ADVERTISEMENT

ಅತಿಥಿ ಉಪನ್ಯಾಸಕರ ಮುಷ್ಕರ: ಪಾಠಕ್ಕಾಗಿ ಬೀದಿಗೆ ಬಂದ ವಿದ್ಯಾರ್ಥಿಗಳು

ಎಬಿವಿಪಿ ನೇತೃತ್ವದಡಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:16 IST
Last Updated 4 ಜನವರಿ 2022, 6:16 IST
ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ತುಮಕೂರು: ಮುಷ್ಕರ ಕೈಗೊಂಡಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ತರಗತಿಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಬಿಜಿಎಸ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ ಅವರಿಗೆ ಮನವಿ ಸಲ್ಲಿಸಿದರು.

ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ ಮಾತನಾಡಿ, ‘ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿದ್ದು, ಪೂರ್ಣ ಪ್ರಮಾಣದ ತರಗತಿಗಳು ನಡೆಯದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಪದವಿ ಕಾಲೇಜಿನ ವಿದ್ಯಾರ್ಥಿಗಳು ಮುಂದಿನ ತಿಂಗಳು ಪರೀಕ್ಷೆ ಎದುರಿಸಬೇಕಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲೆಯ 20 ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ‌ 15 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 900 ಅತಿಥಿ ಉಪನ್ಯಾಸಕರು ಕಾರ್ಯನಿ ರ್ವಹಿಸುತ್ತಿದ್ದಾರೆ. ಮುಷ್ಕರದಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ
ವ್ಯಕ್ತಪಡಿಸಿದರು.

ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ನಗರ ಕಾರ್ಯದರ್ಶಿ ಪ್ರತಾಪ್ ಸಿಂಹ, ಸಂಘಟನೆಯ ಪದಾಧಿಕಾರಿಗಳಾದ ಮದ್ವೇಶ್, ಕೆ.ಸಿ. ಅರ್ಪಿತಾ, ಜೀವನ್, ಬೈರೇಶ್, ಪಲ್ಲವಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.