ಗುಬ್ಬಿ(ತುಮಕೂರು): ಸಿ.ಎಸ್.ಪುರ ಹೋಬಳಿ ಇಡಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣ ಗೋಡೆ ನಿರ್ಮಾಣಕ್ಕಾಗಿ ತಂದಿದ್ದ ಕಲ್ಲುಗಳ ನಡುವಿದ್ದ ಜೆಲೆಟಿನ್ ಕಡ್ಡಿ ಬುಧವಾರ ಸ್ಫೋಟಗೊಂಡು ವಿದ್ಯಾರ್ಥಿಯೊಬ್ಬನ ಕೈ ಬೆರಳುಗಳು ತುಂಡಾಗಿವೆ.
ಶಾಲೆಯ 10ನೇ ತರಗತಿ ವಿದ್ಯಾರ್ಥಿ ಮೋನಿಶ್ ಗೌಡ (15) ಬಲಗೈನ ಮೂರು ಬೆರಳು ಛಿದ್ರಗೊಂಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಆತನನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ನರೇಗಾ ಕಾಮಗಾರಿ ಅಡಿ ಶಾಲೆಯ ಕಾಂಪೌಂಡ್ ನಿರ್ಮಿಸಲು ಕಲ್ಲುಗಳನ್ನು ತಂದು ಶಾಲೆ ಬಳಿ ಸುರಿಯಲಾಗಿತ್ತು. ಕಲ್ಲುಗಳ ರಾಶಿ ನಡುವೆ ಬಿದ್ದಿದ್ದ ವೈರ್ ಜೋಡಿಸಲಾಗಿದ್ದ ಜೆಲೆಟಿನ್ ಕಡ್ಡಿಯನ್ನು ಮೋನಿಶ್ ಕುತೂಹಲದಿಂದ ಎತ್ತಿಕೊಂಡಿದ್ದ.
ಶಾಲೆ ಒಳಗೆ ಕೊಂಡೊಯ್ಯುತ್ತಿದ್ದಾಗ ಕೈ ಬಿಸಿಯಾದ ಅನುಭವಕ್ಕೆ ಬಂದ ತಕ್ಷಣ ಅದನ್ನು ಶಾಲೆಯ ಮೈದಾನದಲ್ಲಿ ಎಸೆದಿದ್ದಾನೆ. ಅಷ್ಟರಲ್ಲಿ ಕೈಯಲ್ಲಿಯೇ ಜಿಲೆಟಿನ್ ಕಡ್ಡಿ ಸ್ಫೋಟಗೊಂಡು ವಿದ್ಯಾರ್ಥಿಯ ಕೈ ಬೆರಳುಗಳು ತುಂಡಾಗಿವೆ.
ಸ್ಫೋಟದ ಶಬ್ದ ಸುತ್ತಲಿನ ಒಂದು ಕಿ.ಮೀ. ವ್ಯಾಪ್ತಿವರೆಗೂ ಕೇಳಿಸಿದ್ದು, ಶಬ್ದಕ್ಕೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ತಂಡ ಕಲ್ಲುಗಳ ನಡುವೆ ಇದ್ದ ಮತ್ತಷ್ಟು ಜಿಲೆಟಿನ್ ಕಡ್ಡಿಗಳನ್ನು ನಿಷ್ಕ್ರಿಯಗೊಳಿಸಿತು.
ಶಾಲೆಗೆ ದಸರಾ ರಜೆ ಇದ್ದರೂ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಇದ್ದ ಕಾರಣ ಆ ತರಗತಿ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಈ ಘಟನೆಯ ನಂತರ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಸಿಪಿಐ ಗೋಪಿನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಸಂತ್ರಸ್ತ ಬಾಲಕನ ತಾಯಿ ಸಿ.ಎಸ್. ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜಿಲೆಟಿನ್ ಕಡ್ಡಿ ಸ್ಫೋಟಕ ವಸ್ತು ಎಂಬ ಅರಿವು ಇಲ್ಲದ ಕಾರಣ ವಿದ್ಯಾರ್ಥಿ ಕುತೂಹಲದಿಂದ ಎತ್ತಿಕೊಂಡಿದ್ದ. ತರಗತಿಗೆ ಕೊಂಡೊಯ್ಯುವ ವೇಳೆ ಕೈಬಿಸಿಯಾದ ಕಾರಣ ಶಾಲೆಯ ಮೈದಾನದಲ್ಲಿಯೇ ಎಸೆದಿದ್ದಾನೆ. ಒಂದು ವೇಳೆ ಶಾಲೆಯೊಳಗೆ ಕೊಂಡೊಯ್ದಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ ಈ ಘಟನೆ ನಡೆದಿದೆ. ಸಂಬಂಧಿಸಿದವರು ಬಾಲಕನಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.