ADVERTISEMENT

ಎಚ್‌ಐವಿ: ಸದ್ದಿಲ್ಲದೆ ದಾಖಲೆ ಮಾಡುತ್ತಿರುವ ಕುಣಿಗಲ್ ತಾಲ್ಲೂಕಿನ ದಯಾಕಿರಣ

35 ಸಾವಿರ ಎಚ್‌ಐವಿ ಬಾಧಿತರಿಗೆ ಚಿಕಿತ್ಸೆ: ಮಕ್ಕಳ ಸಂರಕ್ಷಣೆ, ಪೋಷಣೆ, ದತ್ತು

ಟಿ.ಎಚ್.ಗುರುಚರಣ್ ಸಿಂಗ್
Published 25 ನವೆಂಬರ್ 2024, 7:45 IST
Last Updated 25 ನವೆಂಬರ್ 2024, 7:45 IST
ಕುಣಿಗಲ್ ತಾಲ್ಲೂಕು ವಾಣಿಗೆರೆಯ ದಯಾಕಿರಣ ದತ್ತು ಕೇಂದ್ರ
ಕುಣಿಗಲ್ ತಾಲ್ಲೂಕು ವಾಣಿಗೆರೆಯ ದಯಾಕಿರಣ ದತ್ತು ಕೇಂದ್ರ   

ಕುಣಿಗಲ್: 35 ಸಾವಿರ ಎಚ್‌ಐವಿ ಬಾಧಿತರಿಗೆ ಚಿಕಿತ್ಸೆ ನೀಡಿ ದಾಖಲೆ ಮಾಡಿದ ಕುಣಿಗಲ್ ತಾಲ್ಲೂಕಿನ ದಯಾಭವನ ಸಂಸ್ಥೆ ಕಳೆದ ಐದು ವರ್ಷಗಳ ಹಿಂದೆ ದಯಾಕಿರಣ ದತ್ತು ಕೇಂದ್ರ ಪ್ರಾರಂಭಿಸಿ ಅತಿ ಹೆಚ್ಚು ಮಕ್ಕಳನ್ನು ಸಂರಕ್ಷಣೆ, ಪೋಷಣೆ ಮತ್ತು ದತ್ತು ನೀಡುವುದರಲ್ಲಿ ದಾಖಲೆ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.

ಕೇರಳ ಮೂಲದ ದಯಾಭವನ ಸಂಸ್ಥೆ 2003ರಲ್ಲಿ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿ ವಾಣಿಗೆರೆಯಲ್ಲಿ ಪ್ರಾರಂಭವಾಗಿ ಇದುವರೆಗೂ 35 ಸಾವಿರ ಎಚ್‌ಐವಿ ಬಾಧಿತರಿಗೆ ಚಿಕಿತ್ಸೆ ನೀಡಿ ಪ್ರಸ್ತುತ ಜಿಲ್ಲಾ ಕೇಂದ್ರದಲ್ಲಿ ದಯಾ ಸ್ಪರ್ಶ ಆಸ್ಪತ್ರೆ ಆರಂಭಿಸಿದೆ.

2019ರಲ್ಲಿ ಜಿಲ್ಲೆಯ ಪ್ರಥಮ ದತ್ತುಕೇಂದ್ರವಾಗಿ ದಯಾಕಿರಣ ದತ್ತು ಕೇಂದ್ರ ಪ್ರಾರಂಭವಾಗಿದ್ದು, ಸಂಸ್ಥೆಯು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಮಹಿಳ ಮತ್ತು ಮಕ್ಕಳ ಕ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ನಿಕೃಷ್ಟ ಸ್ಥಿತಿಯಲ್ಲಿ ಸಿಕ್ಕ ಅನಾಥ, ಪರಿತ್ಯಕ್ತ ಮತ್ತು ಅಶಕ್ತ ಪೋಷಕರಿಂದ ವಶಕ್ಕೆ ನೀಡಿದ 0-6 ವರ್ಷದ ಮಕ್ಕಳನ್ನು ಸಂರಕ್ಷಣೆ, ಪೋಷಣೆ ಮತ್ತು ದತ್ತು ನೀಡುವ ಕಾರ್ಯದಲ್ಲಿ ತೊಡಗಿದೆ. ಐದು ವರ್ಷದಲ್ಲಿ 171 ಮಕ್ಕಳನ್ನು ಸಂರಕ್ಷಿಸಿ 115 ಮಕ್ಕಳನ್ನು ಅರ್ಹ ದಂಪತಿಗಳಿಗೆ ದತ್ತು ನೀಡಿದೆ. (43 ಗಂಡು, 72 ಹೆಣ್ಣು ಮಕ್ಕಳು) ಹತ್ತು ಮಕ್ಕಳನ್ನು ವಿದೇಶದ ಪೋಷಕರು ದತ್ತು ಪಡೆದಿರುವುದು ಸಹ ವಿಶೇಷ. ಬಹುತೇಕ ಎಲ್ಲವೂ ವಿಶೇಷ ಅಗತ್ಯತೆಯ ಮಕ್ಕಳು ( ದೈಹಿಕ ನೂನ್ಯತೆ, ಬೆಳವಣಿಕೆ ಕುಂಠಿತ ಮಕ್ಕಳು)

