ತುಮಕೂರು: ಅಧಿಕಾರಿಗಳಿಗೆ ಸರ್ಕಾರ ಒಳ್ಳೆಯ ಸಂಬಳ ಕೊಟ್ಟರೂ ಪರರ ದುಡ್ಡಿಗೆ ಕೈ ಚಾಚುತ್ತಾರೆ. ಒಬ್ಬ ಸಾಮಾನ್ಯ ಪಿಎಸ್ಐ, ಪಿಡಿಒ ಕೋಟ್ಯಂತರ ರೂಪಾಯಿ ಹಣ ಮಾಡುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಇದೆಲ್ಲವನ್ನು ನೋಡಿದರೆ ನೇಣು ಹಾಕಿಕೊಳ್ಳುತ್ತಿದ್ದರು ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಲೋಕಾಯುಕ್ತ ವತಿಯಿಂದ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಮಾತನಾಡಿದರು.
ಭ್ರಷ್ಟಾಚಾರ ದೇಶದ ಬಹುದೊಡ್ಡ ಪಿಡುಗು. ಕ್ಯಾನ್ಸರ್ ವಾಸಿ ಮಾಡಬಹುದು. ಭ್ರಷ್ಟಾಚಾರ ತೊಲಗಿಸಲು ಆಗುವುದಿಲ್ಲ. ಪೊಲೀಸ್, ಕಂದಾಯ ಇಲಾಖೆಯ ಅಧಿಕಾರಿಗಳು ದರ್ಪ ತೋರುತ್ತಾರೆ. ಕಾರ್ಯಾಂಗದ ವೈಖರಿ ಬದಲಾಗಬೇಕು. ಅಧಿಕಾರಿಗಳು ತಮ್ಮ ಕೆಲಸ ಸರಿಯಾಗಿ ಮಾಡಿದರೆ ನ್ಯಾಯಾಲಯಕ್ಕೆ ಹೋಗುವ ಅವಶ್ಯಕತೆ ಬರುವುದಿಲ್ಲ. ಯಾರೊಬ್ಬರಿಗೂ ತಲೆ ಬಾಗುವ ಸಂದರ್ಭ ಸೃಷ್ಟಿಯಾಗುವುದಿಲ್ಲ ಎಂದರು.
ಸ್ವಾತಂತ್ರ್ಯದ ಸಮಯದಲ್ಲಿ ಶೇ 18ರಷ್ಟು ವಿದ್ಯಾವಂತರಿದ್ದರು. ಈಗ ಈ ಸಂಖ್ಯೆ ಶೇ 80ರಷ್ಟಾಗಿದೆ. ಶೇ 90ರಷ್ಟು ವಿದ್ಯಾವಂತರಿಗೆ ಕಾನೂನು ಗೊತ್ತಿಲ್ಲ. ಸ್ವಾತಂತ್ರ್ಯ ನಂತರವೂ ದಬ್ಬಾಳಿಕೆ, ದೌರ್ಜನ್ಯ, ಒಡೆದು ಆಳುವ ನೀತಿ ಮುಂದುವರಿದಿದೆ. ಇದನ್ನು ವಿದ್ಯಾವಂತರು ಅರ್ಥ ಮಾಡಿಕೊಂಡು ಒಂದಾಗುತ್ತಿಲ್ಲ ಎಂದು ಹೇಳಿದರು.
ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ, ‘ಶೇ 1ರಷ್ಟಿರುವ ಸರ್ಕಾರಿ ನೌಕರರ ಮೇಲೆ ಶೇ 99ರಷ್ಟು ಜನರ ಹಕ್ಕು, ಆರೋಗ್ಯ, ಗೌರವ ಕಾಪಾಡುವ, ಸರ್ಕಾರದ ಸೌಲಭ್ಯ ತಲುಪಿಸುವ ಜವಾಬ್ದಾರಿ ಇದೆ. ಎಲ್ಲರು ಸತ್ಯ, ನಿಷ್ಠುರದಿಂದ ಕೆಲಸ ಮಾಡಬೇಕು. ನಮ್ಮ ಹಿರಿಯರು ಸಮ ಸಮಾಜದ ಬುನಾದಿ ಹಾಕಿದ್ದಾರೆ. ಅದರ ಅಡಿಪಾಯದ ಮೇಲೆ ಉತ್ತಮವಾದ ಸೌಧ ಕಟ್ಟಬೇಕಿದೆ’ ಎಂದು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ.ಜಯಂತ್‌ಕುಮಾರ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ಬಿ.ಅಶ್ವಿಜ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ ಇತರರು ಹಾಜರಿದ್ದರು.
ಸುಳ್ಳು ದೂರು: ಜೈಲು ಶಿಕ್ಷೆ ಪ್ರಸ್ತುತ ಲೋಕಾಯುಕ್ತದಲ್ಲಿ 20 ಸಾವಿರ ಪ್ರಕರಣಗಳು ಬಾಕಿ ಇದ್ದು ಇದರಲ್ಲಿ ಅರ್ಧದಷ್ಟು ಸುಳ್ಳು ದೂರುಗಳಿವೆ. ಯಾರಾದರು ಸುಳ್ಳು ದೂರು ನೀಡಿದರೆ ಲೋಕಾಯುಕ್ತ ಕಾಯ್ದೆ ಸೆಕ್ಷನ್ 20ರ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಎಚ್ಚರಿಸಿದರು. ಸುಳ್ಳು ದೂರಿನಿಂದ ನಮ್ಮ ಸಮಯ ವ್ಯರ್ಥವಾಗುವುದರ ಜತೆಗೆ ನೈಜ ಪ್ರಕರಣಗಳ ವಿಲೇವಾರಿಗೆ ವಿಳಂಬವಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.