ADVERTISEMENT

ತುಮಕೂರು: ರಂಗೇರಿದ ನೌಕರರ ಸಂಘದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 5:26 IST
Last Updated 22 ಅಕ್ಟೋಬರ್ 2024, 5:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಈ ಬಾರಿ ಸರ್ಕಾರಿ ನೌಕರರ ಸಂಘದ ಚುನಾವಣೆ ಸಾಕಷ್ಟು ರಂಗೇರಿದ್ದು, ಸಾಮಾನ್ಯ ಚುನಾವಣೆಯನ್ನು ಮೀರಿಸುವ ಮಟ್ಟದಲ್ಲಿ ನಡೆಯುತ್ತಿದೆ.

ತಾಲ್ಲೂಕು ಘಟಕ ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಸೋಮವಾರ ಅಂತ್ಯಗೊಂಡಿದ್ದು, ಅ. 28ರಂದು ಮತದಾನ ನಡೆಯಲಿದೆ. ಉಮೇದುವಾರಿಕೆ ವಾಪಸ್ ತೆಗೆಸಲು ಸಾಕಷ್ಟು ಕಸರತ್ತು ನಡೆಸಿದ ನೌಕರರು, ಈಗ ಚುನಾವಣೆಗೆ ಸಜ್ಜಾಗಿದ್ದಾರೆ.

ಮೊದಲ ಹಂತದಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ 34 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಪ್ರತಿ ತಾಲ್ಲೂಕಿನಲ್ಲಿ ತಮ್ಮದೇ ಆದ ತಂಡಗಳನ್ನು ರಚಿಸಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಕೆಲವು ತಾಲ್ಲೂಕುಗಳಲ್ಲಿ ಒಂದೆರಡು ತಂಡ ರಚಿಸಿಕೊಂಡಿದ್ದರೆ, ಇನ್ನೂ ಕೆಲವು ತಾಲ್ಲೂಕುಗಳಲ್ಲಿ ಮೂರು– ನಾಲ್ಕು ತಂಡಗಳು ಕಣಕ್ಕಿಳಿದಿವೆ. ಜಾತಿ ಲೆಕ್ಕಾಚಾರ, ಪ್ರಭಾವಿಗಳು, ರಾಜಕೀಯ ನಂಟು ಮೊದಲಾದ ಹಿನ್ನೆಲೆಯಲ್ಲಿ ತಂಡಗಳನ್ನು ರಚಿಸಿಕೊಂಡು ಚುನಾವಣೆಗೆ ಇಳಿದಿದ್ದಾರೆ.

ADVERTISEMENT

ಹೆಚ್ಚಿನ ಸಂಖ್ಯೆಯ ಮತದಾರರನ್ನು ಹೊಂದಿರುವ ಶಿಕ್ಷಕರ ವಲಯವನ್ನು, ಅದರಲ್ಲೂ ಮಹಿಳಾ ಶಿಕ್ಷಕರನ್ನು ಪ್ರಮುಖವಾಗಿ ಕೇಂದ್ರೀಕರಿಸಿ ಪ್ರಚಾರ ನಡೆದಿದೆ. ಶಿಕ್ಷಕರ ಮನೆಗಳಿಗೆ ಭೇಟಿ ನೀಡುವುದು, ಶಾಲೆಗಳಿಗೆ ತೆರಳಿ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ನೌಕರರನ್ನು ತಮ್ಮತ್ತ ಸೆಳೆಯಲು ಗುಟ್ಟಾಗಿ ಡಿನ್ನರ್ ವ್ಯವಸ್ಥೆ ಮಾಡುತ್ತಿದ್ದಾರೆ. ವಾರಾಂತ್ಯದ ವೇಳೆಗೆ ಗುಂಡು– ತುಂಡಿನ ಸಮಾರಾಧನೆಯೂ ನಡೆಯಲಿದೆ ಎಂದು ತುರುವೇಕೆರೆ ತಾಲ್ಲೂಕಿನ ನೌಕರರೊಬ್ಬರು ತಿಳಿಸಿದರು.

