ತಿಪಟೂರು: ಅಧಿಕಾರ ಹಿಡಿಯುವ ಸಲುವಾಗಿ ಗ್ಯಾರಂಟಿ ಯೋಜನೆ ನೀಡುವ ಬದಲು ಜನರಿಗೆ ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಸಬೇಕು. ಜನರನ್ನು ಸೋಮಾರಿಯನ್ನಾಗಿ ಮಾಡಿ ದುರಾಸೆ, ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಆಷಾಢ ಮಾಸದ ಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ ಮಾತನಾಡಿದರು.
‘ಗ್ಯಾರಂಟಿ’ ಯೋಜನೆಗಳಿಂದ ಸರ್ಕಾರವು ಮುಂದಿನ ದಿನಗಳಲ್ಲಿ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ. ಸರ್ಕಾರದ ಬೊಕ್ಕಸಕ್ಕೆ ಕೊರತೆಯಾಗುತ್ತದೆ ಎಂದರು.
ಪಠ್ಯದಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರ ವಿಚಾರ ತಿಳಿಸಬೇಕೆ ಹೊರೆತು ಅನಗತ್ಯ ಚಿಂತನೆ ತುಂಬಬಾರದು. 12ನೇ ಶತಮಾನದ ಬಸವಣ್ಣ, ಮಹಾತ್ಮ ಗಾಂಧೀಜಿ, ಡಿವಿಜಿ, ಕುವೆಂಪು ಅಂತಹವರ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಸಚಿವ ಬಿ.ಸಿ ನಾಗೇಶ್ ‘ರಂಭಾಪುರಿ ಬೆಳಗು’ ಬಿಡುಗಡೆ ಮಾಡಿ ಮಾತನಾಡಿ, ಮನುಷ್ಯ ಮನುಷ್ಯತ್ವ ಕಳೆದುಕೊಂಡಾಗ ಹೀನ ಕೃತ್ಯಕ್ಕೆ ಮುಂದಾಗುತ್ತಾನೆ. ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿದ್ದಾನೆ. ಧರ್ಮ ಜಾಗೃತಿ ಸಭೆಗಳಿಂದ ಮಾನವೀಯ ಗುಣ ಬೆಳೆಸಿಕೊಳ್ಳಲು ಸಹಕಾರಿ ಎಂದರು.
ಮುಖಂಡ ಮುರಳೀಧರ ಹಾಲಪ್ಪ ಮಾತನಾಡಿ, ಸ್ವಾಮೀಜಿ ಧರ್ಮ ರಕ್ಷಣೆಗಾಗಿ ಪ್ರವಾಸ ಕೈಗೊಳ್ಳುತ್ತಾ ಧಾರ್ಮಿಕ ಜಾಗೃತಿ ಸಭೆ ನಡೆಸುತ್ತಿದ್ದಾರೆ ಎಂದರು.
ಬೂದಿಹಾಳ ಮಠದ ಶಶಿಶೇಖರ ಸ್ವಾಮೀಜಿ ಮಾತನಾಡಿ, ಆಚಾರ, ವಿಚಾರ ಸಂಸ್ಕೃತಿ ಸಂಬಂಧಕ್ಕೆ ಹಾಗೂ ಶಿಲ್ಪ ಕಲೆಗಳ ತವರೂರಾದ ರಾಜ್ಯವು ಪಂಚಪೀಠಗಳಿಗೆ ತನ್ನದೇ ಆದ ಇತಿಹಾಸ ಹೊಂದಿದೆ. ವಿವಿಧತೆಯಲ್ಲಿ ಏಕತೆ ಕಾಣುವ ದೇಶವಾಗಿದೆ ಎಂದು ಹೇಳಿದರು.
ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉಜ್ವಲ ಭವಿಷ್ಯಕ್ಕೆ ಧರ್ಮ ದಿಕ್ಸೂಚಿ ಎಂದರು.
ಗುರುಬಸಪ್ಪ ಪಲ್ಲಾಗಟ್ಟಿ, ಮಾಜಿ ಪುರಸಭಾ ಸದಸ್ಯ ನಟರಾಜ, ಡಿವೈಎಸ್‍ಪಿ ಸಿದ್ಧಾರ್ಥ ಗೋಯಲ್, ವಕೀಲ ಬಿ.ನಂದಕುಮಾರ, ಗಂಗಾಧರಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.