ತೋವಿನಕೆರೆ: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಇಲ್ಲದೆ, ಬೆಳೆಗಳು ಒಣಗುತ್ತಿದ್ದರೆ, ಕುರಂಕೋಟೆ ದೊಡ್ಡ ಕಾಯಪ್ಪ ದೇಗುಲದ ಪಕ್ಕದ ಆರು ಎಕರೆ ಜಮೀನಿನಲ್ಲಿ ಮಾತ್ರ ಧಾನ್ಯ ಹಾಗೂ ತರಕಾರಿ ಬೆಳೆಗಳು ಹಸಿರಿನಿಂದ ನಳನಳಿಸುತ್ತಿದೆ.
ರಾಗಿ, ಶೇಂಗಾ, ನಾಟಿ ಅವರೆ ಕಾಯಿ, ಅಲಸಂದೆ, ತೊಗರಿ, ಹುಚ್ಚೆಳ್ಳು, ಹರಳು ಹಾಗೂ ತರಕಾರಿ ಬೆಳೆ ಹಸಿರಿನಿಂದ ಕೂಡಿದ್ದು, ಆಕರ್ಷಕವಾಗಿದೆ.
ಬೆಟ್ಟದ ಪಕ್ಕದ ಜಮೀನನ್ನು ಸಮತಟ್ಟು ಮಾಡಿ ಕೊಳವೆ ಬಾವಿಯಿಂದ ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸುವ ಮೂಲಕ ಸಮೃದ್ಧವಾಗಿ ಆಹಾರ ಬೆಳೆ ಬೆಳೆದಿದ್ದಾರೆ.
ಜಮೀನು ಸಮತಟ್ಟಾಗುತ್ತಿದ್ದಂತೆ ಅಡಿಕೆ ಸಸಿ ಹಾಕಲು ಸಿದ್ಧಮಾಡಲಾಗುತ್ತಿದೆ ಎಂದೇ ಸುತ್ತಲಿನ ಜನ ನಂಬಿದ್ದರು. ಆದರೆ ಜಮೀನು ಮಾಲೀಕರಾದ ಲಕ್ಷ್ಮಿದೇವಮ್ಮ ಆಹಾರ ಧಾನ್ಯ ಬೆಳೆಯಲು ತಿರ್ಮಾನಿಸಿ, ಕೃಷಿ ಕುರಿತು ಉತ್ತಮ ಜ್ಞಾನ ಹೊಂದಿರುವ ಜುಂಜರಾಮನಹಳ್ಳಿ ಗಂಗಣ್ಣ ಅವರಿಗೆ ಇದರ ಜವಾಬ್ದಾರಿ ನೀಡಿದರು. ಗಂಗಣ್ಣ ಮಳೆ ನೀರಿನಲ್ಲಿಯೇ ವರ್ಷಕ್ಕೆ ಎರಡು ಬೆಳೆ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಆರು ಎಕರೆ ಜಮೀನಿನಲ್ಲಿ ಒಂದು ಅಡಿಯು ಖಾಲಿ ಬಿಡದಂತೆ ಹಲವು ಬೆಳೆ ಬೆಳೆದಿದ್ದಾರೆ.
ಬೆಳೆಗಳಿಗೆ ತುಂತುರು ಹಾಯು ನೀರಿನ ವ್ಯವಸ್ಥೆ ಮಾಡಿದ್ದೇವೆ. ನಾಟಿ ಅವರೆಕಾಯಿ ಅಲಸಂದೆ ತೊಗರಿಯನ್ನು ತೋವಿನಕೆರೆ ಬಸ್ ನಿಲ್ದಾಣದಲ್ಲಿ ಮಾರಾಟ ಮಾಡುತ್ತೇನೆ. ಉತ್ತಮ ಬೇಡಿಕೆ ಇದೆ.-ಗಂಗಣ್ಣ, ಜುಂಜರಾಮನಹಳ್ಳಿ
ಒಂದು ಎಕರೆ ಅಡಿಕೆ ಸಸಿಗೆ ಬೇಕಾಗಬಹುದಾದ ನೀರಿನಲ್ಲಿ ಐದು ಎಕರೆಯಲ್ಲಿ ಆಹಾರ ಬೆಳೆ ಬೆಳೆಯಬಹುದು. ತೆಂಗು ಸೇರಿದಂತೆ ಧಾನ್ಯ ತರಕಾರಿ ಮೇವಿನ ಬೆಳೆ ಮರ ಗೆಣಸು ಬೆಳೆಯುತ್ತಿದ್ದೇವೆ.-ಲಕ್ಷ್ಮಿದೇವಮ್ಮ, ಜಮೀನು ಮಾಲೀಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.