ADVERTISEMENT

Womens Day: ಬರದ ನಾಡಲ್ಲಿ ಹಸಿರು ಕೃಷಿ ಮಾಡಿದ ಗೌರಮ್ಮ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 5:57 IST
Last Updated 8 ಮಾರ್ಚ್ 2024, 5:57 IST
ಮಂಗಳಗೌರಮ್ಮ
ಮಂಗಳಗೌರಮ್ಮ   

ತುಮಕೂರು: ‘ಎಲ್ಲಿ ನೋಡಿದರೂ ಬರಡು ಭೂಮಿ. ಸರಿಯಾಗಿ ಮಳೆಯಿಲ್ಲ, ಬೆಳೆಯಂತೂ ಮೊದಲೇ ಇಲ್ಲ. ಈ ‘ಇಲ್ಲ’ಗಳ ಮಧ್ಯೆಯೇ ಸಮಗ್ರ ಕೃಷಿಯ ಮೂಲಕ ಹಲವು ಬಗೆಯ ಗಿಡಗಳನ್ನು ನೆಟ್ಟು ಯಶಸ್ಸು ಕಂಡಿದ್ದಾರೆ’ ರೈತ ಮಹಿಳೆ ಮಂಗಳಗೌರಮ್ಮ.

ಮಧುಗಿರಿ ತಾಲ್ಲೂಕು ಸದಾ ಬರಕ್ಕೆ ತುತ್ತಾಗುತ್ತಲೇ ಬಂದಿದ್ದು, ಆ ಭಾಗದಲ್ಲಿ ಹಸಿರು ಗೋಚರಿಸಿದರೆ ಮರಳುಗಾಡಿನಲ್ಲಿ ಓಯಸಿಸ್ ಕಂಡಂತೆ. ಆದರೆ ತಾಲ್ಲೂಕಿನ ಮಿಡತರಹಳ್ಳಿಯ ರೈತ ಮಹಿಳೆ ಮಂಗಳಗೌರಮ್ಮ ತಮ್ಮ ಕೃಷಿ ಕಾಯಕ, ಪರಿಸರದ ಮೇಲಿನ ಕಾಳಜಿಯಿಂದ ಇತರರಿಗೆ ಮಾದರಿಯಾಗಿದ್ದಾರೆ. ಮಿಡತರಹಳ್ಳಿಯಲ್ಲಿ 12 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿಯ ಮೂಲಕ ಬರಡು ನೆಲ ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ. ಏಳನೇ ತರಗತಿ ವಿದ್ಯಾಭ್ಯಾಸ ಮಾಡಿದ್ದರೂ ಸಾಧನೆ ಬಹಳ ದೊಡ್ಡದಾಗಿದೆ.

ಮಾವು, ನೇರಳೆ, ಸೀಬೆ, ಬೇವು, ಹುಣಸೆ, ಶ್ರೀಗಂಧ, ರಕ್ತಚಂದನ, ಬಾಳೆ, ತೆಂಗು, ನಿಂಬೆ ಸೇರಿದಂತೆ ಹತ್ತಾರು ಗಿಡಗಳನ್ನು ಬೆಳೆಸಿದ್ದಾರೆ. ಜಮೀನಿನಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದು, ಇವುಗಳ ಮೂಲಕ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಮಂಗಳಗೌರಮ್ಮ ಕೃಷಿಯ ಜತೆಗೆ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.

ADVERTISEMENT

ಪ್ರತಿ ದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಹಸುವಿನಿಂದ ಹಾಲು ಕರೆದು ಡೇರಿಗೆ ಹಾಕುವುದು, ನಂತರ ಗಿಡಗಳ ರಕ್ಷಣೆ, ಹಸು ಮತ್ತು ಕೋಳಿಗಳನ್ನು ಆರೈಕೆ ಮಾಡುವುದು ಇವರ ನಿತ್ಯದ ಕಾಯಕ. ಇವರ ಸಮಗ್ರ ಕೃಷಿ ಪದ್ಧತಿ ನೋಡಲು ದೂರದ ಊರುಗಳಿಂದ ರೈತರು ಜಮೀನಿಗೆ ಭೇಟಿ ನೀಡುತ್ತಿದ್ದಾರೆ. ಇವರ ಜಮೀನು ರೈತರ ‘ಕಲಿಕಾ ಕೇಂದ್ರ’ವಾಗಿ ಬದಲಾಗುತ್ತಿದೆ.

‘ಉತ್ತಮ ಪರಿಸರ ಇಲ್ಲದಿದ್ದರೆ ನಾವು ಜೀವನ ಸಾಗಿಸುವುದು ಕಷ್ಟ. ಪರಿಸರದ ಉಳಿವಿನ ಜತೆಗೆ ನಮಗೆ ಆದಾಯ ತರುವ ಗಿಡಗಳನ್ನು ಹಾಕಬೇಕು ಎಂಬ ಉದ್ದೇಶದಿಂದ ಸಮಗ್ರ ಕೃಷಿ ಮಾಡಲು ಶುರು ಮಾಡಿದೆ. ಈಗ ಅದು ನಮ್ಮ ಕೈ ಹಿಡಿದಿದೆ’ ಎಂದು ಮಂಗಳಗೌರಮ್ಮ ತಮ್ಮ ಅನುಭವದ ಕಥನ ಬಿಚ್ಚಿಡುತ್ತಾರೆ.

ಮಂಗಳಗೌರಮ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.