ADVERTISEMENT

ಪೊಲೀಸ್ ಠಾಣೆ ಹೆಚ್ಚಿಸಿದರೆ ಅಪರಾಧ ಸಂಖ್ಯೆ ಕಡಿಮೆಯಾಗುತ್ತಾ?: ನಾಗಮೋಹನ್‌ ದಾಸ್

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 11:39 IST
Last Updated 28 ಜೂನ್ 2022, 11:39 IST
ನಿವೃತ್ತ ನ್ಯಾಯಾಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್‌ ಅವರು ಮುನ್ಸಿಪಲ್‌ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿದರು.
ನಿವೃತ್ತ ನ್ಯಾಯಾಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್‌ ಅವರು ಮುನ್ಸಿಪಲ್‌ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿದರು.   

ತುಮಕೂರು: ಪಠ್ಯ ಪರಿಷ್ಕರಣೆ ಮಾಡಿ, ಇಲ್ಲ ಸಲ್ಲದ್ದನ್ನು ಹಾಕಿ ಜನರ ಮಧ್ಯೆ ವಿಷ ಬಿತ್ತುವ ಪ್ರಕ್ರಿಯೆ ಆರಂಭವಾಗಿದೆ ಎಂದು ನಿವೃತ್ತ ನ್ಯಾಯಾಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್‌ ಇಲ್ಲಿ ಮಂಗಳವಾರ ಆತಂಕ ವ್ಯಕ್ತಪಡಿಸಿದರು.

ಸಿಐಟಿಯು ಮುನ್ಸಿಪಲ್ ಕಾರ್ಮಿಕರ ಸಂಘ ಹಮ್ಮಿಕೊಂಡಿದ್ದ ಮುನ್ಸಿಪಲ್‌ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ‘ದೇಶ ಎದುರಿಸುತ್ತಿರುವ ಸಮಸ್ಯೆ, ಸವಾಲು ಹಿಮ್ಮೆಟ್ಟಿಸುವ, ಮಾನವೀಯ ಮೌಲ್ಯ ಬೆಳೆಸುವ, ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಳ್ಳುವ ಶಿಕ್ಷಣದ ಅವಶ್ಯಕತೆಯಿದೆ. ಇದನ್ನು ಬಿಟ್ಟು ಜಾತಿ, ಧರ್ಮ, ವರ್ಗದ ಹೆಸರಲ್ಲಿ ಮಕ್ಕಳ ಮನಸ್ಸಲ್ಲಿ ವಿಷ ಬೀಜ ಬಿತ್ತ ಬೇಡಿ’ ಎಂದು ಆಗ್ರಹಿಸಿದರು.

ಜನರಲ್ಲಿ ನಾಗರಿಕ ಮೌಲ್ಯ ಬಿತ್ತುವ ಬದಲು, ಪೊಲೀಸ್ ಠಾಣೆಗಳನ್ನು ಜಾಸ್ತಿ ಮಾಡಿದರೆ ಅಪರಾಧ ಸಂಖ್ಯೆ ಕಡಿಮೆಯಾಗುತ್ತಾ? ಎಲ್ಲರಿಗೂ ಗುಣಾತ್ಮಕ ಶಿಕ್ಷಣ ನೀಡಿ, ನೈತಿಕ ಪಾಠ ಹೇಳಬೇಕು. ಆಗ ಸಾರ್ವಜನಿಕರು ನೆಮ್ಮದಿಯಿಂದ ಬದುಕಲು ಸಾಧ್ಯ. ಠಾಣೆಗಳನ್ನು ಜಾಸ್ತಿ ಮಾಡಿದರೆ ಅಪರಾಧ ಕಡಿಮೆಯಾಗಲು ಸಾಧ್ಯವಿಲ್ಲ ಎಂಬ ತಿಳಿವಳಿಕೆ ಸರ್ಕಾರಗಳಿಗೆ ಇಲ್ಲ. ಹಾಗಾಗಿಯೇ ಪ್ರಸ್ತುತ ಸಾಂಸ್ಕೃತಿಕ ದಿವಾಳಿತನ ನೋಡುತ್ತಿದ್ದೇವೆ ಎಂದು ಹೇಳಿದರು.

