ತುಮಕೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದ ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವುದು ಸೂಕ್ತ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಜೆ.ಪಟೇಲ್ ಒತ್ತಾಯಿಸಿದರು.
ನಗರದ ಕೋತಿತೋಪು ಬಳಿ ಗುರುವಾರ ಜೆಡಿಯು ಜಿಲ್ಲಾ ಕಚೇರಿ ಉದ್ಘಾಟಿಸಿ ಮಾತನಾಡಿದರು.
ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಕಾಲದಲ್ಲಿ ಸಣ್ಣ ತಪ್ಪು ಕಂಡು ಬಂದರೂ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿ, ತನಿಖೆ ಎದುರಿಸುತ್ತಿದ್ದರು. ಆದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇಂದಿನ ಸಿದ್ದರಾಮಯ್ಯ ಅವರು ಕೂಡ ಮೌಲ್ಯಾಧಾರಿತ ರಾಜಕಾರಣದ ಹಾದಿಯಲ್ಲಿ ನಡೆಯಬೇಕು ಎಂದರು.
ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ರಾಜಕೀಯ ನಿಂತ ನೀರಲ್ಲ. ಕರ್ನಾಟಕದಲ್ಲಿ ಕಾಲಚಕ್ರ ತಿರುಗುವ ಕಾಲ ಬಂದಿದೆ. ರಾಜ್ಯದಲ್ಲಿಯೂ ಜೆಡಿಯು ಪ್ರಬಲ ಪಕ್ಷವಾಗಿ ಬೆಳೆಯುವ ಲಕ್ಷಣ ಕಂಡ ಬರುತ್ತಿದೆ. ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಜೆಡಿಯು ಪದಾಧಿಕಾರಿಗಳಾದ ಎಚ್.ಸಿ.ಸುರೇಶ್, ಕೆ.ಜಿ.ಎಲ್.ರವಿ, ಯಶೋದ, ಕಲ್ಪನಾಗೌಡ, ರಮೇಶಗೌಡ, ಶಕುಂತಲಾ ಶೆಟ್ಟಿ, ಶಾಂತಕುಮಾರಿ, ಪರಮೇಶ್ವರಯ್ಯ, ಬಸವರಾಜು, ಕೆ.ಆರ್.ರಂಗನಾಥ, ಪ್ರಮೋದ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.