ತುಮಕೂರು: ರೈತರ ನಡುವೆ ಏಕಿಷ್ಟು ದ್ವೇಷ ಬೆಳೆಯುತ್ತಿದೆ. ಅನ್ನ ನೀಡುವ ಕೈಗಳಲ್ಲಿ ವಿಷವೇಕೆ. ಅನ್ನದಾತರೆಂದರೆ ಕೇಡು ಬಯಸದವರು ಎಂಬ ಮಾತಿಗೆ ಅಪವಾದವೆಂಬಂತೆ ವಿಷ ಕಾರುತ್ತಿರುವುದು ನಾಗರಿಕ ಸಮಾಜದಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಈ ವಿಚಾರ ರೈತರ ನಡುವೆಯೂ ಪ್ರಮುಖವಾಗಿ ಚರ್ಚೆಯಾಗುತ್ತಿದೆ.
ಕುಣಿಗಲ್ ತಾಲ್ಲೂಕಿನಲ್ಲಿ ಅಡಿಕೆ, ತೆಂಗು, ಬಾಳೆ ಮತ್ತಿತರ ಹಣ್ಣಿನ ನೂರಾರು ಗಿಡಗಳನ್ನು ಕತ್ತರಿಸಿ ಹಾಕಲಾಯಿತು. ಪಾವಗಡ ತಾಲ್ಲೂಕಿನಲ್ಲಿ ಕೊಯ್ಲಿಗೆ ಬಂದಿದ್ದ ಟೊಮೊಟೊ ಗಿಡಗಳನ್ನು ನಾಶ ಮಾಡಲಾಯಿತು. ಬಂಗಾರಪೇಟೆ ತಾಲ್ಲೂಕಿನಲ್ಲಿ ಫಸಲು ಬಿಟ್ಟಿದ್ದ ಟೊಮೊಟೊ ಗಿಡಗಳಿಗೆ ಕಳೆನಾಶಕ ಸಿಂಪಡಿಸಿ ನಾಶ ಮಾಡಲಾಯಿತು. ಚಿಕ್ಕನಾಯಕನಹಳ್ಳಿ, ಮಧುಗಿರಿ, ಶಿರಾ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಇಂತಹುದೇ ದ್ವೇಷದ ಸುದ್ದಿಗಳು ಜನರ ಬಾಯಿಂದ ಬಾಯಿಗೆ ಹರಿದಾಡುತ್ತಿವೆ. ಯಾರೂ ಇಂತಹ ಕೆಲಸಕ್ಕೆ ಕೈಹಾಕಬಾರದು, ಎಂದಿಗೂ ದ್ವೇಷ ಒಳ್ಳೆಯದಲ್ಲ ಎಂಬ ಮರುಕದ ಮಾತುಗಳು ವ್ಯಕ್ತವಾಗುತ್ತಿವೆ.
ಹಳ್ಳಿಗಳಲ್ಲಿ ಒಬ್ಬರಿಗೊಬ್ಬರು ಸಹಕಾರ ನೀಡಿ, ಹೆಗಲುಕೊಟ್ಟು ನೆರವಿಗೆ ನಿಲ್ಲುತ್ತಿದ್ದವರ ಮನದಲ್ಲಿ ದ್ವೇಷ, ಅಸೂಯೆ ಬೆಳೆದಿದ್ದಾರೂ ಹೇಗೆ? ಎಂಬ ಚಿಂತೆ ಕಾಡುತ್ತಿದೆ. ಪರಸ್ಪರ ಮುಖನೋಡದಷ್ಟು ದ್ವೇಷ ಬೆಳೆಯಿತೆ? ವ್ಯಕ್ತಿಯ ಮೇಲೆ ದ್ವೇಷ ಇದ್ದರೆ ಹೊಲದಲ್ಲಿ ಬೆಳೆದಿದ್ದ ಫಸಲು ಏನು ಅಪರಾಧ ಮಾಡಿತ್ತು ಎಂಬ ಪ್ರಶ್ನೆಗಳು ಮೂಡಿವೆ. ತಿನ್ನುವ ಅನ್ನಕ್ಕೆ ವಿಷ ಹಾಕುವುದೇ ಎಂಬ ಚರ್ಚೆಗಳು ನಡೆದಿವೆ.
