ADVERTISEMENT

1,426 ಕಿ.ಮೀ ರೈಲು ಮಾರ್ಗದಲ್ಲಿ ಸ್ವಯಂ ಚಾಲಿತ ಸಿಗ್ನಲ್‌ ಅಳವಡಿಕೆ: ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 5:03 IST
Last Updated 14 ಅಕ್ಟೋಬರ್ 2024, 5:03 IST
<div class="paragraphs"><p>ತುಮಕೂರಿನಲ್ಲಿ ಭಾನುವಾರ ನಡೆದ ರೈಲ್ವೆ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ‘ನಮ್ಮ ರೈಲು’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. </p></div>

ತುಮಕೂರಿನಲ್ಲಿ ಭಾನುವಾರ ನಡೆದ ರೈಲ್ವೆ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ‘ನಮ್ಮ ರೈಲು’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

   

ತುಮಕೂರು: ಪ್ರಸಕ್ತ ಸಾಲಿನಲ್ಲಿ ರಾಜ್ಯದ 1,426 ಕಿಲೊ ಮೀಟರ್‌ ರೈಲು ಮಾರ್ಗದಲ್ಲಿ ಸ್ವಯಂ ಚಾಲಿತ ಸಿಗ್ನಲ್‌ ಅಳವಡಿಸಲಾಗುವುದು. ಈಗಾಗಲೇ 127 ಕಿ.ಮೀ ಪೂರ್ಣಗೊಂಡಿದೆ ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಭಾನುವಾರ ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ಹಮ್ಮಿಕೊಂಡಿದ್ದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

ದೇಶದಲ್ಲಿ 12 ಲಕ್ಷ ರೈಲ್ವೆ ನೌಕರರು ಕೆಲಸ ಮಾಡುತ್ತಿದ್ದಾರೆ. ಪ್ರಪಂಚದ ಸಾರಿಗೆ ವ್ಯವಸ್ಥೆಯಲ್ಲಿ ಭಾರತದ ರೈಲ್ವೆ 4ನೇ ಸ್ಥಾನದಲ್ಲಿದ್ದು, ಇದನ್ನು 2ನೇ ಸ್ಥಾನಕ್ಕೆ ತರಬೇಕು ಎಂಬುವುದು ಪ್ರಧಾನಿ ಮೋದಿಯವರ ಕನಸಾಗಿದೆ. ಇದಕ್ಕಾಗಿ ಹಲವಾರು ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅಗತ್ಯ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇನ್ನು 10 ವರ್ಷ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಮುಂದುವರಿಯುತ್ತಾರೆ. ಮುಂದಿನ ನಾಲ್ಕೈದು ತಿಂಗಳಲ್ಲಿ ಮೋದಿಯವರು ಜಿಲ್ಲೆಗೆ ಒಂದು ದೊಡ್ಡ ಯೋಜನೆ ಘೋಷಿಸಲಿದ್ದಾರೆ. ನಿರೀಕ್ಷೆಗೂ ಮೀರಿ ನಗರದ ರೈಲು ನಿಲ್ದಾಣ ಅಭಿವೃದ್ಧಿ ಮಾಡಲಾಗುತ್ತಿದೆ. ತುಮಕೂರು ಇನ್ನೊಂದು ಬೆಂಗಳೂರು ಆಗಿ ಪರಿವರ್ತನೆ ಆಗುವ ಕಾಲ ದೂರವಿಲ್ಲ. ಅವಶ್ಯಕತೆ ಇದ್ದರೆ ಮತ್ತೊಂದು ಮೆಮು ರೈಲು ಬಿಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಪದಾಧಿಕಾರಿಗಳು ಸರ್ಕಾರದ ಜತೆ ಕೈ ಜೋಡಿಸಿ ಕೆಲಸ ಮಾಡಬೇಕು. ಜನ ಸಾಮಾನ್ಯರಿಗೆ ಸರ್ಕಾರದ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ಎಲ್ಲರು ಪಾರದರ್ಶಕವಾಗಿರಬೇಕು. ಸಂಘದ ಜತೆ ನಾವು ಸದಾ ಇರುತ್ತೇವೆ ಎಂದರು.

ರೈಲ್ವೆ ಪ್ರಯಾಣಿಕರ ವೇದಿಕೆಯ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ‘ಎಲ್ಲ ತಾಲ್ಲೂಕುಗಳಿಗೆ ರೈಲು ಸಂಪರ್ಕ ಕಲ್ಪಿಸಬೇಕು ಎಂಬುವುದು ನಮ್ಮ ಉದ್ದೇಶ.‌ ರೈಲ್ವೆ ಪ್ರಯಾಣಿಕರ‌ ಸಮಸ್ಯೆ ನಿವಾರಣೆಗೆ ಶ್ರಮಿಸಲಾಗುತ್ತಿದೆ. ಹತ್ತು ವರ್ಷದಲ್ಲಿ ಸಾಕಷ್ಟು ಪ್ರಯೋಜನ ಆಗಿದೆ. ಆದರೆ, ನಮ್ಮ ಸಂಸ್ಥೆ ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ’ ಎಂದು ವಿಷಾದಿಸಿದರು.

