ADVERTISEMENT

ಕೊರಟಗೆರೆ | ಸೌಕರ್ಯದ ಕೊರತೆ: ಕುಸಿದ ದಾಖಲಾತಿ

ಸರ್ಕಾರಿ ಶಾಲೆಗಳಿಂದ ದೂರವಾಗುತ್ತಿರುವ ವಿದ್ಯಾರ್ಥಿಗಳು: ಗುಣಮಟ್ಟದ ಕಲಿಕೆಗೆ ತಡೆ

ಎ.ಆರ್.ಚಿದಂಬರ
Published 26 ಜೂನ್ 2024, 6:59 IST
Last Updated 26 ಜೂನ್ 2024, 6:59 IST
ಬರಕ ಗ್ರಾಮದ ಸರ್ಕಾರಿ ಶಾಲೆಯ ಸ್ಥಿತಿ
ಬರಕ ಗ್ರಾಮದ ಸರ್ಕಾರಿ ಶಾಲೆಯ ಸ್ಥಿತಿ   

ಕೊರಟಗೆರೆ: ಮಳೆ ಬಂದಾಗ ಸೋರುವ, ಬಿಸಿಲಿದ್ದಾಗ ಮರದಡಿ ಪಾಠ ಮಾಡಬೇಕಾದ ಅನಿವಾರ್ಯತೆ ತಾಲ್ಲೂಕಿನ ಬಹಳಷ್ಟು ಸರ್ಕಾರಿ ಶಾಲೆಗಳದ್ದು. ತಾಲ್ಲೂಕಿನ 294 ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ.

ತಾಲ್ಲೂಕಿನಲ್ಲಿ 296 ಶಾಲೆಗಳಿವೆ. 2023-24ನೇ ಸಾಲಿನಲ್ಲಿ 20,700 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಬಹುತೇಕ ಕಡೆಗಳಲ್ಲಿ ಶಾಲಾ ಕಟ್ಟಡಗಳ ಕೊರತೆ ಕಾರಣಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣವಾಗಿದೆ. ದಾಖಲಾತಿ ಇಲ್ಲದೆ 13 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ.

ಇಲಾಖೆ ಅಂಕಿ ಅಂಶದ ಪ್ರಕಾರ ಒಟ್ಟು 858 ಕೊಠಡಿಗಳಿವೆ. ಅದರಲ್ಲಿ 564 ಕೊಠಡಿಗಳು ಉತ್ತಮ ಸ್ಥಿತಿಯಲ್ಲಿವೆ. 143 ಕೊಠಡಿಗಳು ಅರ್ಧ ಶಿಥಿಲವಾದರೆ, 151 ಕೊಠಡಿಗಳ ಚಾವಣಿ, ಕಿಟಕಿ, ಬಾಗಿಲು, ನೆಲ ಮತ್ತು ಗೋಡೆ ಕುಸಿಯುವ ಹಂತದಲ್ಲಿದೆ.

ADVERTISEMENT

ತಾಲ್ಲೂಕಿನ ಅಕ್ಕಿರಾಂಪುರ ಸರ್ಕಾರಿ ಉರ್ದು ಶಾಲೆ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಉಳಿದ ಒಂದೆರಡು ಕೊಠಡಿಯಲ್ಲಿ ಉರ್ದು ಹಾಗೂ ಇತರೆ ವಿದ್ಯಾರ್ಥಿಗಳು ಕಲಿಯುವ ಅನಿವಾರ್ಯತೆ ಇದೆ. ತಾಲ್ಲೂಕಿನ ಬರಕಾ ಶಾಲೆ ಪರಿಸ್ಥಿತಿ ತೀರಾ ಹಾಳಾಗಿದ್ದು, ಇರುವ ಎರಡು ಕೊಠಡಿಯಲ್ಲಿ ಒಂದು ಕೊಠಡಿ ಚಾವಣಿ ಸಂಪೂರ್ಣ ಕುಸಿದಿದೆ. ಹಾಳಾಗಿರುವ ಕೊಠಡಿ ತೆರವಿಗೆ ಆದೇಶಿಸಲಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚನ್ನರಾಯನದುರ್ಗಾ, ಮಾವತ್ತೂರು, ಬೈಚಾಪುರ, ಹಂಚಿಮಾರನಹಳ್ಳಿ, ಸಿವಿಡಿ ಪಾಳ್ಯ, ಹರಿಹರಪ್ಪನಪಾಳ್ಯ, ಅಗ್ರಹಾರ, ಅರಸಾಪುರ, ಬೊಮ್ಮಲದೇವಿಪುರ, ಬೂದಗವಿ, ಬುಕ್ಕಾಪಟ್ಟಣ, ಚಿನ್ನಹಳ್ಳಿ, ಹಂಚಿಹಳ್ಳಿ, ಹೊಳವನಹಳ್ಳಿ, ದೊಡ್ಡಸಾಗ್ಗೆರೆ, ಹುಲಿಕುಂಟೆ, ಕೋಳಾಲ, ಕುರಂಕೋಟೆ, ಕ್ಯಾಮೇನಹಳ್ಳಿ, ನೀಲಗೊಂಡನಹಳ್ಳಿ, ಪಾತಗಾನಹಳ್ಳಿ, ತೀತಾ, ತೋವಿನಕೆರೆ, ತುಂಬಾಡಿ, ವಡ್ಡಗೆರೆ, ವಜ್ಜನಕುರಿಕೆ, ಎಲೆರಾಂಪುರ ಸೇರಿದಂತೆ ಹಲವು ಕಡೆಗಳಲ್ಲಿ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ.

