ADVERTISEMENT

ಗುಬ್ಬಿ | ಶತಮಾನದ ಹೊಸ್ತಿಲಲ್ಲಿ ಸರ್ಕಾರಿ ಶಾಲೆ: ಹೆಚ್ಚುತ್ತಿದೆ ದಾಖಲಾತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 6:39 IST
Last Updated 6 ಸೆಪ್ಟೆಂಬರ್ 2024, 6:39 IST
ಸಿಎಸ್. ಪುರ ಸರ್ಕಾರಿ ಶಾಲೆಯ ಹಳೆಯ ಕಟ್ಟಡ
ಸಿಎಸ್. ಪುರ ಸರ್ಕಾರಿ ಶಾಲೆಯ ಹಳೆಯ ಕಟ್ಟಡ   

ಗುಬ್ಬಿ: ಶತಮಾನದ ಹೊಸ್ತಿಲಿನಲ್ಲಿರುವ ತಾಲ್ಲೂಕಿನ ಸಿ.ಎಸ್. ಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

1925ರಲ್ಲಿ ಪ್ರಾರಂಭವಾದ ಈ ಶಾಲೆಯು ಶತಮಾನದ ಅಂಚಿನಲ್ಲಿದೆ. ಖಾಸಗಿ ಶಾಲೆಗಳ ಸ್ಪರ್ಧೆಯ ಸವಾಲಿನ ನಡುವೆಯೂ ಸದ್ಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

2019ರಿಂದ ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭವಾಗಿದ್ದು, ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಬೋಧನೆ ಮಾಡಲಾಗುತ್ತಿದೆ.
ಸದ್ಯ ಈ ಶಾಲೆಯಲ್ಲಿ 9 ಕಾಯಂ ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದರಿಂದ ಸುತ್ತಲಿನ ಪೋಷಕರು ಈ ಶಾಲೆಗೆ ಮಕ್ಕಳನ್ನು ಸೇರಿಸಲು ಉತ್ಸಾಹ ತೋರುತ್ತಿದ್ದಾರೆ.

ADVERTISEMENT

ಶಾಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದಲೇ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘ ಸ್ಥಾಪಿಸಲಾಗಿದೆ. ಶಾಲೆಯ ಎಲ್ಲ ಚಟುವಟಿಕೆಗಳಲ್ಲಿಯೂ ಅವರನ್ನು ಸಕ್ರಿಯವಾಗಿ ಬಳಸಿಕೊಳ್ಳಲಾಗುತ್ತಿದೆ. ಶಿಥಿಲವಾಗಿದ್ದ ಹೆಂಚಿನ ಹಳೆಯ ಕೊಠಡಿಗಳನ್ನು ಕೆಡವಿ ಒಸಾಟ್ ಸಂಸ್ಥೆ ಸಹಕಾರದೊಂದಿಗೆ ಈಗಾಗಲೇ ನಾಲ್ಕು ನೂತನ ಕೊಠಡಿ ಹಾಗೂ ಶೌಚಾಲಯ ನಿರ್ಮಿಸಲಾಗಿದೆ. ಇನ್ನೂ ನಾಲ್ಕು ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿದೆ.

ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಾಲೆಯಲ್ಲಿ ಸಾಧ್ಯವಿರುವ ಅಭಿವೃದ್ಧಿ ಮಾಡಲಾಗುತ್ತಿದೆ. ಮಕ್ಕಳಿಗೆ ಅನುಕೂಲವಾಗುವಂತೆ ಆಟದ ಮೈದಾನ ಇರುವುದರಿಂದ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ದೊರೆಯುತ್ತಿದೆ.

ಈ ಶಾಲೆಯಲ್ಲಿ ಓದಿರುವ ಅನೇಕರು ಸರ್ಕಾರಿ ಉದ್ಯೋಗಗಳನ್ನು ಪಡೆದಿರುವ ಜೊತೆಗೆ ಉದ್ಯಮಿಗಳು, ಸಂಶೋಧಕರು, ವೈದ್ಯರು, ವಕೀಲರು, ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಸಾಟ್ ಸಂಸ್ಥೆಯು ಸಿ.ಎಸ್. ಪುರದಲ್ಲಿ ನಿರ್ಮಿಸಿರುವ ನೂತನ ಕೊಠಡಿಗಳು
ಓದಿನ ಜೊತೆಗೆ ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದರಿಂದ ಮಕ್ಕಳು ಓದಿನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ನಮ್ಮ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗೆ ದಾಖಲಿಸಿದ್ದೇವೆ.
ರೇಖಾ ಪೋಷಕಿ
ಶಾಲೆಗೆ ಅಡುಗೆ ಕೋಣೆ ಬೇಕಿದೆ. ನರೇಗಾ ಯೋಜನೆಯಡಿ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇಲಾಖೆಯ ಅನುದಾನದೊಂದಿಗೆ ಎಲ್ಲರ ಸಹಕಾರದಿಂದ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲು ಯತ್ನಿಸುತ್ತಿದ್ದೇವೆ.
ಗಂಗಮ್ಮ ಮುಖ್ಯ ಶಿಕ್ಷಕಿ
ಸರ್ವತೋಮುಖ ಅಭಿವೃದ್ಧಿ
‘ನಮ್ಮ ಶಾಲೆ ನಮ್ಮ ಹೆಮ್ಮೆ’ ಧ್ಯೇಯ ವಾಕ್ಯದೊಂದಿಗೆ ಹಳೆಯ ವಿದ್ಯಾರ್ಥಿಗಳೆಲ್ಲರೂ ಶಾಲೆಯ ಎಲ್ಲ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿರುವುದರಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತಿದೆ. ಸರ್ಕಾರ ಅಗತ್ಯವಿರುವ ಕೆಲವು ಸೌಕರ್ಯಗಳನ್ನು ಒದಗಿಸಿದಲ್ಲಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಹಳೆಯ ವಿದ್ಯಾರ್ಥಿ ಸಿ.ಕೆ. ರವೀಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.