ADVERTISEMENT

ಉದ್ಯಾನಗಳೊ... ಕಸದ ತೊಟ್ಟಿಗಳೊ...

ತುಮಕೂರು ಮಹಾನಗರದ ಹಲವು ಬಡಾವಣೆಗಳಲ್ಲಿ ದುಸ್ಥಿತಿ

ರಾಮರಡ್ಡಿ ಅಳವಂಡಿ
Published 7 ಜುಲೈ 2019, 19:45 IST
Last Updated 7 ಜುಲೈ 2019, 19:45 IST
ಹಿರಿಯಣ್ಣಯ್ಯ
ಹಿರಿಯಣ್ಣಯ್ಯ   

ತುಮಕೂರು: ತುಮಕೂರು ಮಹಾನಗರ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಉದ್ಯಾನಗಳಿವೆ. ಇವುಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಾರ್ವಜನಿಕರಿಗೆ ಉಪಯುಕ್ತ! ಅನೇಕ ಉದ್ಯಾನಗಳು ನಾಗರಿಕರ ಪಾಲಿಗೆ ಇದ್ದೂ ಇಲ್ಲದಂತಾಗಿವೆ.

ಬಡಾವಣೆಗಳಲ್ಲಿ ಉದ್ಯಾನ ರೂಪಿಸುವಲ್ಲಿ ತೋರಿದ ಉತ್ಸಾಹ ಬಳಿಕ ನಿರ್ವಹಣೆಯ ಬಗ್ಗೆ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೂ ಇಲ್ಲ. ಸದಸ್ಯರಿಗೂ ಇಲ್ಲದಂತಾಗಿದೆ.

ಕೆಲವೇ ಕೆಲ ಒಂದಿಷ್ಟು ಬಡಾವಣೆಗಳಲ್ಲಿನ ಉದ್ಯಾನಗಳು ಅಲ್ಲಿನ ನಿವಾಸಿಗಳ ಒತ್ತಾಸೆ, ಪರಿಸರ ಪ್ರಿಯರ ಕಾಳಜಿಯಿಂದು ಉಳಿದಿವೆ. ಬಡಾವಣೆಯ ನಿವಾಸಿಗಳೇ ಅವುಗಳನ್ನು ಕಾವಲು ನಾಯಿಯಂತೆ ಕಾದು ಉಳಿಸಿಕೊಂಡಿದ್ದಾರೆ. ಮತ್ತೊಂದಿಷ್ಟು ಕಡೆ ಬಡಾವಣೆಗಳಲ್ಲಿ ಉದ್ಯಾನಗಳ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ.

ADVERTISEMENT

ಪಾಲಿಕೆಯವರಿಗೂ ಬೇಕಿಲ್ಲ. ವಾರ್ಡ್ ಸದಸ್ಯರು, ಅಲ್ಲಿನ ನಿವಾಸಿಗಳಿಗೂ ಬೇಕಾಗಿಲ್ಲ. ಕಸದ ತೊಟ್ಟಿಗಳಾಗಿ ಪರಿವರ್ತನೆಯಾಗುತ್ತಿವೆ. ಇನ್ನೂ ಕೆಲವು ಕಡೆ ಪುಂಡ ಪೋಕರಿಗಳ, ದುರ್ವ್ಯಸನಿಗಳ ತಾಣವಾಗುತ್ತಿವೆ. ಇಂತಹ ಉದ್ಯಾನ ಕಂಡ ಸಜ್ಜನರು ಅಯ್ಯೊ ಈ ಉದ್ಯಾನ ಯಾಕಾದರೂ ನಿರ್ಮಿಸಲಾಯಿತೊ? ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅನೇಕ ಕಡೆ ಒಂದು ವರ್ಷದ ಹಿಂದೆ ಇದ್ದ ಉದ್ಯಾನಗಳ ಗಾತ್ರ ಮತ್ತೊಂದು ವರ್ಷದ ವೇಳೆಗೆ ಕಡಿಮೆ ಆಗಿರುತ್ತದೆ. ಅಡ್ಡ, ಉದ್ದ, ಮೂಲೆ ಹೀಗೆ ಎಲ್ಲೆಂದರಲ್ಲಿ ಒತ್ತುವರಿದಾರರು ಹರಿದು ಹಂಚಿಕೊಂಡಿದ್ದಾರೆ.

ಮಹಾನಗರ ಪಾಲಿಕೆ ಹಾಕಿದ್ದ ‘ಉದ್ಯಾನ ಫಲಕ’ (ಬೋರ್ಡ್) ಕಳಚಿ ಬಿದ್ದಿವೆ. ಕೆಲವು ಕಡೆ ಮೂಲೆ ಸೇರಿವೆ. ಇನ್ನೂ ಕೆಲ ಕಡೆ ಕಬ್ಬಿಣದ ಗೇಟ್‌ಗಳೇ ಮುರಿದಿವೆ. ಕೆಲ ಕಡೆ ಬೇಲಿ ಹಾಕಿದ್ದು, ಕಸ, ಗಿಡಗಳು ಬೆಳೆದಿವೆ.

