ADVERTISEMENT

ಮಾರುಕಟ್ಟೆ ವಿಶ್ಲೇಷಣೆ | ಬೆಳ್ಳುಳ್ಳಿ ಮತ್ತಷ್ಟು ದುಬಾರಿ; ತರಕಾರಿ ಏರಿಕೆ

ಏರಿಕೆಯತ್ತ ಎಣ್ಣೆ; ಸೊಪ್ಪು, ಬೇಳೆ, ಧಾನ್ಯವೂ ಹೆಚ್ಚಳ; ಕೋಳಿಯೂ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:30 IST
Last Updated 20 ಅಕ್ಟೋಬರ್ 2024, 7:30 IST
ಬೆಳ್ಳುಳ್ಳಿ
ಬೆಳ್ಳುಳ್ಳಿ   

ತುಮಕೂರು: ಈ ವಾರ ಬೆಳ್ಳುಳ್ಳಿ ಸಾಕಷ್ಟು ದುಬಾರಿಯಾಗಿದ್ದು, ಅಡುಗೆ ಎಣ್ಣೆಯೂ ಅದೇ ದಾರಿಯಲ್ಲಿ ಸಾಗಿದೆ. ತರಕಾರಿ, ಸೊಪ್ಪು, ಧಾನ್ಯ, ಬೇಳೆ, ಕೋಳಿ ಮಾಂಸವೂ ಏರಿಕೆ ಕಂಡಿದೆ.

ಬೆಳ್ಳುಳ್ಳಿ ಗಗನಮುಖಿ: ತೀವ್ರವಾಗಿ ಏರಿಕೆ ಕಂಡು ನಂತರ ಇಳಿಕೆಯತ್ತ ಸಾಗಿದ್ದ ಬೆಳ್ಳುಳ್ಳಿ ಮತ್ತೆ ಗಗನಮುಖಿಯಾಗಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹350–400ಕ್ಕೆ ಜಿಗಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ಜನರು ಬೆಳ್ಳುಳ್ಳಿ ಕೊಳ್ಳುವುದನ್ನೇ ಬಿಟ್ಟಿದ್ದಾರೆ. ಆಹಾರದಲ್ಲಿ ಬಳಕೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಸಾಮಾನ್ಯ ಜನರು ಕೊಳ್ಳಲಾಗದ ಸ್ಥಿತಿಗೆ ತಲುಪಿದೆ.

ತರಕಾರಿ ಹೆಚ್ಚಳ: ಸತತ ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿ ಆವಕ ಕಡಿಮೆಯಾಗಿದ್ದು, ಬೆಲೆ ದುಬಾರಿಯಾಗಿದೆ. ಬಹುತೇಕ ತರಕಾರಿಗಳ ದರ ಹೆಚ್ಚಳವಾಗಿದೆ. ಈರುಳ್ಳಿ ಮತ್ತೆ ಏರಿಕೆಯಾಗಿದ್ದು, ಕೆ.ಜಿ ₹50–60ಕ್ಕೆ ತಲುಪಿದೆ. ಕ್ಯಾರೇಟ್, ಬೀಟ್ರೂಟ್, ಬೆಂಡೆಕಾಯಿ, ಬದನೆಕಾಯಿ, ಎಲೆಕೋಸು, ಹೂ ಕೋಸು, ತೊಂಡೆಕಾಯಿ, ನಗ್ಗೇಕಾಯಿ ಕೆ.ಜಿಗೆ ₹5ರಿಂದ ₹10ರ ವರೆಗೆ ಏರಿಕೆಯಾಗಿದೆ. ಬೀನ್ಸ್ ಧಾರಣೆ ಅಲ್ಪ ಇಳಿದಿದ್ದರೂ ಕೆ.ಜಿ ₹70–80ರ ಆಸುಪಾಸಿನಲ್ಲಿದೆ. ಟೊಮೆಟೊ ಸಹ ಕೆ.ಜಿಗೆ ₹10 ಕಡಿಮೆಯಾಗಿದ್ದರೂ ಕೆ.ಜಿ ₹50–60ಕ್ಕೆ ಮಾರಾಟವಾಗುತ್ತಿದೆ. ಹಸಿರು ಮೆಣಸಿನಕಾಯಿ, ಸೌತೆಕಾಯಿ ದರ ಕಡಿಮೆಯಾಗಿದ್ದು, ನಿಂಬೆಹಣ್ಣು ಹೆಚ್ಚಳವಾಗಿದೆ.