ಹಿಂದಿನ ಮಾದರಿ: ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಶುಭ– ಅಶುಭ ಯಾವುದೇ ಇರಲಿ, ಎಂತಹುದೇ ಸಮಸ್ಯೆಗಳು ಎದುರಾದರೂ ನೆರವಿಗೆ ನಿಲ್ಲುತ್ತಿದ್ದರು. ಮದುವೆ–ಮುಂಜಿ, ಸತ್ತರೆ–ಕೆಟ್ಟರೆ ಆಸರೆಯಾಗುತ್ತಿದ್ದರು. ಮದುವೆಗೆ ಮುನ್ನ ಮನೆಯಲ್ಲಿ ಕೆಲಸಗಳು ಸಾಕಷ್ಟು ಇರುತ್ತವೆ ಎಂಬ ಕಾರಣಕ್ಕೆ ವಾರಕ್ಕೆ ಮೊದಲೇ ಊರಿನ ಅಕ್ಕಪಕ್ಕದ ಮನೆಯವರು ಅಡುಗೆಮಾಡಿ ಊಟ, ತಿಂಡಿ ಕೊಡುತ್ತಿದ್ದರು. ಮದುವೆ ಮನೆಯಲ್ಲಿ ಒಲೆ ಹಚ್ಚದಂತೆ ನೋಡಿಕೊಂಡು ಸಹಕಾರ ನೀಡುತ್ತಿದ್ದರು. ಧವಸ ಧಾನ್ಯ, ಸೌದೆ ಸಿದ್ಧಪಡಿಸುವುದು ಸೇರಿದಂತೆ ಮದುವೆಯ ಇತರ ಕೆಲಸ ಕಾರ್ಯಗಳಿಗೆ ನೆರವಾಗುತ್ತಿದ್ದರು. ಮದುವೆ ದಿನ ಊರಿನ ಜನರೇ ಸೇರಿಕೊಂಡು ಒಟ್ಟಾಗಿ ಅಡುಗೆಮಾಡಿ ಬಂದ ನೆಂಟರಿಗೆ ಬಡಿಸುತ್ತಿದ್ದರು. ವಿವಾಹ ಕಾರ್ಯ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ತಮ್ಮ ಮನೆಯ ಕಾರ್ಯದಂತೆ ಮುಂದೆನಿಂತು ನಡೆಸಿಕೊಡುತ್ತಿದ್ದರು.
ಮನೆಯಲ್ಲಿ ಸಾವು ಸಂಭವಿಸಿದರೂ ಹೆಗಲು ಕೊಡುತ್ತಿದ್ದರು.ತಿಥಿ ಕಾರ್ಯಗಳು ಮುಗಿಯುವವರೆಗೂ ನೆರವಿಗೆ ನಿಲ್ಲುತ್ತಿದ್ದರು. ಒಬ್ಬಂಟಿ ಮನೆಯವರು ಊರಿನಿಂದ ಹೊರಗೆ ಹೋಗಬೇಕಾದ ಸಂದರ್ಭ ಬಂದರೆ ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡುತ್ತಿದ್ದರು. ಹಬ್ಬದ ಸಮಯದಲ್ಲಿ ಒಟ್ಟಾಗಿ ಬೆರೆಯುತ್ತಿದ್ದರು. ಕೃಷಿ ಚಟುವಟಿಕೆಗಳಲ್ಲಿ ‘ಮುಯ್ಯಾಳು’ ಮೂಲಕ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಕೃಷಿ ಚಟುವಟಿಕೆಗಳು ಯಾವುದೇ ಹಣದ ಖರ್ಚು ಇಲ್ಲದೆ ಮುಯ್ಯಾಳು ಮೂಲಕ ನಡೆಯುತ್ತಿದ್ದವು. ಇಂತಹ ವ್ಯವಸ್ಥೆಯಿಂದಾಗಿ ಹಳ್ಳಿಗಳಲ್ಲಿ ಒಬ್ಬರಿಗೊಬ್ಬರಿಗೆ ಆತ್ಮೀಯತೆ ಬೆಳೆಯುತಿತ್ತು. ಒಟ್ಟಾಗಿ ಬಾಳುತ್ತಿದ್ದರು.ಕೆಡುಕಿನ ಮಾತು ಬರಬಾರದು ಎಂದು ತಿಳಿಹೇಳುತ್ತಿದ್ದರು.
ಆದರೆ ಈಗ ಪರಿಸ್ಥಿತಿ ಬದಲಾಗಿರುವದ್ಯೋತಕವೊ ಎಂಬಂತೆ ದ್ವೇಷ ಕಾರುತ್ತಿದ್ದಾರೆ. ಸುಂದರ ಬದುಕು ಕಂಡವರ ಮನದಲ್ಲಿ ದ್ವೇಷದ ಜ್ವಾಲೆ ಮೂಡಿದ್ದಾರೂ ಹೇಗೆ? ಇದಕ್ಕೆಲ್ಲ ಯಾರು ಕಾರಣ? ನಮ್ಮ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ? ಪರಿಹಾರವೇನು? ಎಂಬ ಬಗ್ಗೆ ಚರ್ಚೆಗಳು ಅಲ್ಲಲ್ಲಿ ಆರಂಭವಾಗಿವೆ. ರೈತರ ನಡುವೆ ದ್ವೇಷ ಹೆಚ್ಚಾದರೆ ಹಳ್ಳಿಗಳಿಗೂ ಉಳಿಗಾಲವಿಲ್ಲ, ರೈತರು, ಕೃಷಿಯೂ ಉಳಿಯುವುದಿಲ್ಲ. ಘಾಸಿಗೊಂಡಿರುವ ಮನವನ್ನು ತಿಳಿಗೊಳಿಸುವ ಕೆಲಸ ಆಗಬೇಕಿದೆ. ರೈತರ, ದ್ವೇಷ, ಅಸೂಯೆಗೆ ತಕ್ಷಣ ಮುಲಾಮು ಹಚ್ಚಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.