ಚಿಂತಾಮಣಿ: ‘ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವವರು ಗೋಮಾಂಸ ರಫ್ತನ್ನು ನಿಷೇಧಿಸಲಿ’ ಎಂದು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಿ.ಎಚ್.ನರಸಿಂಹಯ್ಯ ಹೇಳಿದರು.
ಸಂಘದ ತಾಲ್ಲೂಕು ಘಟಕವು ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅನೇಕ ರೈತ ವಿರೋಧಿ ಕಾಯ್ದೆಗಳಿಂದ ಹೈರಾಣಾಗಿರುವ ರೈತರು ಗೋಹತ್ಯೆ ನಿಷೇಧ ಕಾಯ್ದೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ರೈತರು ತಾವು ಜೀವನ ನಡೆಸುವುದೇ ಕಷ್ಟ. ಹೀಗಿರುವಾಗ ವಯಸ್ಸಾದ ರಾಸುಗಳನ್ನು ಸಾಕುವುದು ಹೇಗೆ. ಬಹುತೇಕ ಮುಂದುವರಿದ ಸಮುದಾಯದವರೆ ಗೋಮಾಂಸ ರಫ್ತು ಮಾಡುತ್ತಾರೆ. ಹೀಗಾಗಿ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಮಾಡುತ್ತದೆ. ಆದರೆ ಗೋಮಾಂಸ ರಫ್ತು ನಿಷೇದ ಮಾಡುವುದಿಲ್ಲ’ ಎಂದು ಟೀಕಿಸಿದರು.
ಹೊರಗಡೆಯಿಂದ ಬಂದ ಆರ್ಯರು ದೇಶದಲ್ಲಿ ಜಾತಿಗಳನ್ನು ಸೃಷ್ಟಿಸಿ ದೇಶದ ಒಗ್ಗಟ್ಟು ಒಡೆದರು. ಗೋವನ್ನು ರೈತರು ಮಾತೆಯಂತೆ ಪೂಜಿಸುತ್ತಾರೆ. ರೈತರಿಗೆ ಬೇರೆಯವರು ಹೇಳಿಕೊಡಬೇಕಿಲ್ಲ. ಹಾಲು, ಮೊಸರು, ತುಪ್ಪವನ್ನು ಸಮಾಜಕ್ಕೆ ನೀಡುತ್ತೇವೆ. ಎತ್ತುಗಳನ್ನು ಉಪಯೋಗಿಸಿಕೊಂಡು ವ್ಯವಸಾಯ ಮಾಡಿ ಇಡೀ ದೇಶಕ್ಕೆ ಅನ್ನ ನೀಡುತ್ತೇವೆ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ ಮಾತನಾಡಿ, ‘ಶಾಶ್ವತ ನೀರಾವರಿಗಾಗಿ ದಶಕಗಳಿಂದ ಹೋರಾಟ ಮಾಡುತ್ತಿದ್ದೇವೆ. ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ 10 ಸಾವಿರ ದ್ವಿಚಕ್ರ ವಾಹನಗಳಲ್ಲಿ ತೆರಳಿ ಹೋರಾಟ ನಡೆಸಿದ್ದರು. ಶಾಸಕ ಎಂ.ಕೃಷ್ಣಾರೆಡ್ಡಿ ಸಾವಿರಾರು ಜನರೊಂದಿಗೆ ಪಾದಯಾತ್ರೆಯ ಮೂಲಕ ತೆರಳಿದ್ದರು. ಶಾಶ್ವತ ನೀರಾವರಿ ಹೋರಾಟದ ಮೂಲಕ ಪ್ರತಿಭಟನೆ ನಡೆಯುತ್ತಿದ್ದರೂ ಪ್ರತಿಫಲ ಮಾತ್ರ ದೊರೆಯಲಿಲ್’ಲ ಎಂದು ವಿಷಾದಿಸಿದರು.
ರೈತ ಸಂಘದ ಅಧ್ಯಕ್ಷ ಜೆ.ವಿ.ರಘುನಾಥರೆಡ್ಡಿ, ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಶ್, ಮುಖಂಡ ನಾರಾಯಣಗೌಡ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಲಕ್ಷ್ಮಿನರಸಮ್ಮ ಮಾತನಾಡಿದರು.
ತಹಶೀಲ್ದಾರ್ ಹನುಮಂತರಾಯಪ್ಪ, ಡಿವೈಎಸ್‌ಪಿ ಲಕ್ಷ್ಮಯ್ಯ, ರೈತ ಸಂಘಟನೆ ಮುಖಂಡರಾದ ಕೆ.ವೆಂಕಟರಾಮಯ್ಯ, ವಿ.ಸತ್ಯನಾರಾಯಣ್, ಎಂ.ಆರ್.ಲಕ್ಷ್ಮಿನಾರಾಯಣ್, ಚೈತ್ರ, ಚೌಡಪ್ಪ, ವರಲಕ್ಷ್ಮಮ್ಮ, ಚಂದ್ರಕ, ಚೌಡಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.