ತುಮಕೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಸಾಮೂಹಿಕ ಯೋಗ ಶಿಬಿರ ನಡೆಯಿತು.
ಜಿಲ್ಲಾ ಆಡಳಿತ, ಆಯುಷ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ವಿವಿಧ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು ಯೋಗಾಸನ ಮಾಡಿದರು.
ಸೋಮಣ್ಣ ಮಾತನಾಡಿ, ‘ಯೋಗ ಭಾರತದ ಪರಂಪರೆಯ ಅತಿ ಮಹತ್ವದ ಕೊಡುಗೆ. ಯೋಗ ದೇಹ, ಮನಸ್ಸನ್ನು ಒಳಗೊಂಡಿದೆ. ಮನುಷ್ಯ, ಪ್ರಕೃತಿ ಮಧ್ಯದ ಬಾಂಧವ್ಯವೇ ಯೋಗ. ಇದೊಂದು ಬದುಕು ಬದಲಿಸುವ, ಅರಳಿಸುವ ವಿಧಾನ. ಯೋಗ ಸಂಯಮ, ಸಾರ್ಥಕತೆಯನ್ನು ಒಳಗೊಂಡಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿಸುತ್ತದೆ. ಆರು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆ. ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಯೋಗ ದಿನ ಆಚರಣೆ ಮಾಡಲಾಗುತ್ತಿದೆ’ ಎಂದರು.
ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಯೋಗದ ಮಹತ್ವ ತಿಳಿಸಿದರು. ಅಂದಿನಿಂದ ನಿರಂತರವಾಗಿ ಯೋಗ ದಿನ ಆಚರಿಸಲಾಗುತ್ತಿದೆ. ಭಾರತೀಯರ ಸಾರ್ವಭೌಮತ್ವ, ಆರೋಗ್ಯ ಕಾಪಾಡುವಲ್ಲಿ ಯೋಗ ಸಹಕಾರಿಯಾಗಿದೆ ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ವಿ.ಎಂ.ಪ್ರಭಾಕರ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.