ದಿನ ಬೆಳಗಾದರೆ ಸ್ಮಾರ್ಟ್ ಸಿಟಿ ಕನಸು. ಆದರೆ, ಉದ್ಯಾನಗಳ ವಾಸ್ತವಿಕ ಈ ಅವ್ಯವಸ್ಥೆ ಕಂಡರೆ ಈ ನಗರ ಸ್ಮಾರ್ಟ್ ಸಿಟಿಯಾಗುವುದೇ ಎಂಬ ಬೇಸರ ಪ್ರಜ್ಞಾವಂತರನ್ನು ಕಾಡುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸಾವಿರಾರು ಕೋಟಿ ಅನುದಾನ ನಗರಕ್ಕೆ ಹರಿದು ಬರುತ್ತಿದೆ. ಈಗಾಗಲೇ ಕೆಲವು ಕಡೆ ಕಾಮಗಾರಿಗಳೂ ಪೂರ್ಣಗೊಂಡಿವೆ.

ಇನ್ನೂ ಕೆಲ ಕಡೆ ಪ್ರಗತಿಯಲ್ಲಿವೆ. ನಗರ ಅಂದವಾಗಿಸಿ, ಮೂಲ ಸೌಕರ್ಯ ಸೇರಿ ಅನೇಕ ಸೌಕರ್ಯ ಕಲ್ಪಿಸುವ ಈ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಅಷ್ಟೇ ತಾತ್ಸಾರ, ನಿರ್ವಹಣೆ ನಿರ್ಲಕ್ಷ್ಯ ತೋರಿದರೆ ಹೇಗೆ ಎಂದ ಕಳವಳವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.

ಒತ್ತುವರಿದಾರರ ಕಣ್ಣು: ನಗರದ ಹಲವು ಬಡಾವಣೆಗಳಲ್ಲಿ ಉದ್ಯಾನಗಳು ಒತ್ತುವರಿದಾರರ ಪಾಲಾಗುತ್ತಿವೆ. ಒತ್ತುವರಿ ಮಾಡುವವರು ಪ್ರಭಾವಿಗಳು. ಇವರು ಒತ್ತುವರಿ ಮಾಡಿದ್ದು, ವಾರ್ಡ್ ಸದಸ್ಯರಿಗೂ ಗೊತ್ತಾಗುವುದಿಲ್ಲ.

ಪಾಲಿಕೆ ಅಧಿಕಾರಿಗಳಿಗೂ ತಿಳಿಯುವುದಿಲ್ಲ. ಇಂತಹ ಉದ್ಯಾನಗಳ ಕಡೆ ಆ ಬಡಾವಣೆ ನಿವಾಸಿಗಳು, ಸಾರ್ವಜನಿಕರು ಸುಳಿಯಲೇಬಾರದು ಆ ರೀತಿಯ ವಾತಾವರಣ ಸೃಷ್ಟಿಸಲಾಗುತ್ತದೆ ಎಂದು ನಿವಾಸಿಗಳು ಉದ್ಯಾನಗಳ ನುಂಗುಬಾಕರ ಕೃತ್ಯಗಳನ್ನು ಬಿಚ್ಚಿಡುತ್ತಾರೆ.

ಬೆಳಿಗ್ಗೆ ಮತ್ತು ಸಂಜೆ, ವೃದ್ಧರು, ಮಹಿಳೆಯರು ಮತ್ತು ಮಕ್ಕಳ ವಾಯುವಿಹಾರಕ್ಕೆ ಅನುಕೂಲವಾಗುತ್ತಿತ್ತು. ಆದರೆ, ದಿನ ಕಳೆದಂತೆ ಗೊತ್ತು ಗುರಿಯಲ್ಲದ, ಬಡಾವಣೆಗೆ ಸಂಬಂಧವೇ ಇಲ್ಲದ ಯಾರ್‍ಯಾರೊ ಬಂದು ಹಾಳು ಮಾಡುತ್ತಿದ್ದಾರೆ. ಕಸ ತಂದು ಸುರಿಯುತ್ತಾರೆ. ಮದ್ಯದ ಬಾಟಲಿ, ಸತ್ತ ನಾಯಿ, ಬೆಕ್ಕುಗಳನ್ನು ತಂದು ಹಾಕುತ್ತಾರೆ. ಇದನ್ನು ಕಂಡು ಕಂಡು ಹೇಗೆ ಉದ್ಯಾನಕ್ಕೆ ಜನ ಹೋಗುತ್ತಾರೆ ಎಂದು ಜಯನಗರದ ನಿವಾಸಿ ಉಮಾ ಸಮಸ್ಯೆ ವಿವರಿಸುತ್ತಾರೆ.