ವೇದಿಕೆಯಿಂದ ರೈಲು ಪ್ರಯಾಣಿಕರ ಸಮಸ್ಯೆಗೆ ನಿರಂತರವಾಗಿ ಸ್ಪಂದಿಸಲಾಗುತ್ತಿದೆ. ಪ್ರತಿಭಾ ಪುರಸ್ಕಾರ‌, ಆರೋಗ್ಯ ಶಿಬಿರ ಏರ್ಪಡಿಸಲಾಗುತ್ತಿದೆ. ದಶಮಾನೋತ್ಸವದ ಪ್ರಯುಕ್ತ ಆಯೋಜಿಸಿದ್ದ ಚಿತ್ರಕಲಾ, ಪ್ರಬಂಧ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಮಾಜಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮುಖಂಡರಾದ ವೈ.ಎಚ್.ಹುಚ್ಚಯ್ಯ, ಮುರಳೀಧರ್ ಹಾಲಪ್ಪ, ಎಸ್.ಶಿವಪ್ರಕಾಶ್, ರೈಲ್ವೆ ಪ್ರಯಾಣಿಕರ ವೇದಿಕೆಯ ಕಾರ್ಯದರ್ಶಿ ಕರಣಂ ರಮೇಶ್, ಉಪಾಧ್ಯಕ್ಷರಾದ ಬಿ.ಆರ್‌.ಪರಮೇಶ್ ಸಿಂದಗಿ, ಮಾಧವಮೂರ್ತಿ ಗುಡಿಬಂಡೆ ಇತರರು ಪಾಲ್ಗೊಂಡಿದ್ದರು.

ದಶಮಾನೋತ್ಸವ ಕಾರ್ಯಕ್ರಮ ಆಯೋಜಕರು ಮತ್ತು ರೈಲು ಪ್ರಯಾಣಿಕರ ಮಧ್ಯೆ ಮಾತಿನ ಚಕಮಕಿ ನಡೆಯಿತು

ಸೋಮಣ್ಣ ಅಸಮಾಧಾನ

ದಶಮಾನೋತ್ಸವ ಕಾರ್ಯಕ್ರಮದಲ್ಲಿ ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ಸಲ್ಲಿಸಿದ ಬೇಡಿಕೆಯ ಪಟ್ಟಿ ಕಂಡು ಸಚಿವ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು. ರೈಲ್ವೆ ಇಲಾಖೆ ತುಂಬಾ ಸೂಕ್ಷ್ಮವಾದ ಇಲಾಖೆ. ಈ ಪಟ್ಟಿ ಪ್ರಧಾನಿ ಮೋದಿ ಅವರಿಗೆ ತಲುಪಿದರೆ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಸಮರ್ಪಕ ಮಾಹಿತಿ ಇಲ್ಲದೆ ಎಲ್ಲವನ್ನು ಸೇರಿಸಬಾರದು. ಆಶ್ವಾಸನೆ ನೀಡಿದಾಗ ಅದನ್ನು ಕಾರ್ಯರೂಪಕ್ಕೆ ತರಬೇಕು. ಸುಮ್ಮನೆ ಹೇಳಬಾರದು. ಇನ್ನು 25 ವರ್ಷ ನಾನು ರೈಲ್ವೆ ಮಂತ್ರಿಯಾಗಿದ್ದರೂ ಇಷ್ಟೆಲ್ಲ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದರು.

ಸಚಿವರ ವಿರುದ್ಧ ಆಕ್ರೋಶ

ತುಮಕೂರು- ಅರಸೀಕೆರೆಗೆ ಒಂದು ಮೆಮು ರೈಲು ಇಲ್ಲದೆ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಚಿಕ್ಕಮಗಳೂರು- ಯಶವಂತಪುರ ರೈಲು ನಗರದ ನಿಲ್ದಾಣದಲ್ಲಿ ನಿಲ್ಲುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ರೈಲು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಸೋಮಣ್ಣ ವೇದಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತಾರೆ ಎಂಬ ನಿರೀಕ್ಷೆಯಿಂದ ಬಂದವರಿಗೆ ನಿರಾಸೆ ಎದುರಾಯಿತು. ಸಚಿವರು ವೇದಿಕೆಯಿಂದ ನಿರ್ಗಮಿಸಿದ ನಂತರ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮ ಆಯೋಜಕರ ಜತೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆಲ ಕಾಲ ಕಾರ್ಯಕ್ರಮಕ್ಕೆ ಅಡ್ಡಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.