ವಿವಿಧೆಡೆಗಳಲ್ಲಿನ 80 ಶಾಲಾ ಕೊಠಡಿಗಳು ಬಳಸಲು ಯೋಗ್ಯವಾಗಿಲ್ಲ. ನೆಲಸಮ ಮಾಡಲು ನಿರ್ದೇಶಿಸಲಾಗಿದೆ. ಕೆಲವೆಡೆ ಮಧ್ಯಾಹ್ನದ ಬಿಸಿ ಊಟ ತಯಾರಿಕೆಗೆ ಪ್ರತ್ಯೇಕ ಕೊಠಡಿಗಳಿಲ್ಲದ ಕಾರಣಕ್ಕೆ ಇರುವ ಕೊಠಡಿಗಳಲ್ಲೆ ಅಡುಗೆ ಮಾಡಲಾಗುತ್ತಿದೆ. ಕೆಲವೆಡೆ ನಿರ್ಮಾಣ ಮಾಡಿರುವ ಅಡುಗೆ ಕೋಣೆಗಳು ಸುಸ್ಥಿಯಲ್ಲಿ ಇಲ್ಲ.

ತೋವಿನಕೆರೆ, ಮಣುವಿನಕುರಿಕೆ, ಅರಸಾಪುರ, ಸೋಂಪುರ, ಕೋಳಾಲ, ವೀರನಗರ, ಅಳಾಲಸಂದ್ರ, ವೆಂಕಟಾಪುರ, ಹಂಚಿಮಾರನಹಳ್ಳಿ, ಚಿಕ್ಕಾವಳ್ಳಿ, ಹನುಮಂತಪುರ, ಜಿ.ನಾಗೇನಹಳ್ಳಿ, ಸೋಂಪುರ, ಜನತಾ ಕಾಲೊನಿ ಸೇರಿ ಒಟ್ಟು 13 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. 13 ಸರ್ಕಾರಿ ಶಾಲೆಗಳಲ್ಲೂ 2021ರಿಂದ ಈವರೆಗೆ ಶೂನ್ಯ ದಾಖಲಾತಿ ಇದೆ.

ಆಟದ ಮೈದಾನ ಇಲ್ಲದ ಶಾಲೆಗಳು: 279 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 140ಕ್ಕೂ ಹೆಚ್ಚು ಶಾಲೆಗೆ ಆಟದ ಮೈದಾನ ಇಲ್ಲ. ದೈಹಿಕ ಶಿಕ್ಷಕರು ಇಲ್ಲದ ಕಾರಣಕ್ಕೆ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಇಲ್ಲದಾಗಿದೆ. 85 ಶಾಲೆ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, 35 ಶಾಲೆ ಶೌಚಾಲಯ ಮತ್ತು 55 ಅಡುಗೆ ಕೊಣೆಗೆ ನೀರಿನ ಸೌಲಭ್ಯ ಇಲ್ಲ. 75 ಸರ್ಕಾರಿ ಶಾಲೆಗಳಿಗೆ ಆವರಣ ಗೋಡೆ ಇಲ್ಲ.

100 ಶಿಕ್ಷಕರ ಹುದ್ದೆ ಖಾಲಿ

2024-25ನೇ ಸಾಲಿನಲ್ಲಿ 266 ಸರ್ಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕ ಸೇರಿ ಒಟ್ಟು 879 ಹುದ್ದೆಗಳಿವೆ. ಅದರಲ್ಲಿ 100 ಹುದ್ದೆ ಖಾಲಿ ಇವೆ. 279 ಸರ್ಕಾರಿ ಶಾಲೆಗಳಲ್ಲಿ 270 ಶಾಲೆಗಳ ಜಮೀನಿನ ಆಸ್ತಿ ನೊಂದಣಿ ಆಗಿದೆ. ಉಳಿದ 9 ಶಾಲೆಗಳ ಜಮೀನಿನ ಖಾತೆ ಆಗಿದ್ದು ಇ-ಖಾತೆ ಬಾಕಿ ಇದೆ.

