ADVERTISEMENT

ಕುಣಿಗಲ್: ದುರಸ್ತಿಗೆ ಕಾಯುತ್ತಿವೆ ಸರ್ಕಾರಿ ಶಾಲೆಗಳು

ನಿರ್ವಹಣೆ ಕೊರತೆ: ಅಧೋಗತಿಗೆ ಕಟ್ಟಡ

ಟಿ.ಎಚ್.ಗುರುಚರಣ್ ಸಿಂಗ್
Published 25 ಜೂನ್ 2024, 6:07 IST
Last Updated 25 ಜೂನ್ 2024, 6:07 IST
<div class="paragraphs"><p>ಕುಣಿಗಲ್ ಪಟ್ಟಣದ ಮಲ್ಲಿಪಾಳ್ಯದಲ್ಲಿ ಶಿಥಿಲವಾಗಿ ಕಿಟಕಿಗಳಿಲ್ಲದ ಸರ್ಕಾರಿ ಶಾಲೆ ಮಳೆಗೆ ಸೋರುತ್ತಿದೆ</p></div>

ಕುಣಿಗಲ್ ಪಟ್ಟಣದ ಮಲ್ಲಿಪಾಳ್ಯದಲ್ಲಿ ಶಿಥಿಲವಾಗಿ ಕಿಟಕಿಗಳಿಲ್ಲದ ಸರ್ಕಾರಿ ಶಾಲೆ ಮಳೆಗೆ ಸೋರುತ್ತಿದೆ

   

ಕುಣಿಗಲ್ : ವ್ಯವಸ್ಥಿತ ನಿರ್ವಹಣೆ, ಸಕಾಲದಲ್ಲಿ ದುರಸ್ತಿಗೆ ಕ್ರಮ ತೆಗೆದುಕೊಳ್ಳದ ಕಾರಣ ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದರೆ, ಮತ್ತೆ ಹಲವು ಶಾಲಾ ಕೊಠಡಿಗಳ ಚಾವಣಿಗಳಲ್ಲಿ ಬಿರುಕು ಮೂಡಿ ಸೋರುವ ಸ್ಥಿತಿಗೆ ತಲುಪಿದೆ.

ಶಾಲಾ ಶಿಕ್ಷಣ ಇಲಾಖೆಯ ದಾಖಲೆಗಳ ಪ್ರಕಾರ ತಾಲ್ಲೂಕಿನಲ್ಲಿ 115 ಸರ್ಕಾರಿ ಕಿರಿಯ, 216 ಹಿರಿಯ ಮತ್ತು 30 ಸರ್ಕಾರಿ ಫ್ರೌಢಶಾಲೆಗಳಿವೆ. 13,500 ವಿದ್ಯಾರ್ಥಿಗಳಿದ್ದಾರೆ. 75 ಶಾಲಾಕೊಠಡಿ ದುರಸ್ತಿಯಾಗಬೇಕಾಗಿದೆ. 84 ಶಾಲಾ ಕೊಠಡಿಗಳು ಶಿಥಿಲವಾಗಿದ್ದು ನೆಲಸಮಗೊಳಿಸಬೇಕಾಗಿದೆ. 21 ಹೊಸ ಕೊಠಡಿಗಳು ಅಗತ್ಯವಿದೆ. 125 ಶಾಲಾ ಕೊಠಡಿಗಳಿಗೆ ಸುಣ್ಣ ಬಣ್ಣದ ಅಗತ್ಯವಿದೆ. 25 ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, 15 ಶಾಲೆಗಳಿಗೆ ಅಡುಗೆ ಕೋಣೆ, 26 ಶಾಲೆಗಳಿಗೆ ಆವರಣ ಗೋಡೆ ಬೇಕಾಗಿದೆ.