ADVERTISEMENT

ಏರಿಕೆಯತ್ತ ಸೊಪ್ಪು: ಕಳೆದ ಕೆಲ ವಾರಗಳಿಂದ ತೀವ್ರವಾಗಿ ಕುಸಿತ ಕಂಡಿದ್ದ ಸೊಪ್ಪು ಈಗ ಬೇಡಿಕೆ ಕಂಡುಕೊಂಡಿದ್ದು, ಮೆಂತ್ಯ ಸೊಪ್ಪು ಒಮ್ಮೆಲೆ ದುಪ್ಪಟ್ಟಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹60–70, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಏರಿಕೆಯಾಗಿದೆ. ಮಳೆಯಿಂದಾಗಿ ಆವಕ ತಗ್ಗಿದ್ದು, ಬೆಲೆ ಏರುವಂತೆ ಮಾಡಿದೆ.

ಮೂಸಂಬಿ ಏರಿಕೆ: ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಮೂಸಂಬಿ ಕೆ.ಜಿಗೆ ₹40 ಹೆಚ್ಚಳವಾಗಿದ್ದು, ಡ್ರಾಗನ್ ಫ್ರೂಟ್ ಕೆ.ಜಿಗೆ 50, ಕರಬೂಜ ₹20 ಇಳಿಕೆಯಾಗಿದೆ.

ಅಡುಗೆ ಎಣ್ಣೆ ಮತ್ತೆ ದುಬಾರಿ: ಗಗನಮುಖಿಯಾಗಿರುವ ಅಡುಗೆ ಎಣ್ಣೆ ಈ ವಾರವೂ ಏರಿಕೆ ದಾಖಲಿಸಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹130–132, ಪಾಮಾಯಿಲ್ ಕೆ.ಜಿ ₹120–122, ಕಡಲೆಕಾಯಿ ಎಣ್ಣೆ ಕೆ.ಜಿ ₹165–175ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬಟಾಣಿ ಹೆಚ್ಚಳ: ಈ ವಾರ ಬೇಳೆ, ಧಾನ್ಯಗಳ ಧಾರಣೆಯೂ ಹೆಚ್ಚಳವಾಗಿದೆ. ಬಟಾಣಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದು, ಕೆ.ಜಿ ₹185–190ಕ್ಕೆ ಮುಟ್ಟಿದೆ. ತೊಗರಿ ಬೇಳೆ ಕೆ.ಜಿಗೆ ₹10 ಕಡಿಮೆಯಾಗಿದ್ದರೆ, ಕಡಲೆ ಬೇಳೆ, ಉದ್ದಿನ ಬೇಳೆ, ಅಲಸಂದೆ, ಅವರೆಕಾಳು, ಹುರಿಗಡಲೆ ಏರಿಕೆಯಾಗಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಮೆಣಸು, ಬ್ಯಾಡಗಿ ಮೆಣಸಿನಕಾಯಿ, ಬೆಲ್ಲ ಕೊಂಚ ಕಡಿಮೆಯಾಗಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–250, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹170–180, ಹುಣಸೆಹಣ್ಣು ₹120–160, ಬೆಲ್ಲ ಕೆ.ಜಿ ₹48–55, ಕಾಳುಮೆಣಸು ಕೆ.ಜಿ ₹680–700, ಜೀರಿಗೆ ಕೆ.ಜಿ ₹310–320, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹780–850, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಏಲಕ್ಕಿ ಕೆ.ಜಿ ₹2,500–2,700, ಬಾದಾಮಿ ಕೆ.ಜಿ ₹680–720, ಗೋಡಂಬಿ ಕೆ.ಜಿ ₹850–950, ಒಣದ್ರಾಕ್ಷಿ ಕೆ.ಜಿ ₹190–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಅಲ್ಪ ಏರಿಕೆ: ಈ ವಾರ ಕೋಳಿ ಮಾಂಸದ ಬೆಲೆ ಅಲ್ಪ ಏರಿಕೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹140, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆಕೋಳಿ (ಫಾರಂ) ಕೆ.ಜಿ ₹130ಕ್ಕೆ ಸಿಗುತ್ತಿದೆ.

ಮೀನು: ಮೀನಿನ ಧಾರಣೆಯೂ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ಬಂಗುಡೆ ಕೆ.ಜಿ ₹200, ಬೂತಾಯಿ ಕೆ.ಜಿ ₹250, ಬೊಳಿಂಜರ್ ಕೆ.ಜಿ ₹210, ಅಂಜಲ್ ಕೆ.ಜಿ ₹910, ಕಪ್ಪುಮಾಂಜಿ ಕೆ.ಜಿ ₹680, ಇಂಡಿಯನ್ ಸಾಲ್ಮನ್ ಕೆ.ಜಿ ₹1,000, ಸೀಗಡಿ ಕೆ.ಜಿ ₹480ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.