ತುಮಕೂರು: ಹನುಮದ್ವ್ರತ ಪ್ರಯುಕ್ತ ನಗರದ ಆಂಜನೇಯ ಸ್ವಾಮಿ ದೇಗುಲಗಳಲ್ಲಿ ಭಾನುವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಕೋಟೆ ಆಂಜನೇಯ ಸ್ವಾಮಿಯ ದೇವಸ್ಥಾನದ ಬಳಿ ಆಂಜನೇಯ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು. ನೂರಾರು ಜನ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ದೇವಾಲಯಕ್ಕೆ ಬರುವ ಭಕ್ತರಿಗೆ ಯುವಕರ ಬಳಗದಿಂದ ಹೆಸರು ಬೇಳೆ, ಪಾನಕ, ಮಜ್ಜಿಗೆ ವಿತರಿಸಲಾಯಿತು.
ಆಂಜನೇಯ ಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಗುಲವನ್ನು ವಿವಿಧ ಹೂವುಗಳಿಂದ ಸಿಂಗರಿಸಲಾಗಿತ್ತು. ಸಾರ್ವಜನಿಕರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಾಲಯಗಳಲ್ಲಿ ವಿಶೇಷ ಅಭಿಷೇಕ, ಹೋಮ ಹವನ, ವೇದ ಘೋಷಣೆ, ಭಜನೆ ಕಾರ್ಯಕ್ರಮ ನಡೆಯಿತು. ವಿವಿಧೆಡೆ ಇರುವ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಹನುಮ ನಾಮ ಸ್ಮರಣೆ ಜೋರಾಗಿತ್ತು.
ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನ, ಅಭಯ ಆಂಜನೇಯ ಸ್ವಾಮಿ ದೇಗುಲ, ಆರ್‌ಟಿಒ ಕಚೇರಿ ಮುಂಭಾಗದ ವರ ಪ್ರಸಾದ ವೀರಾಂಜನೇಯ ಸ್ವಾಮಿ ದೇವಾಲಯ, ಬಟವಾಡಿ ಸಮೀಪದ ಭಕ್ತಾಂಜನೇಯ ಸ್ವಾಮಿ ದೇಗುಲ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ನಗರದ ಬಿ.ಎ.ಗುಡಿ ಪಾಳ್ಯದ ಬಯಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಅರಿಸಿನ- ಕುಂಕುಮ ಅಲಂಕಾರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.