ತುಮಕೂರು: ನಗರ ಹೊರವಲಯದ ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಮಂಗಳವಾರ ಸಾಗಿಸುತ್ತಿದ್ದ ಒಂದು ಟನ್ ರಕ್ತ ಚಂದನ ಮರದ 14 ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆ ಬಾಳಲಿದೆ ಎಂದು ಅಂದಾಜಿಸಲಾಗಿದೆ.
ರಕ್ತ ಚಂದನ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ಚಾಲಕ, ಕೇರಳದ ನಿವಾಸಿ ಇಬ್ರಾಹಿಂ (33) ಎಂಬುವರನ್ನು ಬಂಧಿಸಲಾಗಿದೆ. ದಾಬಸ್‌ಪೇಟೆಯಿಂದ ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಕಡೆ ಹೋಗುತ್ತಿದ್ದ ವಾಹನದಲ್ಲಿ ರಕ್ತ ಚಂದನ ಪತ್ತೆಯಾಗಿದೆ.
ಅರಣ್ಯಾಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ರಕ್ತ ಚಂದನದ ತುಂಡುಗಳು ಪತ್ತೆಯಾದ ನಂತರ ದಾಬಸ್‌ಪೇಟೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ‘ಎಲ್ಲಿಂದ ಸರಬರಾಜು ಮಾಡಲಾಗುತ್ತಿತ್ತು, ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುವುದು ತನಿಖೆಯಿಂದ ಗೊತ್ತಾಗಬೇಕಿದೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆ ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ವಿ.ಪವಿತ್ರಾ ಮಾಹಿತಿ ನೀಡಿದರು.
ಉಪವಲಯ ಅರಣ್ಯಾಧಿಕಾರಿ ಅನಿಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಮಾಲಗತ್ತಿ, ಅರಣ್ಯ ಇಲಾಖೆಯ ಕೇಶವಮೂರ್ತಿ, ಶಿವಲಿಂಗಸ್ವಾಮಿ, ರಾಘವೇಂದ್ರ, ನವೀನ್, ರಬ್ಬಾನಿ, ಪ್ರಕಾಶ್ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.