ತುರುವೇಕೆರೆ: ಪಟ್ಟಣದ ಇಂದಿರಾನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳನ್ನು ಆರ್ಷಿಸುವ ಮೂಲಕ ತಾಲ್ಲೂಕಿಗೆ ಮಾದರಿ ಶಾಲೆ ಎನಿಸಿಕೊಂಡಿದೆ.
1897ರಲ್ಲಿ ಆರಂಭಗೊಂಡ ಈ ಶಾಲೆ ತಾಲ್ಲೂಕಿನಲ್ಲಿ 250 ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳ ಪೈಕಿ ಎಲ್.ಕೆ.ಜಿಯಿಂದ 8ನೇ ತರಗತಿವರೆಗೆ 750 ಮಕ್ಕಳ ದಾಖಲಾತಿ ಹೊಂದಿರುವ ತಾಲ್ಲೂಕಿನ ಏಕೈಕ ಶಾಲೆ ಎಂಬ ಹೆಗ್ಗಳಿಕೆ ಪಡೆದಿದೆ.
ಈ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮ ಇದೆ. ಈ ಶಾಲೆಯ ಕೂಗಳತೆ ದೂರದಲ್ಲೇ ಖಾಸಗಿ ಶಾಲೆಗಳಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಒಳ್ಳೆಯ ಇಂಗ್ಲಿಷ್ ಮತ್ತು ಉಚಿತ ಶಿಕ್ಷಣ ಸಿಗುತ್ತದೆಂದು ಇಲ್ಲಿಗೆ ಸೇರಿಸಲು ಒಲವು ತೋರುತ್ತಾರೆ.
2014ರಲ್ಲಿ ಸಿ.ಸತೀಶ್ ಕುಮಾರ್ ಮುಖ್ಯಶಿಕ್ಷಕರಾಗಿ ಈ ಶಾಲೆಗೆ ಬಂದಾಗ ಇಲ್ಲಿ ಕೇವಲ 150 ಮಕ್ಕಳು ದಾಖಲಾಗಿದ್ದರು. ನಂತ ಅವರ ಕ್ರಿಯಾಶೀಲತೆಯಿಂದ ಈಗ 750ಕ್ಕೆ ಹೆಚ್ಚಿದೆ. 23 ಪದವೀದರ ಶಿಕ್ಷಕರಿದ್ದಾರೆ.
ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಈ ಶಾಲೆಯನ್ನು ದತ್ತು ಪಡೆದಿದ್ದಾರೆ. ಲಯನ್ಸ್, ರೋಟರಿ ಕ್ಲಬ್, ಹಿರಿಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಪೋಷಕರು ಟೊಂಕಕಟ್ಟಿ ನಿಂತಿದ್ದಾರೆ.
ಟಿ.ವಿ, ಪ್ರೊಜೆಕ್ಟರ್ ಆಧಾರಿತ ಸ್ಮಾರ್ಟ್ ಕ್ಲಾಸ್, ಸ್ಲೋಕನ್ ಇಂಗ್ಲಿಷ್ ಕಲಿಕೆ, ಆಧುನಿಕ ಬೋಧನೋಪಕರಣ ಬಳಕೆ, ಸುಸಜ್ಜಿತ ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ತಂತ್ರಜ್ಞಾನ ಹಾಗೂ ಚಟುವಟಿಕೆ ಆಧಾರಿತ ಕಲಿಕೆ, ವ್ಯಕ್ತಿತ್ವ ವಿಕಸನದ ತರಬೇತಿ, ಆಟೋಟ ಮತ್ತು ಪೀಠೋಪಕರಣ, ಉತ್ತಮ ಕೊಠಡಿ ಮತ್ತು ಆಸನದ ವ್ಯವಸ್ಥೆ ಇದೆ. ಸುಧಾರಿತ ಶೌಚಾಲಯ, ಶಾಲಾ ಪರಿಸರ, ಮಕ್ಕಳ ಕಲಿಕೆಗೆ ಮತ್ತು ಪೋಷಕರಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಲಹೆ ನೀಡುವುದು, ವಿವಿಧ ಸಂಘ ಸಂಸ್ಥೆಗಳು ನೀಡುವ ಉಚಿತ ಕಲಿಕಾ ಸಾಮಗ್ರಿ, ವ್ಯವಸ್ಥಿತ ಪ್ರಯೋಗಾಲಯ, ಬೇಸಿಕ್ ಕಂಪ್ಯೂಟರ್ ತರಗತಿಗಳು ಪೋಷಕರು ಹಾಗೂ ಮಕ್ಕಳ ಗಮನ ಸೆಳೆದಿದೆ.
