ತುಮಕೂರು: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣನಾದ ಅಪರಾಧಿ ಅಲೀಂ ಪಾಷಾಗೆ 8 ವರ್ಷ ಕಠಿಣ ಶಿಕ್ಷೆ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ನಗರದ ಪಿ.ಜಿ ಲೇಔಟ್‌ನ 4ನೇ ವೃತ್ತದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಲೀಂ ಪಾಷಾ ಎಂಬಾತ ಆಶಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ. ವಿವಾಹದ ನಂತರ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ. ಆಶಾ ಕುಟುಂಬದವರು ಎರಡು ಬಾರಿ ಒಟ್ಟು ₹2.30 ಲಕ್ಷ ನೀಡಿದ್ದರು.
ಇಷ್ಟಕ್ಕೆ ಸುಮ್ಮನಾಗದ ಪಾಷಾ ಮತ್ತೆ ₹3 ಲಕ್ಷ ತರುವಂತೆ ಹಿಂಸೆ ನೀಡಿದ್ದ. ಹಿಂಸೆ ತಾಳಲಾರದೆ ಆಶಾ 2018ರ ಸೆಪ್ಟೆಂಬರ್ 21ರಂದು ತಮ್ಮ ಮನೆಯ ಹತ್ತಿರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಎಸ್. ನಾಗರಾಜು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ವಿಚಾರಣೆ ನಡೆಸಿದರು. ಸರ್ಕಾರದ ಪರವಾಗಿ ವಕೀಲರಾದ ಕವಿತಾ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.