ADVERTISEMENT

ಬೇಡವಾದ ಎಳೆಯ ಕೂಸುಗಳನ್ನು ಚರಂಡಿ, ಬೇಲಿ ಮಗ್ಗುಲು, ಬಾವಿ, ಕಸದ ತೊಟ್ಟಿಯಲ್ಲಿ ಎಸೆಯದೆ ಅಂತಹ ಮಕ್ಕಳನ್ನು ತೊಟ್ಟಿಗೆ ಬೇಡ ತೊಟ್ಟಿಲಿಗೆ ಹಾಕಿ ನಂತರ ಸುರಕ್ಷಿತವಾಗಿ ಮಮತೆಯ ತೊಟ್ಟಿಲು ಸೇರಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ದಯಾಕಿರಣ ಸಂಸ್ಥಯ ಮಕ್ಕಳನ್ನು ದತ್ತು ಪಡೆಯಲು ಕೇಂದ್ರದ ನೀತಿಯಂತೆ ಸಿಎಆರ್‌ಎ ಮೂಲಕ ನೋಂದಣಿಮಾಡಿಸಿದ ಪೋಷಕರು ಸರತಿಯಂತೆ ದತ್ತು ಪಡೆಯುವ ಪ್ರಕ್ರಿಯೆಗಳ ನಡೆಯುತ್ತವೆ.

ಮಕ್ಕಳನ್ನು ತೊಟ್ಟಿಗೆ ಹಾಕುವ ಬದಲು ಮಮತೆಯ ತೊಟ್ಟಿಲಲ್ಲಿ ಹಾಕಲು ಮನವಿ ಮಾಡಿರುವ ಇಲಾಖೆ ಸೂಚನೆ ಮೇರೆಗೆ ಜಿಲ್ಲಾಸ್ಪತ್ರೆ ಸೇರಿದಂತೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಮತೆಯ ತೊಟ್ಟಿಲುಗಳನ್ನು ಇಡಲಾಗಿದ್ದು, ದಯಾಕಿರಣ ದತ್ತುಕೇಂದ್ರದಲ್ಲಿರುವ ಮಮತೆಯ ತೊಟ್ಟಿಲಿಗೆ ಅಶಕ್ತ ಪೋಷಕರು ಮೂರು ಕೂಸುಗಳನ್ನು ತಂದು ಹಾಕಿದ್ದಾರೆ. ಎಲ್ಲ ಮಕ್ಕಳನ್ನು ಸಂರಕ್ಷಿಸಲಾಗಿದೆ ಎಂದು ಸಂಯೋಜಕ ರಮೇಶ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನಿಯಮಗಳ ಪಾಲನೆ: ದತ್ತು ಪ್ರಕ್ರಿಯೆಗಳು ನಿಯಮಾವಳಿಗಳ ಪ್ರಕಾರ ನಡೆಯಬೇಕಿದೆ. ಕೇಂದ್ರ ಸರ್ಕಾರದ ಸಿಎಆರ್‌ಎ ಆನ್‌ಲೈನ್ ನೋಂದಣಿ ಮೂಲಕ ದೇಶದ ಯಾವುದೇ ಮೂಲೆಯ ದತ್ತು ಕೇಂದ್ರದಿಂದ ಮಕ್ಕಳನ್ನು ದತ್ತು ಪಡೆಯಬಹುದಾಗಿದೆ. ಅಡ್ಡ ಮಾರ್ಗದಲ್ಲಿ ಅನೈತಿಕವಾಗಿ, ಅವ್ಯವಹಾರಿಕವಾಗಿ ದತ್ತು ಪಡೆಯುವುದನ್ನು ತಡೆಯಲು ಜಿಲ್ಲೆಯಲ್ಲಿ ಪ್ರಥಮ ದತ್ತು ಕೇಂದ್ರ ಪ್ರಾರಂಭವಾಗಿದ್ದು, ವ್ಯವಸ್ಥಿತವಾಗಿ ನಡೆಯುತ್ತಿರುವುದು ಜಿಲ್ಲೆಯ ಹೆಮ್ಮೆಯ ವಿಷಯ ಎನ್ನುತ್ತಾರೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್.