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್, ನವೋದಯ ವಸತಿ ಶಾಲೆಗೆ ದಾಖಲಾತಿ ಹಾಗೂ 8ನೇ ತರಗತಿಗೆ ನಡೆಸುವ ಎನ್‌ಎಂಎಸ್ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುತ್ತಾ ಬರುತ್ತಿರುವುದರಿಂದ ಪ್ರತಿ ವರ್ಷವೂ ಈ ಶಾಲೆಯಿಂದ 50ಕ್ಕೂ ಹೆಚ್ಚು ಮಕ್ಕಳು ಆಯ್ಕೆಯಾಗುತ್ತಿರುವುದು ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಹಿಡಿದ ಕೈಗನ್ನಡಿಯಂತಿದೆ.
ಸಾಂಸ್ಕೃತಿಕ ಚಟುವಟಿಕೆ: ‘ಮಕ್ಕಳನ್ನು ಪಠ್ಯಕ್ಕೆ ಸೀಮಿತಗೊಳಿಸದೆ ಭಾನುವಾರ ಮತ್ತು ಶುಕ್ರವಾರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಮಕ್ಕಳಿಗೆ ಸಂಗೀತ, ನೃತ್ಯ, ಭರತನಾಟ್ಯ, ಕರಾಟೆ ತರಬೇತಿ ನೀಡಲಾಗುತ್ತದೆ. ಮೂರುವರೆ ಎಕರೆ ವಿಸ್ತೀರ್ಣದಲ್ಲಿ ಕ್ರೀಡಾಂಗಣವಿದೆ ಎನ್ನುತ್ತಾರೆ ಶಿಕ್ಷಕ ಟಿ.ಎಸ್.ಲೋಕೇಶ್.
‘2024-25ನೇ ಸಾಲಿನಲ್ಲಿ ಶೈಕ್ಷಣಿಕ ಪ್ರಗತಿ ಹಾಗೂ ದಾಖಲಾತಿ ಹೆಚ್ಚಳ ಮನಗಂಡು ‘ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಜಿಂಗ್ ಇಂಡಿಯಾ’ ಯೋಜನೆಗೆ ಈ ಶಾಲೆ ಆಯ್ಕೆಯಾಗಿದ್ದು, ಕೇಂದ್ರ ಸರ್ಕಾರ ₹2 ಕೋಟಿ ಅನುದಾನ ನೀಡಲಿದೆ. ಆ ಹಣವನ್ನು ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲಾ ಭೌತಿಕ ಕಾರ್ಯಗಳಿಗೆ ಬಳಸಿಕೊಳ್ಳಲು ಯೋಜಿಸಲಾಗಿದೆ.
