ADVERTISEMENT

ಜಲಾವೃತಗೊಂಡ ಗುಬ್ಬಿ ವೀರಣ್ಣ ಸಮಾಧಿ

ನಿರ್ವಹಣೆಗೆ ನಿರ್ಲಕ್ಷ್ಯ: ಸ್ಥಳೀಯ ಆಡಳಿತದ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 25 ಮೇ 2024, 15:41 IST
Last Updated 25 ಮೇ 2024, 15:41 IST
ಗುಬ್ಬಿ ವೀರಣ್ಣ ಸಮಾಧಿ ಸ್ಥಿತಿ
ಗುಬ್ಬಿ ವೀರಣ್ಣ ಸಮಾಧಿ ಸ್ಥಿತಿ    

ಗುಬ್ಬಿ: ತಾಲ್ಲೂಕಿನಾದ್ಯಂತ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಪಟ್ಟಣದಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ರಂಗಕರ್ಮಿ ಡಾ.ಗುಬ್ಬಿ ವೀರಣ್ಣ ಹಾಗೂ ಅವರ ಪತ್ನಿಯ ಸಮಾಧಿಗಳು ನೀರಿನಲ್ಲಿ ಮುಳುಗಿವೆ.

ಪಟ್ಟಣ ಪಂಚಾಯಿತಿ, ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಸಮಾಧಿ ನಿರ್ವಹಣೆಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಮಾಧಿಗಳು ತಗ್ಗಿನ ಪ್ರದೇಶದಲ್ಲಿರುವುದರಿಂದ ಮಳೆಯ ನೀರು ಹರಿಯಲು ವ್ಯವಸ್ಥಿತ ಕ್ರಮಕೈಗೊಂಡಿಲ್ಲ. ಸಮಾಧಿಗಳು ಇರುವ ಜಮೀನಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ದಾವೆ ಇದೆ ಎನ್ನುವುದನ್ನೇ ನೆಪ ಮಾಡಿಕೊಂಡ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ರಂಗಪ್ರೇಮಿಗಳು ದೂರಿದ್ದಾರೆ.

ADVERTISEMENT

ಪಟ್ಟಣದಲ್ಲಿ ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಟ್ರಸ್ಟ್ ರಚಿಸಿ ರಂಗಮಂದಿರ ನಿರ್ಮಿಸಿದ್ದರೂ ಸಮಾಧಿಯನ್ನು ನಿರ್ಲಕ್ಷಿಸಿರುವುದು ವಿಪರ್ಯಾಸ ಎಂದು ರಂಗ ಕಲಾವಿದ ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದರು.

ಸಮಾಧಿ ಇರುವ ಜಾಗಕ್ಕೆ ಹೊಂದಿಕೊಂಡಂತೆ ಮಧ್ಯದ ಅಂಗಡಿ ಹಾಗೂ ಡಾಬಗಳು ಇದ್ದು ಅವುಗಳ ತ್ಯಾಜ್ಯದ ನೀರು ಜಮೀನಿಗೆ ಹರಿದು ವಾತಾವರಣ ಮತ್ತಷ್ಟು ಹದಗೆಟ್ಟಿದೆ. ದೀರ್ಘಕಾಲ ನೀರು ನಿಲ್ಲುವುದರಿಂದ ದುರ್ವಾಸನೆ ಬೀರುವ ಜೊತೆಗೆ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಾಧಿಯ ಕಾಯಕಲ್ಪಕ್ಕೆ ಮುಂದಾಗದಿದ್ದರೆ ಕಲಾವಿದರೇ ಸೇರಿಕೊಂಡು ಚಂದ ವಸೂಲಿ ಮಾಡಿ ಸಮಾಧಿ ಜಾಗಕ್ಕೆ ಕಾಯಕಲ್ಪ ನೀಡಲು ಯೋಚಿಸುತ್ತಿದ್ದೇವೆ ಎನ್ನುತ್ತಾರೆ ಕಲಾವಿದ ನರಸಿಂಹಮೂರ್ತಿ.

ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರು ಸಮಾಧಿ ಬಗ್ಗೆ ಶಾಸಕರು ಹಾಗೂ ಸಂಸದರ ಗಮನಕ್ಕೆ ತಂದು ವಿಶೇಷ ಅನುದಾನ ಪಡೆದು ಸಮಾಧಿಯನ್ನು ಸಂರಕ್ಷಿಸಲು ಮುಂದಾಗಬೇಕು ಎನ್ನುತ್ತಾರೆ ಕಲಾವಿದ ಕರಿಯಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.