ADVERTISEMENT

‘ಸರ್ಕಾರಿ ನೌಕರಿ ಸಿಕ್ಕಷ್ಟು ಖುಷಿಯಾಗಿದೆ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 6:18 IST
Last Updated 3 ಅಕ್ಟೋಬರ್ 2024, 6:18 IST
ತುಮಕೂರಿನಲ್ಲಿ ಬುಧವಾರ ನಡೆದ ಗಾಂಧೀಜಿ, ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ, ಪೌರ ಕಾರ್ಮಿಕರ ದಿನ ಆಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿ.ಪಂ ಸಿಇಒ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಹಾಜರಿದ್ದರು
ತುಮಕೂರಿನಲ್ಲಿ ಬುಧವಾರ ನಡೆದ ಗಾಂಧೀಜಿ, ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ, ಪೌರ ಕಾರ್ಮಿಕರ ದಿನ ಆಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿ.ಪಂ ಸಿಇಒ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಹಾಜರಿದ್ದರು   

ತುಮಕೂರು: ‘22 ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದೇನೆ. ಈಗ ಪರ್ಮನೆಂಟ್‌ ಮಾಡಿದ್ದು, ಸರ್ಕಾರಿ ನೌಕರಿ ಸಿಕ್ಕಷ್ಟೇ ಖುಷಿಯಾಗಿದೆ’ ಎಂದು ಕಾಯಮಾತಿ ಆದೇಶ ಪತ್ರದ ಪ್ರತಿ ಪಡೆದ ಪೌರ ಕಾರ್ಮಿಕ ಸುರೇಶ್‌ ತಮ್ಮ ಸಂತಸ ಹಂಚಿಕೊಂಡರು.

ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನ ಆಚರಣೆ ಕಾರ್ಯಕ್ರಮ ತುಂಬಾ ಜನರ ಬದುಕಲ್ಲಿ ಹೊಸ ಭರವಸೆ ಮೂಡಿಸಿತು.

ಎರಡು–ಮೂರು ದಶಕಗಳಿಂದ ಅತ್ಯಲ್ಪ ವೇತನಕ್ಕಾಗಿ ದುಡಿಯುತ್ತಿದ್ದವರ ಸಂಭ್ರಮಕ್ಕೆ ಸಾಕ್ಷಿಯಾಯಿತು. ಕಾಯಮಾತಿ ಆದೇಶ ಪತ್ರ ಪಡೆದವರ ಖುಷಿಗೆ ಪಾರವೇ ಇರಲಿಲ್ಲ.

ADVERTISEMENT

‘ನಗರದ ಸ್ವಚ್ಛತೆಗೆ ದುಡಿಯುವ ನಮಗೆ ನಿಗದಿತ ಸಂಬಳ ಸಿಗುತ್ತಿರಲಿಲ್ಲ. ಈಗ ಒಂದಷ್ಟು ಯಂತ್ರಗಳ ಸಹಾಯದಿಂದ ಕೆಲಸ ಸುಲಭವಾಗಿದೆ. ಕೆಲಸಕ್ಕೆ ಸೇರಿದ ಸಮಯ ತುಂಬಾ ಕಠಿಣವಾಗಿತ್ತು. ಎಲ್ಲ ಕೆಲಸ ಕೈಯಿಂದಲೇ ಮಾಡಬೇಕಿತ್ತು. ಸರ್ಕಾರ ಕೊನೆಗೂ ನಮ್ಮ ಸೇವೆ ಗುರುತಿಸಿದೆ’ ಎಂದು 52 ವರ್ಷದ ಸುರೇಶ್‌ ತಮ್ಮ ಆರಂಭದ ದಿನಗಳನ್ನು ಮೆಲುಕು ಹಾಕಿದರು.

‘ಕೆಲಸಕ್ಕೆ ಸೇರಿದಾಗ ತಿಂಗಳಿಗೆ ₹750 ಸಂಬಳ ಇತ್ತು. ಅದು ಕೂಡ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ. ಅರ್ಧ ಜೀವನ ಪೌರ ಕಾರ್ಮಿಕ ವೃತ್ತಿಯಲ್ಲೇ ಕೆಳೆದಿದ್ದೇವೆ. ಇದು ಬಿಟ್ಟರೆ ಬೇರೆ ಕೆಲಸಕ್ಕೆ ಹೋಗಲು ಆಗುವುದಿಲ್ಲ. ಇಷ್ಟು ವರ್ಷ ಕೆಲಸ ಮಾಡಿದ್ದಕ್ಕೆ ಈಗ ಪ್ರತಿಫಲ ಸಿಕ್ಕಿದೆ’ ಎಂದು ಗಂಗರಾಜು ನಗುತ್ತಲೇ ಮಾತನಾಡಿದರು.

‘17 ವರ್ಷದಿಂದ ನಗರದಲ್ಲಿ ಕೆಲಸ ಮಾಡುತ್ತಿದ್ದೆ, ಈಗ ಕಾಯಂ ಮಾಡಲಾಗಿದೆ. ಇನ್ನೂ 30 ವರ್ಷ ಸೇವೆ ಸಲ್ಲಿಸಬಹುದು. ನಮ್ಮ ಶ್ರಮಕ್ಕೆ ಫಲ ದೊರೆತಿದೆ. ಇದು ನಿರಂತರ ಹೋರಾಟಕ್ಕೆ ಸಂದ ಜಯ. ಸರ್ಕಾರ ಮುಂದಿನ ಜೀವನಕ್ಕೆ ಭದ್ರತೆ ಒದಗಿಸಿದೆ. ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ’ ಎಂದು ಎನ್‌.ಶಿವಕುಮಾರ್‌ ಅವರು ಪಾಲಿಕೆಯ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.