ಜಿಲ್ಲೆಯಲ್ಲೇ 750 ಮಕ್ಕಳ ದಾಖಲಾತಿ ಹೊಂದಿದ 2ನೇ ಶಾಲೆ ತುರುವೇಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ. ಶಾಲೆಗೆ ತುರ್ತಾಗಿ ವಸತಿ ನಿಲಯದ ಅಗತ್ಯವಿದೆ. 1ರಿಂದ 8ನೇ ತರಗತಿಯನ್ನು 12ನೇ ತರಗತಿವರೆಗೆ ಉನ್ನತೀಕರಿಸಬೇಕು. ಹಳ್ಳಿಗಳಿಂದ ಹೆಚ್ಚು ಹೆಣ್ಣು ಮಕ್ಕಳು ದಾಖಲಾಗುತ್ತಿದ್ದು ಅವರಿಗಾಗಿ ಪ್ರತ್ಯೇಕ ಹೆಣ್ಣು ಮಕ್ಕಳ ಶಾಲೆಯನ್ನು ಈಗಿರುವ ಜಾಗದಲ್ಲೇ ಮಂಜೂರು ಮಾಡಿಕೊಡಬೇಕು ಎನ್ನುವುದು ಇಲ್ಲಿನ ಮುಖ್ಯ ಶಿಕ್ಷಕರ ಬೇಡಿಕೆ.
ಮಕ್ಕಳ ದಾಖಲಾತಿ ಹೆಚ್ಚುತ್ತಿದ್ದು ಕೊಠಡಿ ಬಿಸಿಯೂಟ ವಿತರಿಸುವ ಹಾಲ್ ಸುಸಜ್ಜಿತ ಅಡುಗೆ ಕೋಣೆಯ ಅಗತ್ಯವಿದೆ. ಬ್ರಿಟಿಷರು ಕಟ್ಟಿದ ಎಂಟು ಕೊಠಡಿಗಳು ಸದ್ಯಕ್ಕೆ ದುರಸ್ತಿಯಾಗಬೇಕಿದೆ. ಇಲ್ಲಿನ ಮಕ್ಕಳಿಗೆ ಕೇಂದ್ರೀಯ ಶಾಲೆ ಪಠ್ಯಕ್ರಮದ ಶಿಕ್ಷಣ ನೀಡಲು ಅವಕಾಶ ಕಲ್ಪಿಸಬೇಕು ಎಂದು ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಮನವಿ ಮಾಡುವೆ.–ಸಿ.ಸತೀಶ್ ಕುಮಾರ್, ಮುಖ್ಯ ಶಿಕ್ಷಕ
ಜೀವನ ಕೌಶಲಕ್ಕೂ ಒತ್ತು ನಮ್ಮ ಶಾಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ಹೇಳಿಕೊಡುವ ಮಾದರಿಯಲ್ಲೇ ಪಾಠಗಳು ನಡೆಯುತ್ತಿದೆ. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕಲೆ ಸಾಹಿತ್ಯ ಕ್ರೀಡೆ ವೈಯಕ್ತಿಕ ಶಿಸ್ತು ಸಂಯಮದಂತಹ ಜೀವನ ಕೌಶಲಗಳ ಬಗ್ಗೆಯೂ ಇಲ್ಲಿನ ಶಿಕ್ಷಕರು ಒತ್ತುಕೊಟ್ಟು ಕಲಿಸುತ್ತಾರೆ.–ಪೂರ್ಣಶ್ರೀ, ವಿದ್ಯಾರ್ಥಿನಿ
ಹೆಚ್ಚಿನ ಅನುದಾನ ಅಗತ್ಯ ಸಾಹಿತಿಗಳು ರಾಜಕಾರಣಿಗಳು ಎಂಜಿನಿಯರ್ ವೈದ್ಯರು ಸಮಾಜ ಸೇವಕರಂತಹ ದೊಡ್ಡ ಸಾಧಕರನ್ನು ನೀಡಿದ ದಶಕದ ಶಾಲೆ. ಗುಣಮಟ್ಟದ ಶಿಕ್ಷಣ ಹಾಗೂ ಪಠ್ಯೇತರ ಕಲಿಕೆಗೂ ವಿಶೇಷ ಕಾಳಜಿ ನೀಡುತ್ತಾರೆ. ಸರ್ಕಾರ ಹೆಚ್ಚಿನ ಅನುದಾನ ನೀಡಿ ಕನ್ನಡ ಶಾಲೆ ಉಳಿಸಲಿ.–ನಂರಾಜು ಮುನಿಯೂರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತುರುವೇಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.