ತುರುವೇಕೆರೆ: ದೇವರಹಟ್ಟಿ ಗ್ರಾಮದ ರೈತ ತಿಮ್ಮಯ್ಯ ಡಿ.ಎಸ್ ನರೇಗಾ ಯೋಜನೆಯಡಿ ಗುಲಾಬಿ ಸೇರಿದಂತೆ ವಿವಿಧ ಬಗೆ ಹೂವು ಬೆಳೆದು ಬದುಕು ರೂಪಿಸಿಕೊಂಡಿದ್ದಾರೆ.
ಕೇವಲ ಹತ್ತನೇ ತರಗತಿ ಓದಿರುವ ಇವರು, ಉದ್ಯೋಗಕ್ಕಾಗಿ ತುಮಕೂರಿನ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಕೆಲಸ ತೊರೆದು ಸ್ವಉದ್ಯೋಗ ಮಾಡುವ ಹುಮ್ಮಸ್ಸಿನಲ್ಲಿ ಕೃಷಿ ಕೆಲಸಕ್ಕೆ ಮುಂದಾದರು.
ಇವರದು ಅವಿಭಕ್ತ ಕುಟುಂಬ. ಮನೆ ಸದಸ್ಯರೆಲ್ಲರೂ ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದೆಂದು ತರಕಾರಿ ಬೆಳೆಯಲು ಮುಂದಾದರು. ಈ ಬೆಳೆಯಲ್ಲಿ ಅನುಭವ ಇಲ್ಲದೆಯೇ ಟೊಮೊಟೊ, ಬದನೆ, ಬೆಂಡೆ ಹೀಗೆ ತರೇಹವಾರಿ ತರಕಾರಿ ಬೆಳೆದರು. ಇದರಲ್ಲಿ ಅಂತಹ ಲಾಭವೇನು ಸಿಗುತ್ತಿರಲಿಲ್ಲ. ಬಂಡವಾಳವೂ ಕೈತಪ್ಪುತ್ತಿತ್ತು.
ತರಕಾರಿ ಬೆಳೆ ಪ್ರತಿ ಮೂರು ತಿಂಗಳಿಗೊಮ್ಮೆ ಕಟಾವು ಮಾಡಬೇಕು. ಆದರೆ, ಗುಲಾಬಿ 3 ರಿಂದ 4 ವರ್ಷವೆರೆಗೆ ಫಲ ಕೊಡುತ್ತದೆ ಮತ್ತು ಇದಕ್ಕೆ ಸಾರ್ವಕಾಲಿಕ ಬೇಡಿಕೆ ಇರುತ್ತದೆ. ಹಾಗಾಗಿ ಗುಲಾಬಿ ಬೆಳೆಯಲು ಮುಂದಾದರು.
‘ನಾನು ಗುಲಾಬಿ ಬೆಳೆಯುವ ಉದ್ದೇಶದಿಂದ ಸ್ಥಳೀಯ ರೈತರ ಸಲಹೆ ಪಡೆದು, ಹೊಸಕೋಟೆಗೆ ತೆರಳಿ ಅಲ್ಲಿನ ರೈತರು ಸುಮಾರು 15ರಿಂದ 20 ಎಕರೆಯಲ್ಲಿ ಗುಲಾಬಿ ಬೆಳೆದಿರುವುದನ್ನು ನೋಡಿ ಅಚ್ಚರಿಕೊಂಡೆ. ಗುಲಾಬಿ ಹೂ ಕೃಷಿಯ ಸಾಧಕ, ಬಾಧಕ ಬಗ್ಗೆ ಅಲ್ಲಿನ ರೈತರೊಂದಿಗೆ ಚರ್ಚೆ ಮಾಡಿದೆ.’
‘ಅಲ್ಲಿಂದ ಬಂದ ಮೇಲೆ ಒಂದು ಎಕರೆಯಲ್ಲಿ ಗುಲಾಬಿ ಬೆಳೆಯಲು ನಿರ್ಧರಿಸಿದೆ. ಇದಕ್ಕೆ ಪೂರಕ ಬಂಡವಾಳವಾಗಿ ತೋಟಗಾರಿಕೆ ಇಲಾಖೆಯಲ್ಲಿ ನರೇಗಾ ಯೋಜನೆಯಡಿ ₹64 ಸಾವಿರ ಕೂಲಿ ಹಣ ಪಡೆದು ಗುಲಾಬಿ ಕೃಷಿ ಆರಂಭಿಸಿ 1300 ಗುಣಿಗಳನ್ನು ನೆಟ್ಟು ಅವುಗಳಿಗೆ ಬೇಕಾದ ನೀರು, ಅಗತ್ಯ ಪೋಷಕಾಂಶ ನೀಡುತ್ತಾ ಬಂದೆ. ಪ್ರತಿ ಮೂರು ದಿನಕ್ಕೊಮ್ಮೆ ಗುಲಾಬಿ ಕಟಾವು ಮಾಡಲಾಗುತ್ತದೆ‘ ಎಂದು ತಿಮ್ಮಯ್ಯ ವಿವರಿಸಿದರು.
‘ವರಮಹಾಲಕ್ಷ್ಮಿ ವ್ರತ, ಪಿತೃಪಕ್ಷ, ಗೌರಿ ಗಣೇಶನ ಹಲವು ಹಬ್ಬಗಳಿಗೆ ಗುಲಾಬಿ ಕಟಾವು ಮಾಡುತ್ತಾ ಬಂದಿದ್ದೇವೆ. ಒಳ್ಳೆಯ ಬೆಲೆಯೂ ಸಿಕ್ಕಿದೆ. ಕೆಜಿಗೆ ₹400 ರೂಪಾಯಿವರೆಗೂ ಮಾರಾಟವಾಗಿದೆ. ತುರುವೇಕೆರೆ ಸ್ಥಳೀಯ ಮಾರುಕಟ್ಟೆಯಲ್ಲಿ ತುಮಕೂರಿನಷ್ಟೇ ಬೆಲೆ ಸಿಗುತ್ತದೆ. ಆದ್ದರಿಂದ ಲಾಭಕ್ಕೆ ಚಿಂತೆ ಪಡಬೇಕಿಲ್ಲ‘ ಎನ್ನುತ್ತಾರೆ ಅವರು.
ಚೆಂಡು ಹೂವಿಗೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಅದನ್ನೂ ಕೂಡ ಬೆಳೆದಿದ್ದೇನೆ ಎಂದು ವಿವರಿಸಿದರು.
‘ಅಡಿಕೆ ಬೆಳೆ ಹೊರತುಪಡಿಸಿ ಗುಲಾಬಿ ಹೂವು ವಿವಿಧ ಬಗೆಯ ಹಣ್ಣಿನ ಸಸಿ ಹಾಗೂ ಇನ್ನಿತರ ಬೆಳೆಗಳಿಗೆ ಸಹಾಯಧನ ಹಾಗೂ ಹನಿನೀರಾವರಿ ಸೌಲಭ್ಯ ರೈತರಿಗೆ ಸಿಗಲಿದೆ.’ಟಿ.ಆಂಜನೇಯ ರೆಡ್ಡಿ, ತೋಟಗಾರಿಕಾ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.