ADVERTISEMENT

ಒಪಿಎಸ್‌ ಜಾರಿಗೆ ಸರ್ಕಾರ ಬದ್ಧ: ಪರಮೇಶ್ವರ

‘ಗ್ಯಾರಂಟಿ ಕೊಡದಿದ್ದರೂ ಕಾಂಗ್ರೆಸ್‌ ಗೆಲುವು’

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:55 IST
Last Updated 7 ಜುಲೈ 2024, 14:55 IST
   

ತುಮಕೂರು: ‘ಹಳೆ ಪಿಂಚಣಿ ಯೋಜನೆ (ಒಪಿಎಸ್‌), 7ನೇ ವೇತನ ಆಯೋಗದ ವರದಿ ಜಾರಿಗೆ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾರಿಗೂ ಮೋಸ ಮಾಡುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್‌ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಶಿಕ್ಷಕ ವರ್ಗ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.

7ನೇ ವೇತನ ಆಯೋಗ ವರದಿ ಜಾರಿಗೆ ₹18 ಸಾವಿರ ಕೋಟಿ, ಒಪಿಎಸ್‌ ಅನುಷ್ಠಾನಕ್ಕೆ ಸಾವಿರಾರು ಕೋಟಿ, ಗ್ಯಾರಂಟಿ ಮುನ್ನಡೆಸಲು ₹58 ಸಾವಿರ ಕೋಟಿ ಬೇಕು. ಸಂದರ್ಭ ನೋಡಿಕೊಂಡು ಎಲ್ಲ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ತಿಳಿಸಿದರು.

ADVERTISEMENT

ಗ್ಯಾರಂಟಿ ಘೋಷಿಸದಿದ್ದರೂ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿತ್ತು. ಕನಿಷ್ಠ 120 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಬಡವರ, ದೀನ ದಲಿತರ ಪರವಾಗಿ ನಿಲ್ಲಬೇಕು ಎಂಬ ಕಾರಣಕ್ಕೆ ಗ್ಯಾರಂಟಿ ಜಾರಿಗೆ ತರಲಾಯಿತು. ಬಡವರ ಬದುಕು ಸುಧಾರಣೆಗೆ ನೆರವಿನ ‘ಹಸ್ತ’ ಚಾಚಲಾಯಿತು. ಇದಕ್ಕಾಗಿ ಒಂದು ವರ್ಷಕ್ಕೆ ₹58 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಮುಖ್ಯಮಂತ್ರಿ, ಶಿಕ್ಷಣ ಸಚಿವರ ಜತೆ ಚರ್ಚಿಸಲಾಗಿದೆ. ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಮಕ್ಕಳ ಸಂಖ್ಯೆಯೂ ಕುಸಿಯುತ್ತಿದೆ. 10 ಮಂದಿಯೂ ದಾಖಲಾಗುತ್ತಿಲ್ಲ. ಇದೇ ಕಾರಣಕ್ಕೆ ಕಳೆದ ವರ್ಷ ನಾನು ಸಹ ಒಂದು ಶಾಲೆ ಮುಚ್ಚಬೇಕಾಯಿತು. ನಾವು ಕೊಡುವ ಸಂಬಳಕ್ಕೆ ಅತಿಥಿ ಶಿಕ್ಷಕರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯ ಡಿ.ಟಿ.ಶ್ರೀನಿವಾಸ್, ‘ಶಿಕ್ಷಕರ ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಪ್ರಾಥಮಿಕ ಶಾಲೆಯಿಂದ ಹಿಡಿದು ತಾಂತ್ರಿಕ ಶಿಕ್ಷಣದ ವರೆಗೆ ಸಾಕಷ್ಟು ಸಮಸ್ಯೆಗಳು ಇವೆ. ಮುಂದಿನ ಅಧಿವೇಶನದಲ್ಲಿ ಶಿಕ್ಷಕರ ಎಲ್ಲ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತೇನೆ’ ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ, ಮುಖಂಡರಾದ ಕೆ.ಎಸ್.ಕಿರಣ್‌ಕುಮಾರ್, ಎನ್.ಗೋವಿಂದರಾಜು, ಷಣ್ಮುಖಪ್ಪ, ಪೂರ್ಣಿಮಾ ಶ್ರೀನಿವಾಸ್, ರಫಿಕ್‌ ಅಹ್ಮದ್‌, ಇಕ್ಬಾಲ್‌ ಅಹ್ಮದ್, ಜಿ.ಚಂದ್ರಶೇಖರಗೌಡ, ತುಮಕೂರು ವಿ.ವಿ ಅಧ್ಯಾಪಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.