ಮಮತೆಯ ತೊಟ್ಟಿಲು (ಮೂರು ಮಕ್ಕಳು ತಂದು ಕಾಕಿದ ಅಶಕ್ತ ಪೋಷಕರು)
 ಜೀನೇಶ್ ಕೆ. ವರ್ಕಿ

ತಮಗೆ ಹೆಣ್ಣು ಮಗುವಿದ್ದು ಮತ್ತೊಂದು ಮಗುವಿನ ಬಯಕೆಯಿಂದಾಗಿ ದತ್ತು ಕೇಂದ್ರದಲ್ಲಿದ್ದ ವಿಶೇಷ ಅಗತ್ಯೆತೆಯ ಗಂಡು ಮಗುವನ್ನು ದತ್ತು ಪಡೆದುಕೊಂಡಿರುವುದರಿಂದ ಜೀವನದ ಸಾರ್ಥಕತೆ ಪಡೆದಂತಾಗಿದೆ –ಶೃತಿ ಕೃಷ್ಣನ್ ದತ್ತು ಪಡೆದ ದಂಪತಿ

ಪೋಷಕರ ಸಭೆ ನಡೆಸಿ ಆತ್ಮಾವಲೋಕನ ಮಕ್ಕಳನ್ನು ದತ್ತು ನೀಡಿದ ಬಳಿಕ ಸತತ ಎರಡು ವರ್ಷ ಪೋಷಕರ ಸಂಪರ್ಕದಲ್ಲಿದ್ದು ಮಗುವಿನ ಅನುಪಾಲನಾ ವರದಿ ದಾಖಲಿಸಿ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪ್ರತಿವರ್ಷ ದತ್ತು ಪಡೆದ ಮತ್ತು ದತ್ತು ಪಡೆಯುವ ಸಂಭಾವನೀಯ ಪೋಷಕರ ಸಭೆ ನಡೆಸಿ ಆತ್ಮಾವಲೋಕನ ಮಾಡಿಕೊಳ್ಳಲಾಗುತ್ತಿದೆ ಎಂದು ದಯಾಕಿರಣ ಮುಖ್ಯಸ್ಥ ಜೀನೇಶ್ ಕೆ.ವರ್ಕಿ ತಿಳಿಸಿದ್ದಾರೆ.

ವ್ಯವಸ್ಥಿತ ನಿರ್ವಹಣೆ

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಕ್ಕಳನ್ನು ದತ್ತು ನೀಡಿ ದಾಖಲೆ ಮಾಡಿರುವ ದಯಾಕಿರಣ ದತ್ತುಕೇಂದ್ರ ಜಿಲ್ಲೆಯಲ್ಲಿರುವುದು ವಿಶೇಷ. ವ್ಯವಸ್ಥಿತ ನಿರ್ವಹಣೆಯಲ್ಲಿ ಮಕ್ಕಳ ಸಂರಕ್ಷಣೆ ಮತ್ತು ದತ್ತು ನೀಡುವಿಕೆಯಲ್ಲಿ ನಿಯಮಗಳ ಪಾಲನೆ ಮಾಡುತ್ತಿರುವುದಿಂದ ಸಮಸ್ಯೆಗಳಿಗೆ ಅವಕಾಶ ನೀಡದೆ ಸೇವಾಮನೋಭಾವದ ಕಾರ್ಯದಿಂದ ವಿಶೇಷ ದಾಖಲೆಗೆ ಪಾತ್ರವಾಗಿದೆ. ದಿನೇಶ್ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.