ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಟಿಕ ಕೈತೋಟ, ತಾರಸಿ ಕೈ ತೋಟದ ಕುರಿತು ತರಬೇತಿ ಕಾರ್ಯಕ್ರಮವು ನಗರದಲ್ಲಿ ಶುಕ್ರವಾರ ನೆರವೇರಿತು.
ಅಡುಗೆ ಮನೆಯ ತ್ಯಾಜ್ಯ ಉಪಯೋಗಿಸಿ ಕೈ ತೋಟದಲ್ಲಿ ದಿನ ಬಳಕೆಗೆ ಅವಶ್ಯಕವಿರುವ ತಾಜಾ ಸೊಪ್ಪು, ತರಕಾರಿಗಳನ್ನು ಬೆಳೆಸುವುದು. ಕೈ ತೋಟ ಮಾಡಲು ಸ್ಥಳ ಇಲ್ಲದಿದ್ದರೆ ಮನೆಯ ತಾರಸಿ ಮೇಲೆ ಕುಂಡಗಳಲ್ಲಿ ಸುಲಭವಾಗಿ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಯುವ ಕುರಿತು ವಿದ್ಯಾರ್ಥಿಗಳಿಗೆ ತೋಟಗಾರಿಕಾ ಇಲಾಖೆಯಿಂದ ತರಬೇತಿ ನೀಡಲಾಯಿತು. ತರಕಾರಿ ಹಾಗೂ ಸೊಪ್ಪಿನ ಬೀಜಗಳ ಕಿಟ್ ವಿತರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ’ ಎಂಬ ಕಾರ್ಯಕ್ರಮ ಪರಿಚಯಿಸಲಾಗಿದೆ. ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ತೋಟಗಾರಿಕೆ ಇಲಾಕೆ ಉಪ ನಿರ್ದೇಶಕಿ ಬಿ.ಸಿ.ಶಾರದಮ್ಮ, ‘ನಗರ ವಾಸಿಗಳು ಒತ್ತಡದ ಜೀವನದಿಂದ ಹೊರ ಬಂದು ಉತ್ತಮ ಪರಿಸರದಲ್ಲಿ ಜೀವಿಸುವಂತಾಗಬೇಕು. ಅದಕ್ಕೆ ಮನೆಯ ಅಂಗಳದಲ್ಲಿ ಕೈತೋಟ ಬೆಳೆಸುವ ಅವಶ್ಯಕತೆ ಇದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ’ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಮಹಾನಗರ ಪಾಲಿಕೆ ಮೇಯರ್ ಎಂ.ಪ್ರಭಾವತಿ, ಆಯುಕ್ತೆ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.