‘ಶೀಘ್ರ ಕಾರ್ಯಗತ’

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ತಾಲ್ಲೂಕಿನ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ತರಲಾಗಿರುವ ₹1.5 ಕೋಟಿ ವಿಶೇಷ ಅನುದಾನವನ್ನು ಶೀಘ್ರ ಕಾರ್ಯಗತಗೊಳಸಲಾಗುವುದು. ನರೇಗಾ ಕಾಮಗಾರಿ ಕ್ರಿಯಾಯೋಜನೆಗೆ ಚಾಲನೆ ನೀಡಿದರೆ ಸರ್ಕಾರಿ ಶಾಲಾ ಮಕ್ಕಳ ದಾಖಲಾತಿ ಹೆಚ್ಚಳ ಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ - ಬಿ.ಜಿ.ಹನುಮಂತರಾಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ

‘ಐದು ದಶಕದ ಹಳೆ ಕೊಠಡಿಯಲ್ಲಿ ಪಾಠ’

ಗ್ರಾಮೀಣ ಭಾಗದ ಅದರಲ್ಲೂ ಗಡಿಬಾಗದ ಶಾಲಾ ಕಟ್ಟಡಗಳು ನಿರ್ಮಾಣವಾಗಿ 45ಕ್ಕೂ ಹೆಚ್ಚು ವರ್ಷಗಳೆ ಕಳೆದಿವೆ. ಬಿ.ಡಿ.ಪುರ ಶಾಲೆ ನಿರ್ಮಾಣವಾಗಿ 50ಕ್ಕೂ ಹೆಚ್ಚು ವರ್ಷವಾಗಿದೆ. ಈಗಲೂ ಅದೇ ಕೊಠಡಿಯಲ್ಲಿ ಪಾಠ ನಡೆಸಲಾಗುತ್ತಿದೆ. ಇಂತಹ ತೀರಾ ಹಳೆಯ ಕಟ್ಟಡ ಗಡಿಭಾಗದ ಶಾಲೆಗಳಲ್ಲಿ ಕಾಣಬಹುದು. ಇವುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು - ರೇಣುಕಾ ರಾಜೇಂದ್ರ, ಬಿ.ಡಿ.ಪುರ

‘ಬೀಳುವ ಸ್ಥಿತಿಯಲ್ಲಿ ನೀರಿನ ಟ್ಯಾಂಕ್‌’

ಅಕ್ಕಿರಾಂಪುರ ಉರ್ದು ಶಾಲೆ ಕಟ್ಟಡ ಶಿಥಿಲವಾದ ಬಳಿಕ ಕಟ್ಟಡ ಧ್ವಂಸಕ್ಕೆ ಆದೇಶ ಮಾಡಲಾಯಿತು. ಕಟ್ಟಡಕ್ಕೆ ಬೆಲೆಬಾಳುವ ತೇಗ, ಹೊನ್ನೆ, ಬೀಟೆ ಮರ ಬಳಸಲಾಗಿತ್ತು. ಬೆಲೆ ಬಾಳುವ ಮರದ ಪರಿಕರಗಳನ್ನು ದುರ್ಬಳಕೆ ಮಾಡಿಕೊಂಡಿದ್ದರಿಂದ ಸ್ಥಳೀಯರು ಗಲಾಟೆ ಮಾಡಿದ ಕಾರಣಕ್ಕೆ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತವಾಗಿದೆ. ಈಗ ಒಂದೇ ಕೊಠಡಿಯಲ್ಲಿ ಶೈಕ್ಷಣಿಕ ಕೆಲಸ ನಡೆಯುತ್ತಿದೆ. ಈ ಕಟ್ಟಡದ ಪಕ್ಕದಲ್ಲೆ ನೀರಿನ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡಿದೆ. ಅದು ಯಾವಾಗ ಬೇಕಾದರೂ ಶಾಲಾ ಕಟ್ಟಡದ ಮೇಲೆ ಮುರಿದು ಬೀಳುವ ಸಾಧ್ಯತೆ ಇದೆ - ಸೈಯದ್ ಅನ್ಸರ ಪಾಷಾ, ಸ್ಥಳೀಯ

ಅಕ್ಕಿರಾಂಪುರದ ಸರ್ಕಾರಿ ಉರ್ದು ಶಾಲೆ
ಹರಿಹರಪ್ಪನಪಾಳ್ಯದ ಶಾಲೆ ಕಟ್ಟಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.