ತುಮಕೂರು: ಸ್ವಾತಂತ್ರ್ಯ ದಿನದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳು ನೃತ್ಯದ ಮೂಲಕ ಪರಿಸರ, ಶಿಕ್ಷಣ ಹಾಗೂ ಸ್ವಚ್ಛತೆ ಕುರಿತು ನೆರೆದಿದ್ದವರಲ್ಲಿ ಜಾಗೃತಿ ಮೂಡಿಸಿದರು.
ದೇವರಾಜ ಅರಸು ವಸತಿ ನಿಲಯದ ವಿದ್ಯಾರ್ಥಿಗಳು ಸ್ವಚ್ಛತೆ ಮನೆಯಿಂದಲೇ ಶುರುವಾಗಲಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಸುಂದರ ವಾತಾವರಣಕ್ಕೆ ಕೈ ಜೋಡಿಸಿ. ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರದ ನಾಶ, ಮನುಕುಲದ ಸರ್ವನಾಶ, ಪ್ರತಿಯೊಬ್ಬರು ಗಿಡ ನೆಡಿ, ಪರಿಸರ ಸಂರಕ್ಷಿಸಲು ಮುಂದಾಗಿ ಎಂಬ ಸಾಲುಗಳೊಂದಿಗೆ ಎಲ್ಲರನ್ನು ಎಚ್ಚರಿಸಿದರು. ಪ್ರಕೃತಿಯ ಕುರಿತು ಯೋಚಿಸುವಂತೆ ಮಾಡಿದರು.
ಕೆಪಿಎಸ್ ಎಂಪ್ರೆಸ್ ಶಾಲೆಯ 600 ವಿದ್ಯಾರ್ಥಿನಿಯರು ಪರಿಸರದ ಗೀತೆಗೆ ಹೆಜ್ಜೆ ಹಾಕಿದರು. ಅರಣ್ಯ ನಾಶದಿಂದ ಆಗುವ ಪರಿಣಾಮಗಳ ಬಗ್ಗೆ ನೃತ್ಯದ ಮೂಲಕ ತಿಳಿಸಿದರು. ಎಲ್ಲರ ಮೆಚ್ಚುಗೆಗೂ ಪಾತ್ರರಾದರು. ಶೇಷಾದ್ರಿಪುರಂ ಶಾಲೆಯ ನೂರಾರು ಮಕ್ಕಳು ಅಪಘಾತದ ಕುರಿತು ಜಾಗೃತಿ ಮೂಡಿಸುವ ನೃತ್ಯ ಪ್ರದರ್ಶಿಸಿದರು. ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ, ಅತಿವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ನಾಮಫಲಕ ಹಿಡಿದು ನೃತ್ಯ ಮಾಡಿದರು.
ಗುಬ್ಬಿ ತಾಲ್ಲೂಕಿನ ಬಿಕ್ಕೆಗುಡ್ಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಅಂಬೇಡ್ಕರ್ ಜೀವನ ಚರಿತ್ರೆ ಪರಿಚಯಿಸಲಾಯಿತು. ನಿಲಯದ ಮಕ್ಕಳು ಅಂಬೇಡ್ಕರ್ ಸಾಗಿ ಬಂದ ಹಾದಿಯನ್ನು ಎಲ್ಲರು ಸ್ಮರಿಸುವಂತೆ ಮಾಡಿದರು. ಎಲ್ಲರ ಗಮನ ತಮ್ಮತ್ತ ಸೆಳೆದರು.
ಕ್ಯಾತ್ಸಂದ್ರದ ಚೈತನ್ಯ ಟೆಕ್ನೊ ಶಾಲೆ ವಿದ್ಯಾರ್ಥಿಗಳು ಶಿಕ್ಷಣ ವಿಷಯ ಆಯ್ಕೆ ಮಾಡಿಕೊಂಡು ಉತ್ತಮವಾಗಿ ನೃತ್ಯ ಪ್ರದರ್ಶಿಸಿದರು. ಸೆಂಟ್ ಮೇರಿಸ್ ಶಾಲೆ ಮಕ್ಕಳು ‘ಜೈ ಹಿಂದ್’ ಹಾಡಿಗೆ ಹೆಜ್ಜೆ ಹಾಕಿದರು. ಡಾನ್ ಬಾಸ್ಕೋ ಶಾಲೆ ‘ವಂದೇ ಮಾತರಂ’ ಗೀತೆಗೆ ಕುಣಿದು ಕುಪ್ಪಳಿಸಿದರು.
2022–23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಿಪಟೂರಿನ ಜಿ.ಜೆ.ಮಧುಶ್ರೀ, ಡಿ.ಮೌಲ್ಯ, ಚಿಕ್ಕನಾಯಕನಹಳ್ಳಿಯ ಎಚ್.ಎಸ್.ಆದಿತ್ಯ, ತುಮಕೂರಿನ ಸಾರಾ ಕೌಸರ್, ಲಾಂಛನಾ, ಆರ್.ಚಂದನ ಅವರಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಕ್ರೀಡಾ ಕ್ಷೇತ್ರದ ಸಾಧಕರು, ಅಂಗಾಂಗ ದಾನ ಮಾಡಿದವರನ್ನು ಅಭಿನಂದಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.