ADVERTISEMENT

ದೇಶದಲ್ಲಿ ಅಕ್ಷರ ಜ್ಞಾನ ಜಾಸ್ತಿಯಾಗಿದೆ. ಆದರೆ, ಗುಣಾತ್ಮಕ, ಸಮಾನ ಶಿಕ್ಷಣ ಸಿಗುತ್ತಿಲ್ಲ. ಇಂಟರ್‌‌ನ್ಯಾಷನಲ್‌, ಸಿಬಿಎಸ್‌ಸಿ, ಖಾಸಗಿ, ಪಬ್ಲಿಕ್‌, ಅನುದಾನಿತ ಸರ್ಕಾರಿ ಶಾಲೆಗಳ ಮೂಲಕ ಅಸಮಾನ ಶಿಕ್ಷಣ ನೀತಿ ನೋಡುತ್ತಿದ್ದೇವೆ. ಆಡಳಿತ ವರ್ಗದಲ್ಲಿರುವವರ ಮಕ್ಕಳಿಗೂ ನಮ್ಮ ಮಕ್ಕಳಿಗೂ ಸಮಾನ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಇದರ ಬದಲಾಗಿ ಸ್ವಚ್ಛಗಾರರು, ವಾಟರ್‌ಮ್ಯಾನ್‌, ಕಸ ಸಂಗ್ರಹಿರುವವರು– ಹೀಗೆ ಕಾರ್ಮಿಕರನ್ನು ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಮಾಡಿದ ಕೆಲಸವನ್ನು ಈಗಿನ ಸರ್ಕಾರಗಳು ಮಾಡುತ್ತಿದೆ. ಇದನ್ನು ತಡೆಯಲು ಕಾರ್ಮಿಕರು ಒಂದಾಗಬೇಕು ಎಂದು ಸಲಹೆ ಮಾಡಿದರು.

ನಿರುದ್ಯೋಗವನ್ನು ನಿರ್ಲಕ್ಷ್ಯ ಮಾಡಬಾರದು. ನಿರುದ್ಯೋಗಕ್ಕೂ ಕಳ್ಳತನ, ಅಪರಾಧ, ಭ್ರಷ್ಟಾಚಾರ, ಭಯೋತ್ಪಾದನೆ, ಕೋಮುವಾದ, ಆತ್ಮಹತ್ಯೆಗೂ ಸಂಬಂಧವಿದೆ. ಸರ್ಕಾರ ಇಂತಹ ವಿಚಾರಗಳ ಬಗ್ಗೆ ಯೋಚನೆ ಮಾಡುತ್ತಿಲ್ಲ. ಅನೇಕರ ತ್ಯಾಗ, ಬಲಿದಾನ, ಹೋರಾಟಗಳಿಂದ ಪಡೆದ ಹಕ್ಕುಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ ಎಂದರು.

ಸರ್ಕಾರ ಸಾರ್ವಜನಿಕರ ಸ್ವತ್ತನ್ನು ಖಾಸಗಿಯವರಿಗೆ ನೀಡುತ್ತಿರುವುದರಿಂದ ಉದ್ಯೋಗ ಭರ್ತಿಯಾಗುತ್ತಿಲ್ಲ. ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆಯಾಗಿದೆ. ತಂತ್ರಜ್ಞಾನ ಮುನ್ಸಿಪಲ್ ಕಾರ್ಮಿಕರ ಕೆಲಸಕ್ಕೆ ಯಾಕೆ ಬಳಕೆಯಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಡುವ ಹಣದಲ್ಲಿ ಸ್ಲಂ ಮಕ್ಕಳಿಗಾಗಿ ವಸತಿ ಶಾಲೆ ಆರಂಭಿಸಬೇಕು. ಆ ಶಾಲೆಗಳಲ್ಲಿ ಓದುವ ಮಕ್ಕಳು ಮುಂದೆ ನನ್ನಂತೆ ಉನ್ನತ ಸ್ಥಾನ ಅಲಂಕರಿಸಬೇಕು ಎಂದು ಹೇಳಿದರು.

ಕಾರ್ಮಿಕರಿಗೆ ಹಲವು ಸೌಲಭ್ಯಗಳು ವಂಚಿತವಾದ ಪ್ರಕ್ರಿಯೆಯಲ್ಲಿ ಸರ್ಕಾರ ಮೊದಲ ಆರೋಪಿ. ಕಾರ್ಮಿಕರ ಎಲ್ಲ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಯಲಿ ಎಂದು ಕರೆ ನೀಡಿದರು.

ಚಿಂತಕ ಕೆ.ದೊರೈರಾಜ್, ‘ಶೋಷಣೆ ತಡೆಯಬೇಕಿದ್ದ ಸರ್ಕಾರವೇ ಶೋಷಣೆ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ಕಾರ್ಮಿಕರ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ಹಲವು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ಜಾರಿಯಾಗಬೇಕು. ಕಾರ್ಮಿಕರು ಘನತೆಯಿಂದ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕು. ಪ್ರತಿಷ್ಠಿತ ಸಂಸ್ಥೆಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಬೇಕು. ಶಿಕ್ಷಣವಂತರಾದ ಪೌರ ಕಾರ್ಮಿಕರ ಮಕ್ಕಳು ಪೌರ ಕಾರ್ಮಿಕರಾಗಬಾರದು ಎಂದರು.

ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಮುನ್ಸಿಪಲ್‌ ಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹರೀಶ್‌ನಾಯಕ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಪ್ರಧಾನ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ, ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ, ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಓಬಳೇಶ್, ಮುಖಂಡರಾದ ಸಿ.ವೆಂಕಟೇಶ್‌, ಕುಮಾರ್, ಶಿವರಾಜು, ಲಕ್ಷ್ಮಣ್‌ಹಂದ್ರಾಳ್, ಶಾನೂನು ಗುಡ್ಡಾರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.