ತುಮಕೂರು: ಸಮಾಜದಲ್ಲಿ ಜಾತಿಯ ಹಾವಳಿ ಹೆಚ್ಚಾಗುತ್ತಿದೆ. ಸಮಾಜವನ್ನು ಛಿದ್ರಗೊಳಿಸುವ ಶಕ್ತಿಗಳ ವಿರುದ್ಧ ಎಲ್ಲರು ಒಂದಾಗಬೇಕು ಎಂದು ಚಿಂತಕ ಕೆ.ದೊರೈರಾಜ್ ಕರೆ ನೀಡಿದರು.
ನಗರದಲ್ಲಿ ಶನಿವಾರ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ, ಪೌರ ಕಾರ್ಮಿಕರ ಸಂಘ, ಪಾಲಿಕೆಯ ಕಸದ ಆಟೊ ಚಾಲಕರು ಮತ್ತು ಸಹಾಯಕರ ಸಂಘ ಸಿಐಟಿಯು ವತಿಯಿಂದ ಆಯೋಜಿಸಿದ್ದ ಕಾರ್ಮಿಕ ಮುಖಂಡ ಹರೀಶ್ ನಾಯಕ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಭಿಮಾನ, ಸಮಾನತೆಯ ಬದುಕಿಗೆ ತಾತ್ವಿಕ ನೆಲೆಯಲ್ಲಿ ಸಂಘಟನೆ, ಹೋರಾಟ ಕಟ್ಟುವ ಅಗತ್ಯ ಇದೆ. ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ಹರೀಶ್‌ನಾಯಕ್ ನಿರಂತರ ಬದ್ಧತೆಯಿಂದ ಕಾರ್ಮಿಕರ ಹಿತಕ್ಕಾಗಿ ದುಡಿದರು. ಅವರ ಬದುಕು ಹಲವರಿಗೆ ಮಾದರಿ ಎಂದರು.
ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ‘ಪೌರ ಕಾರ್ಮಿಕರನ್ನು ಒಡೆದು ಆಳುವುದು ಸರಿಯಲ್ಲ. ಜನರಿಗೆ ಹಲವು ಗ್ಯಾರಂಟಿಗಳನ್ನು ನೀಡಿರುವ ಸರ್ಕಾರ ಎಲ್ಲ ಮುನಿಸಿಪಲ್ ಕಾರ್ಮಿಕರಿಗಾಗಿ ಮತ್ತೊಂದು ಗ್ಯಾರಂಟಿ ನೀಡಬೇಕು’ ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಶತಮಾನಗಳಿಂದ ದುಡಿಯುತ್ತಿರುವ ಶೋಷಿತರ ಪರವಾದ ಧ್ವನಿ ಅಡಗಿಸುವ ಪ್ರಯತ್ನಗಳು ನಡೆಯುತ್ತಿದೆ. ನಾವು ನಮ್ಮ ಅನ್ಯಾಯವನ್ನು ಜೋರಾಗಿ ಕೂಗಿ ಹೇಳಬೇಕಾಗಿದೆ’ ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಮುಖಂಡರಾದ ವೆಂಕಟೇಶ್, ಮಾರುತಿ, ಮಂಜುನಾಥ, ಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.