ತುಮಕೂರು: ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಹಗರಣಗಳಿಂದಾಗಿ ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಘಟಕದ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಭ್ರಷ್ಟಾಚಾರ ಮೀತಿಮೀರಿದ್ದು, ವಿದ್ಯಾರ್ಥಿ, ಯುವ ಸಮುದಾಯದಿಂದ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಆ ದಿಕ್ಕಿನತ್ತ ಯುವಪಡೆ ಆಲೋಚಿಸಬೇಕಿದೆ ಎಂದು ಸಲಹೆ ಮಾಡಿದರು.
ಜಾಗತಿಕ ಮಟ್ಟದಲ್ಲಿ ಪ್ರಾಮಾಣಿಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಕಳೆದ ಕೆಲವು ವರ್ಷಗಳಿಂದ ಕುಸಿಯುತ್ತಲೇ ಸಾಗಿದೆ. ಆಯ್ಕೆ ಆಗುತ್ತಿರುವ ಜನಪ್ರತಿನಿಧಿಗಳಲ್ಲಿ ಶೇ 29ರಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದಾರೆ. ಇಲ್ಲವೆ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಕ್ರಿಮಿನಲ್‌ಗಳು ಉನ್ನತ ಸ್ಥಾನಗಳನ್ನು ಪಡೆದುಕೊಂಡು ಆರ್ಥಿಕ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದ್ದಾರೆ. ಸಮಾಜ ಸಹ ಇಂತಹ ಭ್ರಷ್ಟರನ್ನೇ ಬಯಸಿ ಆಯ್ಕೆ ಮಾಡುತ್ತಿರುವುದು ಆತಂಕದ ಸಂಗತಿ ಎಂದರು.
ಸಾಕಷ್ಟು ಹಗರಣಗಳು ಹಿಂದೆಯೂ ನಡೆದಿದ್ದು, ಬೆಳಕಿಗೆ ಬಂದಿವೆ. ಈಗಲೂ ನಡೆಯುತ್ತಲೇ ಇವೆ. 1950ರಲ್ಲಿ ನಡೆದ ಜೀಪ್ ಖರೀದಿಯ ₹50 ಲಕ್ಷ ಹಗರಣದಿಂದ ಹಿಡಿದು 1987ರಲ್ಲಿ ಬೆಳಕಿಗೆ ಬಂದ ₹64 ಕೋಟಿ ಮೊತ್ತದ ಬೋಫರ್ಸ್ ಹಗರಣ, ₹70 ಸಾವಿರ ಕೋಟಿಯ ಕಾಮನ್‍ವೆಲ್ತ್ ಗೇಮ್ಸ್, ₹1.86 ಲಕ್ಷ ಕೋಟಿಯ ಕೋಲ್‍ಗೇಟ್ ಹಗರಣ, ₹1.76 ಲಕ್ಷ ಕೋಟಿಯ 2ಜಿ ಸ್ಪೆಕ್ಟ್ರಮ್ ಸೇರಿದಂತೆ ಸಾಲುಸಾಲು ಹಗರಣಗಳು ನಡೆದಿವೆ. ಇದೇ ರೀತಿ ಹಗರಣಗಳು ಮುಂದುವರಿದರೆ ಸಮಾಜ ಯಾವ ಸ್ಥಿತಿಗೆ ತಲುಪಲಿದೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟಕರವಾಗಲಿದೆ. ಭ್ರಷ್ಟರಿಗೆ ಕಾನೂನು, ಸಮಾಜದ ಭಯವಿಲ್ಲವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯಾರ್ಹತೆಯಿಂದ ಮೇಲೆ ಬಂದು ಶ್ರೀಮಂತರಾಗಬೇಕು. ಹಣದಿಂದ ‘ಅರ್ಹತೆ’ ಖರೀದಿಸಿದಾಗ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಿ, ಆಡಳಿತ ವರ್ಗಕ್ಕೆ ತೃಪ್ತಿಯ ಗುಣವೇ ಇಲ್ಲವಾಗಿದೆ. ದುರಾಸೆಯೇ ಎಲ್ಲಕ್ಕೂ ಮೂಲ ಕಾರಣವಾಗಿದ್ದು, ಭ್ರಷ್ಟ ಸಮಾಜದಲ್ಲಿ ಪ್ರಾಮಾಣಿಕತೆ ಬಗ್ಗೆ ಮಾತನಾಡುವವನೇ ಪಾಪಿ ಎಂಬಂತಾಗಿದೆ ಎಂದು ವಿಷಾದಿಸಿದರು.
ನಿವೃತ್ತ ನ್ಯಾಯಮೂರ್ತಿ ರತ್ನಕಲಾ, ‘ಸರ್ಕಾರಿ ಕಚೇರಿಗಳಲ್ಲಿ ಲಂಚದ ಸ್ವರೂಪ, ಬೇಡಿಕೆ ತೀವ್ರವಾಗುತ್ತಿದೆ. ಎಲ್ಲಾ ದಾಖಲೆಗಳು ಸರಿಯಿದ್ದರೂ ಅದನ್ನು ಮುಂದಿನ ಹಂತಕ್ಕೆ ಮುಟ್ಟಿಸಲು ಲಂಚ ಕೊಡಬೇಕಾಗಿದೆ. ಭ್ರಷ್ಟರನ್ನು ಧಿಕ್ಕರಿಸುವ ಮೂಲಕ ಭ್ರಷ್ಟಾಚಾರದಿಂದ ದೂರ ಉಳಿಯಬೇಕು’ ಎಂದು ಹೇಳಿದರು.
ನ್ಯಾಯಾಧೀಶರಾದ ನೂರುನ್ನೀಸಾ, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸ್ವಾಮಿ ಜಪಾನಂದ ಜೀ, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಕೆ.ಪ್ರಸನ್ನ ಕುಮಾರ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಜಿ.ಬಸವರಾಜ, ಐಕ್ಯೂಎಸಿ ಘಟಕದ ನಿರ್ದೇಶಕ ಪ್ರೊ.ಬಿ.ರಮೇಶ್, ಪಿಎಂಇಬಿ ಘಟಕದ ನಿರ್ದೇಶಕ ಪ್ರೊ.ಬಿ.ಟಿ.ಸಂಪತ್ ಕುಮಾರ್, ಉದ್ಯೋಗಾಧಿಕಾರಿ ಪ್ರೊ.ಕೆ.ಜಿ.ಪರಶುರಾಮ, ಸಹಾಯಕ ಪ್ರಾಧ್ಯಾಪಕಿ ಗೀತಾ ವಸಂತ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.