ADVERTISEMENT

ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಶಾಲೆಗಳ ಪ್ರಗತಿಯ ದೃಷ್ಟಿಯಿಂದ ನಿರ್ಣಯ ತೆಗೆದುಕೊಳ್ಳಬೇಕಾದ ಜನಪ್ರತಿನಿಧಿ ಮತ್ತು ಅಧಿಕಾರಿಗಳು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಶಾಲೆ ಮತ್ತು ಭವಿಷ್ಯದಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಇರುವ ಶಾಲೆಗಳಿಗೆ ಅಗತ್ಯವಾದ ಕೊಠಡಿ ಮತ್ತು ಸೌಲಭ್ಯ ಒದಗಿಸುವಲ್ಲಿ ದೂರದೃಷ್ಟಿ ಇಲ್ಲದ ಕಾರಣ ಎಲ್ಲೆಂದರಲ್ಲಿ ಶಾಲಾ ಕೊಠಡಿ ನಿರ್ಮಾಣವಾಗುತ್ತಿದೆ. ಶಾಲಾ ಕೊಠಡಿ, ಶೌಚಾಲಯ ನಿರ್ಮಾಣವಾಗಿರುವ ಕಡಿಮೆ ಸಂಖ್ಯೆಯ ಶಾಲೆಗಳು ಮುಚ್ಚುತ್ತಿರುವ ಕಾರಣ ಅಸಮತೋಲನ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಉಜ್ಜನಿ, ಬೋರಲಿಂಗಪಾಳ್ಯ ಶಾಲಾ ಕೊಠಡಿಗಳು ಶಿಥಿಲವಾಗಿದೆ. ಆತಂಕಗೊಂಡ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ನಿರಾಕರಿಸುತ್ತಿದ್ದಾರೆ. ಹತ್ತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಉಜ್ಜನಿಯ ಚನ್ನೆಗೌಡ, ದೇವರಾಜು, ಬೋರಲಿಂಗನಪಾಳ್ಯ ಕುಮಾರ್ ದೂರಿದರು.

ತಾಲ್ಲೂಕು ಕೇಂದ್ರ ಸ್ಥಾನದಲ್ಲಿರುವ ಮಹಾತ್ಮಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ 1950ರಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಒಟ್ಟು 15 ಕೊಠಡಿಗಳಿದೆ. ಎಲ್ಲವೂ ಶಿಥಿಲವಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲದಿದ್ದರೂ ಕೆಲವು ತರಗತಿಗಳನ್ನು ಮಾತ್ರ ನಡೆಸಲಾಗುತ್ತಿದೆ. ಹೊಸದಾಗಿ 18 ಕೊಠಡಿಗಳು ನಿರ್ಮಾಣವಾಗಿದ್ದು ದಾನಿಗಳ ನೆರವಿನಿಂದ ಕೆಲ ಕೊಠಡಿಗಳ ದುರಸ್ತಿ ಕೈಗೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ ತಿಳಿಸಿದರು. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೆಲ ಕೊಠಡಿಗಳು ಸೋರುತ್ತಿದ್ದು, ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ.

ಕುಣಿಗಲ್ ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಶಿಥಿಲವಾದ ಕೊಠಡಿಯಲ್ಲಿ ವಿದ್ಯಾರ್ಥಿಗಳು

ಪಟ್ಟಣದ ಮಲ್ಲಿಪಾಳ್ಯದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಹೆಂಚಿನ ಕೊಠಡಿಗಳನ್ನು ನಿರ್ಮಾಣಮಾಡಿ 40 ವರ್ಷಗಳು ಕಳೆದಿದ್ದರೂ ದುರಸ್ತಿಗೆ ಕ್ರಮ ತೆಗೆದುಕೊಳ್ಳದ ಕಾರಣ ಹೆಂಚುಗಳು ಒಡೆದು ಮಳೆ ನೀರು ಸೋರಿ ಅವ್ಯವಸ್ಥೆ ಉಂಟಾಗುತ್ತಿದೆ. ಶಾಲೆಯ ಕಿಟಕಿ ಮಾಯವಾಗಿದ್ದು, ದುರಸ್ತಿ ಅಥವಾ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ ಎಂದು ಪುರಸಭೆ ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಕೋಟೆ ಪ್ರದೇಶದ ಶಾಲೆ ಶಿಥಿಲವಾಗಿ ಹತ್ತು ವರ್ಷ ಕಳೆದಿದ್ದರೂ, ತೆರವಿಗಾಗಿ ಮನವಿ ಮಾಡಿದ್ದರೂ ತೆರವುಗೊಳಿಸಿಲ್ಲ. ಆಟದ ಮೈದಾನದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಿ ಆಟಕ್ಕೆ ಮೈದಾನವಿಲ್ಲದಂತೆ ಮಾಡಿದ್ದಾರೆ ಎಂದು ವೆಂಕಟೇಶ್ ದೂರಿದರು.

