ಪಾವಗಡ: ತಾಲ್ಲೂಕಿನ ಗುಂಡ್ಲಹಳ್ಳಿ ಬಳಿ ಕಾಡು ಹಂದಿಗಳು ಎರಡು ಎಕರೆ ಪ್ರದೇಶದ ಶೇಂಗಾ ಬೆಳೆಯನ್ನು ಶನಿವಾರ ತಡರಾತ್ರಿ ಹಾಳು ಮಾಡಿವೆ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದ್ದಾರೆ.
ಸುಮಾರು ಐದು ಎಕರೆ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿದೆ. ನಿತ್ಯ ಕಾವಲಿದ್ದರೂ ಕ್ಷಣ ಮಾತ್ರದಲ್ಲಿ ಕಾಡುಹಂದಿಗಳ ಹಿಂಡು ಜಮೀನಿಗೆ ಬಂದು ಶೇಂಗಾ ಬೆಳೆಯನ್ನು ಕಿತ್ತು ಹಾಳು ಮಾಡುತ್ತಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದರು.
ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ಸಂಭವಿಸುತ್ತಿದೆ. ಈ ಬಗ್ಗೆ ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ತಿಳಿಸಿದರೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಪ ಸ್ವಲ್ಪ ಪರಿಹಾರ ನೀಡುವುದಾಗಿ ತಿಳಿಸುತ್ತಾರೆ. ಲಕ್ಷಾಂತರ ರೂಪಾಯಿ ನಷ್ಟವಾದರೆ ₹10ರಿಂದ ₹15 ಸಾವಿರ ಪರಿಹಾರ ನೀಡುತ್ತಾರೆ. ಇದರಿಂದ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ ಎಂದು ದೂರಿದರು.
ಕೃಷಿ, ತೋಟಗಾರಿಕೆ, ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಹಾನಿಯಾಗಿರುವ ಸಂಪೂರ್ಣ ಬೆಳೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರಾದ ಸದಾಶಿವಪ್ಪ, ಹನುಮಂತರಾಯಪ್ಪ, ರಾಮಾಂಜಿ, ನರಸಿಂಹಪ್ಪ, ಹನುಮಂತರಾಯ, ಹನುಮಂತಪ್ಪ, ಮೈಲಾರಪ್ಪ, ನರಸಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.