ವ್ಯವಸ್ಥಿತ ತಂತ್ರ: ಚರಂಡಿ, ರಸ್ತೆ, ಕಟ್ಟಡ ನಿರ್ಮಾಣಕ್ಕೆ ತೋರುವ ಆಸಕ್ತಿಯನ್ನು ಪಾಲಿಕೆಯ ಕೆಲ ಸದಸ್ಯರು, ಕೆಲ ಅಧಿಕಾರಿಗಳು ಉದ್ಯಾನಗಳ ಅಭಿವೃದ್ಧಿಗೆ ತೋರುವುದಿಲ್ಲ. ಬಡಾವಣೆ ಜನ ದುಂಬಾಲು ಬಿದ್ದು, ಉದ್ಯಾನ ರಕ್ಷಣೆ ಮಾಡಿ ಎಂದು ಹೇಳಿದರೂ ಸ್ಪಂದಿಸುವುದಿಲ್ಲ. ಉದ್ಯಾನ ನಿರ್ಮಾಣ ಸಮಯದಲ್ಲಿ ಬೇಲಿ, ಬೆಂಚು ಹಾಕಿಸಿದ ಬಳಿಕ ನಿರ್ವಹಣೆಯೇ ಮರೆತು ಹೋಗುತ್ತದೆ ಎಂದು ಜನ ಆರೋಪಿಸುತ್ತಾರೆ.

ಹೇಳುವುದೊಂದು... ಮಾಡುವುದೊಂದು...: ಪಾಲಿಕೆಯು ಪರಿಸರ ಸಂರಕ್ಷಣೆ, ಉದ್ಯಾನ ಒತ್ತುವರಿ ತೆರವು ಮಾಡುತ್ತೇವೆ, ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿಕೊಂಡು ಬರುತ್ತಲೇ ಇದೆ.

ಎರಡು ವರ್ಷಗಳ ಹಿಂದೆ ಪ್ರತಿ ವಾರ ಒಂದೊಂದು ಬಡಾವಣೆಯಲ್ಲಿನ ಒತ್ತುವರಿಯಾದ ಉದ್ಯಾನ ತೆರವು ಕಾರ್ಯಾಚರಣೆಗೆ ಮಹಾನಗರ ಪಾಲಿಕೆ ನಿರ್ಣಯವನ್ನೇ ಕೈಗೊಂಡಿತ್ತು. ಆದರೆ, ಯಾವ ಉದ್ಯಾನ ಒತ್ತುವರಿ ತಡೆದರೊ ಗೊತ್ತಿಲ್ಲ. ಆದರೆ, ಎರಡು ವರ್ಷದ ಹಿಂದೆ ಇದ್ದ ಉದ್ಯಾನಗಳು ಒತ್ತುವರಿಯಾಗುತ್ತಲೇ ಇವೆ.

ಅಂಕಿ ಅಂಶಗಳು

520 - ಪಾಲಿಕೆ ಗುರುತಿಸಲ್ಪಟ್ಟ ಉದ್ಯಾನಗಳು

35 - ಅಭಿವೃದ್ಧಿಪಡಿಸಿದ ಉದ್ಯಾನಗಳು

13 - ಸಾರ್ವಜನಿಕರಿಂದ ಒತ್ತುವರಿ ಉದ್ಯಾನಗಳು

109 - ಒತ್ತುವರಿಯಾದ ಉದ್ಯಾನಗಳು

54 - ಒತ್ತುವರಿ ತೆರವು ಬಾಕಿ ಇರುವ ಉದ್ಯಾನಗಳು

55 - ದೇವಸ್ಥಾನಗಳಿಗೆ ಹೆಚ್ಚು ಉದ್ಯಾನ ಒತ್ತುವರಿ!

**

5 ಉದ್ಯಾನಗಳಲ್ಲಿ ನೀರಿನ ಟ್ಯಾಂಕ್, ಪಂಪ್‌ ಹೌಸ್‌ಗೆ, 3 ಉದ್ಯಾನಗಳಲ್ಲಿ ಪೊಲೀಸ್ ಸ್ಟೇಷನ್, ದೊಡ್ಡ ಚರಂಡಿ, ಸೇವಾ ಆಸ್ಪತ್ರೆಗೆ, 7 ಉದ್ಯಾನಗಳಲ್ಲಿ ಸಮುದಾಯಭವನ, ಅಂಗನವಾಡಿ ಕೇಂದ್ರ, 19 ಉದ್ಯಾನಗಳಲ್ಲಿ ದೇವಸ್ಥಾನ, 5 ಉದ್ಯಾನಗಳಲ್ಲಿ ಪ್ರಾಥಮಿಕ ಶಾಲೆ ಮತ್ತು ಶೌಚಾಲಯ, 3 ಉದ್ಯಾನಗಳಲ್ಲಿ ರಸ್ತೆ, 13 ಉದ್ಯಾನಗಳಲ್ಲಿ ಸಾರ್ವಜನಿಕ ಒತ್ತುವರಿ ಸೇರಿದಂತೆ ಒಟ್ಟು 55 ಉದ್ಯಾನಗಳನ್ನು ಒತ್ತುವರಿ ಮಾಡಲಾಗಿದೆ. 13 ಖಾಸಗಿ ಒತ್ತುವರಿ ಪ್ರಕರಣಗಳಲ್ಲಿ ಕೆಲವು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಪಾಲಿಕೆ ಮೂಲಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.