಾರಿಸಿ, ತುಂಬಾ ಗೋಲ್‌ಮಾಲ್‌ ಮಾಡುತ್ತಿದ್ದಾರೆ. ಕಳಪೆ ಸಾಮಗ್ರಿ ಪೂರೈಸುತ್ತಿದ್ದು, ಪಂಪ್‌ಸೆಟ್‌ ಕೆಲವೇ ದಿನಗಳಿಗೆ ಕೈ ಕೊಡುತ್ತಿದೆ. ಅಧಿಕಾರಿಗಳು ಗುತ್ತಿಗೆ ನೀಡಿ, ಕಮಿಷನ್ ಪಡೆದುಕೊಂಡು ಸುಮ್ಮನಾಗುತ್ತಿದ್ದಾರೆ. ಹೇಗೆ ಕೆಲಸ ನಡೆಯುತ್ತಿದೆ ಎಂಬುವುದನ್ನು ಪರಿಶೀಲಿಸುತ್ತಿಲ್ಲ’ ಎಂಬ ಆರೋಪ ರೈತ ವಲಯದಿಂದ ಕೇಳಿ ಬರುತ್ತಿದೆ.

ಅರ್ಹರಿಗೆ ಸಿಗದ ಸೌಲಭ್ಯ

‘ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. ಜನಪ್ರತಿನಿಧಿಗಳಿಗೆ ಜೈಕಾರ ಹಾಕಿಕೊಂಡು ಅವರ ಹಿಂದೆ ಸುತ್ತುವವರು ಅಭಿವೃದ್ಧಿ ನಿಗಮದ ಸೌಲಭ್ಯ ಪಡೆಯುತ್ತಿದ್ದಾರೆ’ ಎಂದು ರೈತ ಮುಖಂಡರೊಬ್ಬರು ಆರೋಪಿಸಿದರು.

ಅಭಿವೃದ್ಧಿ ನಿಗಮದಲ್ಲಿ ಪ್ರತಿ ವರ್ಷ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತವೆ. ಹಣ ಕೊಟ್ಟವರು ರಾಜಕೀಯ ಪ್ರಾಬಲ್ಯ ಹೊಂದಿದವರಿಗೆ ಮಾತ್ರ ನೆರವು ಸಿಗುತ್ತಿದೆ. ಬಡವರು ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅರ್ಹರನ್ನು ಗುರುತಿಸಬೇಕಾದ ಜನಪ್ರತಿನಿಧಿಗಳೇ ಹಾದಿ ತಪ್ಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.