ADVERTISEMENT

ಹೆಚ್ಚಾದ ಸರ್ಕಾರಿ ಭೂಮಿ ಕಬಳಿಕೆ: ಕೊರಟಗೆರೆ ತಾಲ್ಲೂಕಿನಾದ್ಯಂತ ಅತಿಕ್ರಮಣ

ಎ.ಆರ್.ಚಿದಂಬರ
Published 9 ಜುಲೈ 2024, 7:50 IST
Last Updated 9 ಜುಲೈ 2024, 7:50 IST
ಅರಣ್ಯ ಪ್ರದೇಶದಲ್ಲಿ ಗಿಡ, ಮರ ಕತ್ತರಿಸಿ ನಿರ್ಮಿಸಲಾದ ರಸ್ತೆ
ಅರಣ್ಯ ಪ್ರದೇಶದಲ್ಲಿ ಗಿಡ, ಮರ ಕತ್ತರಿಸಿ ನಿರ್ಮಿಸಲಾದ ರಸ್ತೆ   

ಕೊರಟಗೆರೆ: ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಭೂ ಮಾಫಿಯಾ ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಮಾತು ಕೇಳಿ ಬರುತ್ತಿದ್ದು, ಅದಕ್ಕೆ ಪೂರಕವೆಂಬಂತೆ ಪಟ್ಟಣದ ಸುತ್ತ ಸರ್ಕಾರಿ ಭೂಮಿ, ಗೋಮಾಳವನ್ನು ಯಾವುದೇ ಎಗ್ಗಿಲ್ಲದೆ ಆಕ್ರಮಿಸಲಾಗುತ್ತಿದೆ.

ಕೊರಟಗೆರೆ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಬಹಳ ದಿನಗಳಿಂದ ಕೆಲ ರೈತರು ಸಾಗುವಳಿ ಮಾಡಿಕೊಂಡಿದ್ದಾರೆ. ಇದರಲ್ಲಿ ಕೆಲವರಿಗೆ ಹಕ್ಕು ಪತ್ರ ನೀಡಲಾಗಿದೆ. ಇನ್ನು ಕೆಲ ರೈತರಿಗೆ ಹಕ್ಕು ಪತ್ರ ನೀಡಿಲ್ಲ. ಬೆಟ್ಟದ ತಪ್ಪಲು ಆದ ಕಾರಣಕ್ಕೆ ಬಹಳಷ್ಟು ಸರ್ಕಾರಿ ಭೂಮಿ ಇದೆ. ಈಚೆಗೆ ರಿಯಲ್ ಎಸ್ಟೇಟ್ ದಂದೆ ನಡೆಸುವವರು ಈ ಭಾಗದಲ್ಲಿನ ಅರಣ್ಯ ಹಾಗೂ ಸರ್ಕಾರಿ ಭೂಮಿಯನ್ನು ಕಬಳಿಸುವ ನಿಟ್ಟಿನಲ್ಲಿ ಇಲ್ಲಿ ಸಾಗುವಳಿ ಮಾಡುವ ಕೆಲ ರೈತರ ಬಳಿ ಅತಿಕಡಿಮೆ ಬೆಲೆಗೆ ಜಮೀನು ಖರೀದಿಸಿದ್ದಾರೆ. ಆ ಜಮೀನನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಪಕ್ಕದ ಸರ್ಕಾರಿ ಭೂಮಿಯನ್ನು ಅಮಾನತ್ತಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ.

ಸರ್ಕಾರಿ ಜಮೀನಿನಲ್ಲಿ ಏಕಾಏಕಿ ರಸ್ತೆ ನಿರ್ಮಿಸಲಾಗಿದೆ. ಅಕ್ರಮ ರಸ್ತೆ ನಿರ್ಮಾಣಕ್ಕೆ ರೈತರ ಜಮೀನಿಗೆ ರಸ್ತೆ ನಿರ್ಮಿಸುವುದಾಗಿ ಸ್ಥಳೀಯ ರೈತರನ್ನು ನಂಬಿಸಿ ಹಣ ವಸೂಲಿ ಮಾಡಲಾಗಿದೆ. ಸರ್ಕಾರಿ ಭೂಮಿಯಲ್ಲಿ ಖಾಸಗಿಯವರು ರಸ್ತೆ ನಿರ್ಮಾಣಕ್ಕೆ ಅವಕಾಶ ಇಲ್ಲ. ಹಾಗಿದ್ದರೂ ಸಂಬಂಧಿಸಿದ ಇಲಾಖೆ ಅನುಮತಿ ಪಡೆಯದೇ ಸರ್ಕಾರಿ ಭೂಮಿ ಒತ್ತುವರಿ ಮಾಡುವ ಉದ್ದೇಶದಿಂದ ಸರ್ಕಾರಿ ಜಾಗದಲ್ಲಿ ಕಿಲೋ ಮೀಟರ್ ಗಟ್ಟಲೆ ರಸ್ತೆ ನಿರ್ಮಿಸಲಾಗಿದೆ.

