ADVERTISEMENT

ಹೇಮೆ ಕಾಮಗಾರಿ: ಭದ್ರತೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 6:02 IST
Last Updated 30 ಜೂನ್ 2024, 6:02 IST
ಗುಬ್ಬಿ ತಾಲ್ಲೂಕಿನ ಚೆನ್ನೇನಹಳ್ಳಿ ಬಳಿ ಈಚೆಗೆ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ಗೆ ಜೆಸಿಬಿ ಮೂಲಕ ಮಣ್ಣು ಮುಚ್ಚಲಾಯಿತು
ಗುಬ್ಬಿ ತಾಲ್ಲೂಕಿನ ಚೆನ್ನೇನಹಳ್ಳಿ ಬಳಿ ಈಚೆಗೆ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ಗೆ ಜೆಸಿಬಿ ಮೂಲಕ ಮಣ್ಣು ಮುಚ್ಚಲಾಯಿತು   

ತುಮಕೂರು: ತೀವ್ರ ವಿರೋಧದ ನಡುವೆ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿಯನ್ನು ಜುಲೈ 1ರಿಂದ ಆರಂಭಿಸಲು ಸರ್ಕಾರ ಮುಂದಾಗಿದೆ.

ಜುಲೈ 1ರಿಂದ ಕಾಮಗಾರಿ ಆರಂಭಿಸುತ್ತಿದ್ದು, ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೇಮಾವತಿ ನಾಲಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪತ್ರ ಬರೆದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಜಿಲ್ಲೆಯ ಸಚಿವರು, ಶಾಸಕರ ಸಭೆ ನಡೆದಿತ್ತು. ಕುಣಿಗಲ್‌ ಮೂಲಕ ಮಾಗಡಿ ತಾಲ್ಲೂಕಿಗೆ ಪೈಪ್‌ಲೈನ್‌ನಲ್ಲಿ ಹೇಮಾವತಿ ನೀರು ಹರಿಸಲು ಜಿಲ್ಲೆಯ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಾಕಷ್ಟು ಚರ್ಚೆಯ ನಂತರ ತಾಂತ್ರಿಕ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ಸಮಿತಿ ವರದಿ ನೀಡಿದ ನಂತರ ಚರ್ಚಿಸಿ ಕ್ರಮ ವಹಿಸಲು ಒಮ್ಮತಕ್ಕೆ ಬರಲಾಗಿತ್ತು.

ADVERTISEMENT

ಆದರೆ ಸಮಿತಿ ವರದಿ ನೀಡುವ ಮುನ್ನವೇ ಕಾಮಗಾರಿ ಆರಂಭಿಸಲು ಸರ್ಕಾರ ಮುಂದಾಗಿದೆ. ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ರೈತರು, ಹೋರಾಟಗಾರರು, ವಿವಿಧ ಮಠಾಧೀಶರು ನಾಲೆಗೆ ಮಣ್ಣು ಸುರಿದು ಪ್ರತಿಭಟಿಸಿದ್ದರು. ನಂತರ ಕಾಮಗಾರಿ ತಡೆದಿದ್ದರು. ಹೋರಾಟ ತೀವ್ರಗೊಂಡಿದ್ದನ್ನು ಮನಗಂಡು ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಕೆಲಸ ನಿಲ್ಲಿಸಿದ್ದರೂ ಹೋರಾಟ ಮುಂದುವರಿದಿತ್ತು. ಮಂಗಳವಾರ ಜಿಲ್ಲಾ ಬಂದ್‌ ಮಾಡಲಾಗಿತ್ತು. ಮುಂದಿನ ಹೋರಾಟಕ್ಕೆ ಸಜ್ಜಾಗುತ್ತಿರುವ ಸಮಯದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.