ಚುನಾವಣೆಯಲ್ಲಿ ಗೆಲ್ಲಲು ಏನೆಲ್ಲ ಪ್ರಭಾವ ಬೀರಬಹುದು ಅದೆಲ್ಲವನ್ನೂ ಮಾಡುತ್ತಿದ್ದಾರೆ. ನೌಕರರ ಸಂಘದ ಪದಾಧಿಕಾರಿಯಾದರೆ ಇಲಾಖೆ ಹಾಗೂ ನೌಕರರ ವಲಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಳ್ಳಬಹುದು. ಸಂಘ ಹಾಗೂ ನೌಕರರನ್ನು ಪ್ರತಿನಿಧಿಸುವುದರಿಂದ ತಮ್ಮ ತಂಟೆಗೆ ಅಷ್ಟು ಸುಲಭವಾಗಿ ಯಾರೂ ಬರುವುದಿಲ್ಲ ಎಂಬ ‘ಪ್ರತಿಷ್ಠೆ, ಘನತೆ’ಯ ಕಾರಣಕ್ಕಾಗಿ ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದವರಂತೆ ಹೋರಾಟ ನಡೆಸಿದ್ದಾರೆ.

ಕೆಲವು ತಾಲ್ಲೂಕುಗಳಲ್ಲಿ ಇಂತಹವರನ್ನೇ ಬೆಂಬಲಿಸುವಂತೆ ರಾಜಕಾರಣಿಗಳ ಮೂಲಕವೂ ಒತ್ತಡ ಹಾಕಿಸಲಾಗುತ್ತಿದೆ. ತಮ್ಮ ಜಾತಿ, ಸಮುದಾಯದ ಮುಖಂಡರ ಮೂಲಕವೂ ‘ಕಿವಿಮಾತು’ ಹೇಳಿಸಲಾಗುತ್ತಿದೆ. ಈ ಬಾರಿ ಬೆಂಬಲಿಸಿ ಗೆದ್ದರೆ ಮುಂದಿನ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನೌಕರರ ಬೆಂಬಲ ಕೊಡಿಸುವ ಭರವಸೆಯನ್ನು ರಾಜಕಾರಣಿಗಳಿಗೆ ಚುನಾವಣೆಗೆ ಸ್ಪರ್ಧಿಸಿರುವ ತಂಡ ನೀಡುತ್ತಿದೆ. ತಮ್ಮ ಸಮುದಾಯದ, ಇಲ್ಲವೆ ತಮಗೆ ಬೇಕಾದವರೊಬ್ಬರು ಗೆದ್ದರೆ ಮುಂದೆ ನೆರವಿಗೆ ನಿಲ್ಲುತ್ತಾರೆ ಎಂಬ ಕಾರಣಕ್ಕೆ ಸ್ಥಳೀಯ ರಾಜಕಾರಣಿಗಳು ಪ್ರಚಾರಕ್ಕೆ ಇಳಿದಿದ್ದಾರೆ. ನೌಕರರ ಸಂಘದ ಚುನಾವಣೆಯೂ ರಾಜಕೀಯ ಸ್ವರೂಪ ಪಡೆದುಕೊಂಡಿದೆ ಎಂದು ನೌಕರರೊಬ್ಬರು ಮಾಹಿತಿ ಹಂಚಿಕೊಂಡರು.

ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನುಳಿದಿರುವ ಆರು ದಿನಗಳ ಕಾಲ ಚುನಾವಣೆ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ. ಅ. 28ರಂದು ಮತದಾನ ನಡೆಯಲಿದ್ದು, ಆ ಹೊತ್ತಿಗೆ ಏನೆಲ್ಲ ಬೆಳವಣಿಗೆಗಳು ನಡೆಯಲಿವೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಕೆಲವು ಇಲಾಖೆಗಳಲ್ಲಿ ‘ಒಪ್ಪಂದದ’ ಮೇಲೆ ಅವಿರೋಧವಾಗಿ ಆಯ್ಕೆ ನಡೆಯಲಿದೆ. ಆದರೆ ಶಿಕ್ಷಕರ ವಿಭಾಗದಲ್ಲಿ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಅ.28– ತಾಲ್ಲೂಕು ಘಟಕಗಳ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ

ಅ. 30ರಿಂದ ನ.16– ತಾಲ್ಲೂಕು ಘಟಕಗಳ ಅಧ್ಯಕ್ಷರು, ಖಜಾಂಚಿ ಇತರೆ ಸ್ಥಾನಕ್ಕೆ ಚುನಾವಣೆ

ಅ.28ರಿಂದ ನ.16– ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ

ನ.19ರಿಂದ ಡಿ.4– ಜಿಲ್ಲಾ ಘಟಕದ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರ ಚುನಾವಣೆ

ಡಿ.9ರಿಂದ ಡಿ.27– ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.