ADVERTISEMENT

ಬೆಳ್ಳಾವಿ ಬಳಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ: ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 3:59 IST
Last Updated 16 ಆಗಸ್ಟ್ 2024, 3:59 IST
ತುಮಕೂರಿನಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿದ ಸಚಿವ ಜಿ.ಪರಮೇಶ್ವರ ಗೌರವ ವಂದನೆ ಸ್ವೀಕರಿಸಿದರು
ತುಮಕೂರಿನಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿದ ಸಚಿವ ಜಿ.ಪರಮೇಶ್ವರ ಗೌರವ ವಂದನೆ ಸ್ವೀಕರಿಸಿದರು   

ತುಮಕೂರು: ತಾಲ್ಲೂಕಿನ ಬೆಳ್ಳಾವಿ ಹೋಬಳಿ ಪಿ.ಗೊಲ್ಲಹಳ್ಳಿ ಬಳಿ 41.33 ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು.

ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು.

ಪಿ.ಗೊಲ್ಲಹಳ್ಳಿ ಗ್ರಾಮದಲ್ಲಿ 25 ಎಕರೆ, ಸೋರೆಕುಂಟೆ ಗ್ರಾಮದಲ್ಲಿ 16.33 ಎಕರೆ ಸೇರಿದಂತೆ ಒಟ್ಟು 41.33 ಎಕರೆಯನ್ನು ಕ್ರೀಡಾಂಗಣಕ್ಕೆ ಮೀಸಲಿಡಲಾಗಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಭೂಮಿ ಹಸ್ತಾಂತರಿಸಲಾಗುವುದು. 50 ಸಾವಿರ ಜನರು ಕುಳಿತುಕೊಳ್ಳಬಹುದಾದ ಕ್ರೀಡಾಂಗಣ ನಿರ್ಮಾಣವಾಗಲಿದೆ. ಜತೆಗೆ ಕ್ರಿಕೆಟ್ ತರಬೇತಿ ಅಕಾಡೆಮಿಯನ್ನು ಸ್ಥಾಪಿಸಲಾಗುತ್ತದೆ. ಕೆಎಸ್‌ಸಿಎ ಕ್ರೀಡಾಂಗಣ ನಿರ್ಮಿಸಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆಗೆ ಭಂಗ ಬಾರದಂತೆ ನೋಡಿಕೊಳ್ಳಲಾಗಿದೆ. ಕೋಮು ಗಲಭೆ, ಅಹಿತಕರ ಘಟನೆಗಳಿಗೆ ಅವಕಾಶ ನೀಡಿಲ್ಲ. ಸೆಪ್ಟೆಂಬರ್‌ನಲ್ಲಿ ಗಣೇಶೋತ್ಸವ ಬರಲಿದ್ದು, ಈ ಬಾರಿಯೂ ಶಾಂತಿಯಿಂದ ಆಚರಣೆ ಮಾಡಬೇಕು. ಗಣೇಶನ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

‘ಜಿಲ್ಲಾ ಮಟ್ಟದಲ್ಲಿ ಆಡಳಿತ ಚುರುಕುಗೊಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕೆಡಿಪಿ ಸಭೆಯಲ್ಲಿ ಕಠಿಣವಾಗಿ ಹೇಳಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ, ದೂರುಗಳು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

ಇದಕ್ಕೂ ಮುನ್ನ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟ ಹಾಗೂ ಹೋರಾಟದಲ್ಲಿ ತೊಡಗಿಸಿಕೊಂಡ ಮಹನೀಯರನ್ನು ನೆನಪು ಮಾಡಿಕೊಂಡರು. ಐದು ಗ್ಯಾರಂಟಿ ಯೋಜನೆಗಳ ಜಾರಿ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದರು.

ನರೇಗಾದಲ್ಲಿ ಗುರಿ ಮೀರಿದ ಸಾಧನೆ, ಶಾಲಾ ಕೊಠಡಿಗಳ ನಿರ್ಮಾಣ, ‘ತುಮಕೂರು ಅಭಿಯಾನ’ ಕಾರ್ಯಕ್ರಮದಲ್ಲಿ ಜನರ ಆರೋಗ್ಯ ತಪಾಸಣೆ, ಮನೆಗಳ ನಿರ್ಮಾಣ, ಸ್ಮಾರ್ಟ್ ಸಿಟಿ ಯೋಜನೆ ಜಾರಿ, ನೂತನ ಬಸ್ ನಿಲ್ದಾಣ ನಿರ್ಮಾಣ, ವಸಂತನರಸಾಪುರ ಪ್ರದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿ, ಎತ್ತಿನಹೊಳೆ ಯೋಜನೆ ಜಾರಿ, ರೈಲ್ವೆ ಯೋಜನೆಗಳ ಪ್ರಗತಿಯ ಚಿತ್ರಣ ನೀಡಿದರು.

ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಆಡಳಿತದ ನೇತೃತ್ವದಲ್ಲಿ ದಸರಾ

ತುಮಕೂರು: ಈ ಸಲದಿಂದ ಜಿಲ್ಲಾ ಆಡಳಿತದ ನೇತೃತ್ವದಲ್ಲೇ ನಗರದಲ್ಲಿ ದಸರಾ ಹಬ್ಬದ ಆಚರಣೆ ನಡೆಯಲಿದೆ ಎಂದು ಸಚಿವ ಜಿ.ಪರಮೇಶ್ವರ ತಿಳಿಸಿದರು. ಈವರೆಗೆ ದಸರಾ ಆಚರಣೆಗೆ ಸರ್ಕಾರದಿಂದ ಹಣ ಕೊಡುತ್ತಿರಲಿಲ್ಲ. ಈ ಬಾರಿಯಿಂದ ಹಣ ನೀಡಲಾಗುವುದು. ಹಾಗಾಗಿ ಜಿಲ್ಲಾ ಆಡಳಿತದ ನೇತೃತ್ವದಲ್ಲಿ ನಡೆಯಲಿದೆ ಎಂದರು. ಈವರೆಗೆ ಕೆಲವರು ಸೇರಿಕೊಂಡು ದಸರಾ ಆಚರಣೆ ಮಾಡಿಕೊಂಡು ಬರುತ್ತಿದ್ದರು. ಇದು ಕೆಲವರ ರಾಜಕೀಯ ಪಕ್ಷದ ಹಬ್ಬವಾಗಬಾರದು. ಊರ ಹಬ್ಬವಾಗಬೇಕಿದೆ. ದಸರಾ ಹೆಸರಿನಲ್ಲಿ ರಾಜಕೀಯ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.