ADVERTISEMENT

ಹೀರೆಬೆಟ್ಟದ ತಪ್ಪಲಿನಲ್ಲಿ ಸರ್ಕಾರಿ ಗೋಮಾಳ ಭೂಮಿ ಮತ್ತು ಅರಣ್ಯ ಪ್ರದೇಶದ ಮೇಲೆ ಕಣ್ಣಿಟ್ಟಿರುವ ಭೂಮಾಫಿಯ ಹಳ್ಳ, ಕಾಲುವೆ, ನೀರಿನ ಹೊಂಡ, ರಾಜಕಾಲುವೆ ಹಾಗೂ ಕೆರೆಏರಿಯನ್ನೆ ಮುಚ್ಚಿ ಹಾಕಿದ್ದಾರೆ. ಅರಣ್ಯ ಇಲಾಖೆಯ ನೂರಾರು ಮರಗಳನ್ನು ಕಡಿದು ಸಾಕಷ್ಟು ಎಕರೆ ಅರಣ್ಯ ಭೂಮಿಯನ್ನು ನಾಶ ಮಾಡಲಾಗಿದೆ.

ಭೂಮಾಫಿಯಾ ಜತೆ ಕೈಜೋಡಿಸಿರುವ ಕೆಲ ಅಧಿಕಾರಿಗಳು ರಾತ್ರೋರಾತ್ರಿ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲೆ ಪತ್ರ ನೀಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿದರೆ ಸಾಕಷ್ಟು ಹಗರಣ ಬಯಲಾಗುತ್ತವೆ.

ಸರ್ಕಾರಿ ಭೂಮಿ ಮಣ್ಣನ್ನು ಸಾಗಾಣಿಕೆ ಮಾಡಿರುವುದು
ಅರಣ್ಯ ಭೂಮಿಯಲ್ಲಿ ರಸ್ತೆ
ಸಾರ್ವಜನಿಕ ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅರಣ್ಯ ಭೂಮಿಯಲ್ಲಿ ರಸ್ತೆ ನಿರ್ಮಾಣ ಮಾಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎಫ್ಐಆರ್ ಕೂಡ ದಾಖಲಿಸಲಾಗಿದೆ. ಯಾವ ಕಾರಣಕ್ಕೆ ಖಾಸಗಿಯವರು ಅರಣ್ಯ ಭೂಮಿ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಿದೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ- ಕೆ.ಮಂಜುನಾಥ ತಹಶೀಲ್ದಾರ್
ಮರ ಕತ್ತರಿಸಿರುವುದು ದೃಢ
ಹೀರೆಬೆಟ್ಟದ ತಪ್ಪಲಿನಲ್ಲಿ ಅರಣ್ಯ ಭೂಮಿಗೆ ಸಂಬಂಧಿಸಿದ ಮರಗಳನ್ನು ಕತ್ತರಿಸಿರುವುದು ದೃಢಪಟ್ಟಿದೆ. ಅನುಮತಿ ಇಲ್ಲದೆ ಅರಣ್ಯ ಭೂಮಿ ಅತಿಕ್ರಮಣ ಮಾಡಿರುವುದು ಹಾಗೂ ಮರ ಕತ್ತರಿಸಿರುವುದರಿಂದ ಸಂಬಂಧಪಟ್ಟವರು ವಿರುದ್ಧ ಕಾನೂನು ಕ್ರಮ ಕೈಗೊಂಡು ಕೇಸು ದಾಖಲಿಸಲಾಗಿದೆ-ರವಿ ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.