ADVERTISEMENT

ಕೇಂದ್ರದಲ್ಲಿ ನಮಗೆ ಅಧಿಕಾರ ಸಿಕ್ಕರೆ ಸ್ವಾಮೀಜಿಗೆ ‘ಭಾರತರತ್ನ’: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 8:52 IST
Last Updated 31 ಜನವರಿ 2019, 8:52 IST
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿದರು   

ತುಮಕೂರು:‘ನಮಗೆ ಕೇಂದ್ರದಲ್ಲಿ ಅಧಿಕಾರ ದೊರೆತರೆ ಶಿವಕುಮಾರ ಸ್ವಾಮೀಜಿ ಅವರಿಗೆ ಖಂಡಿತಭಾರತರತ್ನ ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಸಿದ್ಧಗಂಗಾಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಸ್ವಾಮೀಜಿಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮಗೆ (ಮಹಾಮೈತ್ರಿ)ಅಧಿಕಾರ ದೊರೆತರೆ ಈ ದಿಸೆಯಲ್ಲಿ ಪ್ರಯತ್ನಿಸೋಣ ಎಂದು ನಾನು ಮತ್ತು ಪರಮೇಶ್ವರ್‌ಚರ್ಚಿಸಿದ್ದೇವೆ. ಮುಂದಿನ ಆರೇಳು ತಿಂಗಳಲ್ಲಿ ನಾವು ಈ ತೀರ್ಮಾನ ಮಾಡುತ್ತೇವೆ‌. ಇದನ್ನು ಸೂಕ್ಷ್ಮವಾಗಿ ಜನರು ಅರ್ಥ ಮಾಡಿಕೊಳ್ಳಬೇಕು. ನಮಗೆ ಶಕ್ತಿ ತುಂಬಬೇಕು’ಎಂದರು. ಮುಖ್ಯಮಂತ್ರಿ ಮಾತಿನಲ್ಲಿ ಕೇಂದ್ರದಲ್ಲಿಬಿಜೆಪಿಯೇತರ ಪಕ್ಷ ಅಧಿಕಾರಕ್ಕೆ ಬಂದರೆ ಸ್ವಾಮೀಜಿ ಅವರಿಗೆ ಭಾರತ ರತ್ನ ದೊರೆಯಲಿದೆ ಎನ್ನುವ ಭಾವವಿತ್ತು.

‘ಭಾರತ ರತ್ನ ಸ್ವಾಮೀಜಿ ಅವರಿಗೆ ದೊರಕಬೇಕು ಎನ್ನುವ ಕೂಗು ಜನರಿಂದ ಎದ್ದಿದೆ. ಭಾರತರತ್ನ ಕೊಟ್ಟಿದ್ದರೆ ಆ ಪ್ರಶಸ್ತಿಗೇ ಗೌರವ ಬರುತ್ತಿತ್ತು’ ಎಂದು ಹೇಳಿದರು.

‘ನನ್ನ ಪುಣ್ಯ ಎಂದರೆ 2006–07ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಸ್ವಾಮೀಜಿ ಅವರಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಿದೆವು‌. ಪೂಜ್ಯರ ಹೆಸರಿನಲ್ಲಿ ಈಗ ಶಾಶ್ವತ ಯೋಜನೆಯೊಂದನ್ನು ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ’ ಎಂದು ವಿವರಿಸಿದರು.

‘ಪಕ್ಷದ ತಾರತಮ್ಯ ದ್ವೇಷ ಮರೆತು ಸ್ವಾಮೀಜಿ ಅಂತ್ಯಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಿದೆವು‌. ಇಂದೂ ಸಹ ಪಾಲ್ಗೊಂಡಿದ್ದೇವೆ. ಇದು ಈ ಕ್ಷೇತ್ರದ ಶಕ್ತಿ. ಹೊರಗೆ ನಾವು ಏನೆಲ್ಲ ಸಂಘರ್ಷ ಮಾಡಬಹುದು. ಆದರೆ ಈ ನೆಲದಲ್ಲಿ ರಾಜಕೀಯ ನಾಯಕರು ಸಹೋದರರು’ ಎಂದರು.

‘ರೈತರ ಪರವಾಗಿ ಸ್ವಾಮೀಜಿ ಸ್ಪಂದಿಸಿದ್ದನ್ನು ನಾನು ಕಂಡಿದ್ದೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಅವರು ಪದೇ ಪದೇ ರೈತರ ಯೋಗಕ್ಷೇಮದ ಬಗ್ಗೆ ಕೇಳುತ್ತಿದ್ದರು. ಯಾವುದೇ ಸರ್ಕಾರದ ಮುಂದೆ ಶಿವಕುಮಾರ ಸ್ವಾಮೀಜಿ ಇಂತಹ ಸೌಲಭ್ಯ ಬೇಕು ಎಂದು ಅರ್ಜಿ ಕೊಟ್ಟ ಉದಾಹರಣೆಯೇ ಇಲ್ಲ’ಎಂದು ಸ್ವಾಮೀಜಿಯನ್ನು ಸ್ಮರಿಸಿಕೊಂಡರು.

ರಾಜ್ಯ ಸಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ‘ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದುದು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ನಷ್ಟ. ನಾವು ಬಸವಣ್ಣ ಬುದ್ಧನನ್ನು ನೋಡಿರಲಿಲ್ಲ. ಬುದ್ಧನ ಕಾರುಣ್ಯ, ಬಸವಣ್ಣನ ಸಮಾನತೆ ತತ್ವ ಶಿವಕುಮಾರ ಸ್ವಾಮಿಜಿಯಲ್ಲಿಕಾಣಬಹುದಿತ್ತು. ಅವರನ್ನು ಕಂಡಾಕ್ಷಣ ಬಸವಣ್ಣನ ನೆನಪಾಗುತ್ತಿತ್ತು’ ಎಂದು ತಿಳಿಸಿದರು.

‘ಶಿವಕುಮಾರ ಸ್ವಾಮೀಜಿ ಯುಗಪುರುಷರು. ಎಲ್ಲರೂ ಯುಗಪುರುಷರಾಗಲು ಸಾಧ್ಯವಿಲ್ಲ. ಎಲ್ಲ ಪಕ್ಷದವರನ್ನು ಸಮಾನವಾಗಿ ಪರಿಗಣಿಸಿದ್ದರು. ಅವರು ಎಂದಿಗೂ ರಾಜಕರಣದ ಬಗ್ಗೆ ಮಾತನಾಡಿಲ್ಲ. ಜಾರ್ಜ್ ಫರ್ನಾಂಡೀಸ್ ದೊಡ್ಡ ಸಮಾಜವಾದಿ. ಅವರೂ ಮಠಕ್ಕೆ ಸಾಕಷ್ಟು ಬಾರಿ ಬಂದಿದ್ದರು. ಅವರಂತಹ ಸಮಾಜವಾದಿಯನ್ನೂ ಆಕರ್ಷಿಸುವ ಶಕ್ತಿ ಸ್ವಾಮೀಜಿ ಅವರಿಗೆ ಇತ್ತು.ಸ್ವಾಮೀಜಿ ಜ್ಞಾನ, ಅನ್ನ ಕಾಯಕವನ್ನು ತಾರತಮ್ಯ ಇಲ್ಲದೆ ಇಡೀ ಸಮಾಜಕ್ಕೆ ನೀಡಿದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.