ತುಮಕೂರು: ರಾಜ್ಯದಲ್ಲಿ ಲಭ್ಯವಾಗುವ ಒಟ್ಟು ಉದ್ಯೋಗ ಅವಕಾಶಗಳಲ್ಲಿ ಶೇ 2ರಷ್ಟು ಮಾತ್ರ ಸರ್ಕಾರಿ ಉದ್ಯೋಗಗಳು. ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಎಸ್.ಬಿ.ಅಪ್ಪಾಜಿಗೌಡ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಕಾಲೇಜು ಶಿಕ್ಷಣ ಇಲಾಖೆ ಹಾಗೂ ವಾಧ್ವಾನಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಕೌಶಲ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ಕಾಲೇಜುಗಳಲ್ಲಿ ನುರಿತ ಅಧ್ಯಾಪಕರು ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಕಾಲೇಜುಗಳ ಪ್ರವೇಶಾತಿ ಗಣನೀಯವಾಗಿ ಹೆಚ್ಚಾಗಿದೆ. ಯುವ ಸಮುದಾಯ ಕೌಶಲ ಪಡೆದುಕೊಂಡು ಉದ್ಯೋಗ ಪಡೆದುಕೊಂಡು ಜೀವನ ಸಾಗಿಸಬಹುದು. ಯುವ ಸಮೂಹ ಇತ್ತ ಗಮನ ಹರಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ತರುನ್ನುಂ ನಿಖತ್, ಕಾಲೇಜು ಶಿಕ್ಷಣ ಇಲಾಖೆಯ ಕೆ.ಸಿ.ಬಸವರಾಜ್, ನಂದಿತಾ ಪ್ರಸಾದ್, ಮಂಜುನಾಥ್, ವಾಧ್ವಾನಿ ಫೌಂಡೇಶನ್ ತರಬೇತುದಾರರಾದ ಸ್ವಾತಿ, ವಿನಯ, ಆಯಿಷಾ, ವಸಂತಕುಮಾರಿ, ಸಿ.ಸಿ.ಬಾರಕೇರ, ಯೋಗೀಶ್, ರೇಣುಕಾ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.