ಶಾಲಾ ಕೊಠಡಿಗಳ ನಿರ್ವಹಣೆ ಮತ್ತು ನಿರ್ಮಾಣಕ್ಕಾಗಿ ತಾಲ್ಲೂಕು ಮಟ್ಟದ ಅಧಿಕಾರಿ ಮತ್ತು ಜನಪ್ರತಿನಿಧಿಗಳ ತಂಡ ರಚನೆಯಾಗಿ ಪರಿಶೀಲನೆ ನಡೆಸಿ ಅಗತ್ಯವಿರುವ ಕಡೆ ಮಾತ್ರ ನಿರ್ಮಾಣ, ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಕೆ.ಟಿ.ರಮೇಶ್ ಹೇಳಿದರು.

ಕುಣಿಗಲ್ ತಾಲ್ಲೂಕು ಉಜ್ಜನಿ ಗ್ರಾಮದ ಸರ್ಕಾರಿ ಶಾಲೆ ಶಿಥಿಲವಾಗಿರುವುದು

ದಾನಿಗಳ ನೆರವಿನಿಂದ ದುರಸ್ತಿ

ಅಮೃತೂರಿನ ಕೆಪಿಎಸ್ ಶಾಲೆ, ಪಟ್ಟಣದ ಜಿಕೆಬಿಎಂಎಸ್, ದೊಡ್ಡಪೇಟೆ ಶಾಲೆ, ಮಹಾತ್ಮಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಕಟ್ಟಡ ದುರಸ್ತಿ ಮಾಡಲಾಗುತ್ತಿದೆ. ಜತೆಗೆ ಸರ್ಕಾರ್ ವಿವೇಕ ಯೋಜನೆಯ 20 ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಶಿಥಿಲವಾಗಿರುವ ಶಾಲೆಗಳ ತೆರವಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ

ನಿರ್ಮಾಣವಾಗದ ಶೌಚಾಲಯ

ತಾಲ್ಲೂಕಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ₹2.60 ಲಕ್ಷ ಅನುದಾನದ ಜತೆಗೆ ನರೇಗಾ ಯೋಜನೆಯ ₹2.60 ಲಕ್ಷ ಅನುದಾನದಲ್ಲಿ 50 ಶಾಲಾ ಶೌಚಾಲಯಗಳು ನಿರ್ಮಾಣವಾಗಬೇಕಾಗಿದೆ. ಕಳೆದ ಮೂರು ವರ್ಷಗಳಿಂದ ಇಲಾಖೆ ಪಾಲಿನ ಅನುದಾನ ನೀಡಿದ್ದರೂ ಶೌಚಾಲಯ ಇನ್ನೂ ನಿರ್ಮಾಣವಾಗಿಲ್ಲ.

ತಾಲ್ಲೂಕಿನಲ್ಲಿ ಕಳೆದ ಹತ್ತು ವರ್ಷದಲ್ಲಿ ನೂರು ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾದ ಕಾರಣ ಶಾಲಾ ಕೊಠಡಿಗಳು ಬಳಕೆಯಾಗದೆ ಶಿಥಿಲವಾಗಿದೆ. ಗ್ರಾಮೀಣ ಪ್ರದೇಶದ ಶಾಲೆಗಳಿಗಾಗಿ ಜಮೀನುಗಳನ್ನು ದಾನವಾಗಿ ನೀಡಿದ್ದು, ಸಮರ್ಪಕ ದಾನಪತ್ರ ಪಡೆದು ದಾಖಲೆ ನಿರ್ವಹಿಸದ ಕಾರಣ ಅನೇಕ ಶಾಲೆಗಳ ದಾನಿಗಳ ಕುಟುಂಬದವರು ಶಾಲೆಗೆ ನೀಡಿದ ಜಮೀನು ವಾಪಸ್‌ ಪಡೆದುಕೊಳ್ಳುತ್ತಿರುವುದರಿಂದ ಸಮಸ್ಯೆ ಉದ್ಬವವಾಗುತ್ತಿದೆ.

ಶಿಥಿಲವಾಗಿರುವ ಬೋರಲಿಂಗನಪಾಳ್ಯ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.