ತುಮಕೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ 117ನೇ ವರ್ಷದ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಮಠದಲ್ಲಿ ಸೋಮವಾರ ಆಚರಿಸಲಾಯಿತು.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ರಾಜಕೀಯ ಮುಖಂಡರಿಗೆ ವೇದಿಕೆಗೆ ಆಹ್ವಾನ ಇರಲಿಲ್ಲ. ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು.
ಬೆಳಗ್ಗೆಯಿಂದಲೇ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾದವು. ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಣೆಗೆ ಚಾಲನೆ ನೀಡಲಾಯಿತು.
ಬಾಬಾ ರಾಮದೇವ್ 117 ದೀಪ ಬೆಳಗುವ ಮೂಲಕ ಶಿವಕುಮಾರ ಸ್ಮಾಮೀಜಿ 117ನೇ ವರ್ಷದ ಜಯಂತಿಗೆ ಚಾಲನೆ ನೀಡಿದರು. ಸ್ವಾಮೀಜಿ ಹಾಗೂ ತಮ್ಮ ನಡುವಿನ ಸಂಬಂಧ ಮೆಲುಕು ಹಾಕಿದರು. ಸ್ವಾಮೀಜಿ ನಿಧನರಾದ ಸಮಯದಲ್ಲಿ ಮುಂದೆ ನಿಂತು ವಿಧಿವಿಧಾನ ನಡೆಸಿಕೊಟ್ಟಿದ್ದನ್ನು ನೆನಪಿಸಿಕೊಂಡರು.
ಶಿವಕುಮಾರ ಸ್ವಾಮೀಜಿ ನಡೆಸಿಕೊಂಡು ಬಂದ ತ್ರಿವಿಧ ದಾಸೋಹದ ಬಗ್ಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜದಲ್ಲಿ ಏನೆಲ್ಲ ಆಗಬೇಕೆಂದು ಹಲವರು ಆಸೆ ಪಡುತ್ತಾರೆ. ಆದರೆ ಸನ್ಯಾಸಿಯಾಗಲು ಯಾರೂ ಮುಂದೆ ಬರುವುದಿಲ್ಲ. ಉತ್ತಮ ಸ್ವಾಮೀಜಿ ಆಗುವವರು ಈ ಸಮಾಜಕ್ಕೆ ಬೇಕಾಗಿದ್ದಾರೆ ಎಂದರು.
ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಂಡರಗಿ ಅನ್ನದಾನೇಶ್ವರ ಮಠದ ಅನ್ನದಾನೇಶ್ವರ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ ಮೊದಲಾದವರು ಶಿವಕುಮಾರ ಸ್ವಾಮೀಜಿ ಸೇವೆ ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.