ತುಮಕೂರು: ನಾಡಿನ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಹಾಗೂ ಜಿಲ್ಲೆಯ ಮಕ್ಕಳ ಸಾಹಿತಿ, ಸಂಘಟಕ ಸಿದ್ಧರಾಜ್ ಐವಾರ್ ಅವರಿಗೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಭವನದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿರಿಯ ರಂಗ ಕಲಾವಿದ ಡಾ.ಲಕ್ಷ್ಮಣದಾಸ್, ಮಾಸ್ಟರ್ ಹಿರಣ್ಣಯ್ಯನವರ ನಾಟಕ ಕಂಪನಿಯ ಇತಿಹಾಸ ಬೆಳೆದು ಬಂದ ಬಗೆ, ಅವರೊಂದಿಗಿನ ಒಡನಾಟದ ಅನುಭವವನ್ನು ನೆನಪಿಸಿಕೊಂಡರು.
ಹಿರಣ್ಣಯ್ಯ ಅವರು ಪ್ರೇಕ್ಷಕರನ್ನು ಅನ್ನದಾತರೆಂದು ಕರೆದರು. ರಂಗಭೂಮಿಗೆ ಹೊಸ ಸಂಚಲನ ತಂದರು. ಇಂದಿನ ಅನೇಕ ಹಾಸ್ಯನಟರು ಅವರ ಕಂಪನಿಯಿಂದ ಪಳಗಿ ಬಂದವರು ಎಂದು ಮಾಸ್ಟರ್ ಹಿರಣ್ಣಯ್ಯ ಅವರ ಸಾಧನೆಗಳನ್ನು ಬಣ್ಣಿಸಿದರು.
‘ಸಿದ್ಧರಾಜ್ ಐವಾರ್ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಎಲ್ಲರೊಂದಿಗೆ ಬೆರೆತು ಮಕ್ಕಳಿಗಾಗಿ ಕಣ್ಮುಚ್ಚಾಲೆ ಗುಂಪು ಪ್ರಾರಂಭಿಸಿದ್ದರು’ ಎಂದರು.
ತುಮಕೂರು ನಗರ ಘಟಕದ ಅಧ್ಯಕ್ಷೆ ಅನ್ನಪೂರ್ಣ ವೆಂಟನಂಜಪ್ಪ, ‘ಹಿರಣ್ಣಯ್ಯ ನಾಟಕಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು ಎಂದು ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ‘ಹಿರಣ್ಣಯ್ಯನವರು ನಮ್ಮ ಜಿಲ್ಲೆಯವರು ಎಂಬ ಹೆಗ್ಗಳಿಕೆ ನಮ್ಮದು. ಅವರು ನಾಟಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಗಾಧವಾದುದು’ ಎಂದು ನುಡಿದರು.
‘ಸಿದ್ಧರಾಜ್ ಐವಾರ್ ಅವರು ಆರ್ಥಿಕ ಸೌಲಭ್ಯವಿಲ್ಲದಿದ್ದರೂ ಕೂಡ ಸ್ವಪ್ರಯತ್ನದಿಂದ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಣ್ಮುಚ್ಚಾಲೆ ಗುಂಪು ರಚಿಸಿದರು. ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಿದ್ದರು’ ಎಂದು ಸ್ಮರಿಸಿದರು.
ತು.ಬಿ.ಮಲ್ಲೇಶ್, ದೊಂಬರನಹಳ್ಳಿ ನಾಗರಾಜ್, ಸೀಗೆಹಳ್ಳಿ ನಾರಾಯಣ, ನಾಗರತ್ನ ಚಂದ್ರಪ್ಪ, ಪದ್ಮಾ ಕೃಷ್ಣಮೂರ್ತಿ, ಗೀತಾ ನಾಗೇಶ್ ಮಾತನಾಡಿದರು.
ಕಸಾಪ ಕಾರ್ಯದರ್ಶಿ ಕೆ.ರವಿಕುಮಾರ್, ಕೋಶಾಧ್ಯಕ್ಷ ಬಿ.ಮರುಳಯ್ಯ, ಸಿ.ಎಲ್.ಸುನಂದಮ್ಮ, ಲಲಿತಾ ಮಲ್ಲಪ್ಪ, ಪುಷ್ಪಾ ರಘು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.