ADVERTISEMENT

ರಮೇಶ್ ಜಾರಕಿಹೊಳಿ ಅಶ್ಲೀಲ ಸಿ.ಡಿ ಪ್ರಕರಣದ ದಾಖಲೆ ಕೊಟ್ಟರೆ ತನಿಖೆ– ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 7:27 IST
Last Updated 1 ನವೆಂಬರ್ 2023, 7:27 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ತುಮಕೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನಮಗೆ ಕೊಟ್ಟರೆ ಸಮಗ್ರವಾಗಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಇಲ್ಲಿ ಬುಧವಾರ ಹೇಳಿದರು.

ನಗರದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹನಿ ಟ್ರ್ಯಾಪ್ ಮೂಲಕ ನನ್ನ ಡಿ.ಸಿ ಮಾಡಿಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ಮಾಡಿದರೆ ಸತ್ಯಾಂಶ ಹೊರ ಬರಲಿದೆ’ ಎಂದು ರಮೇಶ್ ಹೇಳಿಗೆ ಪ್ರತಿಕ್ರಿಯಿಸಿದ ಸಚಿವರು, ‘ಶಾಸಕರ ಬಳಿ ಇರುವ ದಾಖಲೆಗಳನ್ನು ಕೊಟ್ಟರೆ, ಅದರ ಆಧಾರದ ಮೇಲೆ ಪೊಲೀಸರಿಂದ ತನಿಖೆ ಮಾಡಿಸಲಾಗುವುದು. ಅನ್ಯಾಯವಾಗಿದ್ದರೆ ನ್ಯಾಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಗಡಿಯಲ್ಲಿ ಕಟ್ಟೆಚ್ಚರ: ಮಹಾರಾಷ್ಟ್ರದಲ್ಲಿ ಮರಾಠರ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಲಾಗಿದೆ. ಈ ಬಗ್ಗೆ ನಿಗಾ ವಹಿಸಲಾಗಿದೆ ಎಂದರು.

ಕೇಂದ್ರದ ವಿರುದ್ಧ ಆಕ್ರೋಶ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ರಾಜ್ಯ ಬರದಿಂದ ತತ್ತರಿಸಿದ್ದರೆ, ಕೇಂದ್ರದಿಂದ ಬಂದಿದ್ದ ಅಧ್ಯಯನ ತಂಡದ ಅಧಿಕಾರಿಗಳಿಗೆ ಇಲ್ಲಿನ ಬರ ಕಾಣಿಸಿಲ್ಲ. ‘ಹಸಿರು ಚೆನ್ನಾಗಿದೆ’ ಎಂದು ಬರೆದುಕೊಂಡು ಹೋಗಿ ವರದಿ ನೀಡಿದ್ದಾರೆ. ಇವರಿಗೆ ಕಣ್ಣು ಕಾಣಿಸುವುದಿಲ್ಲವೆ ಎಂದು ಪ್ರಶ್ನಿಸಿದರು.

ಬೆಳೆ ನಷ್ಟವನ್ನು ಅಂದಾಜಿಸಿ ₹17 ಸಾವಿರ ಕೋಟಿ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಈವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಶೇ 65ರಷ್ಟು ಮಳೆ ಕೊರತೆಯಾಗಿದ್ದು, ಸುಮಾರು ₹37 ಸಾವಿರ ಕೋಟಿ ಮೊತ್ತದಷ್ಟು ಬೆಳೆ ನಷ್ಟವಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.