ADVERTISEMENT

ಜಗದೇಕಮಲ್ಲನ ಶಿಲಾ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 5:57 IST
Last Updated 12 ಜೂನ್ 2024, 5:57 IST
ಗದಗ ಜಿಲ್ಲೆ ಲಕ್ಕುಂಡಿಯ ಹಾಲುಗೊಂಡ ಬಸವೇಶ್ವರ ದೇವಾಲಯದಲ್ಲಿ ಪತ್ತೆಯಾದ ಶಾಸನ
ಗದಗ ಜಿಲ್ಲೆ ಲಕ್ಕುಂಡಿಯ ಹಾಲುಗೊಂಡ ಬಸವೇಶ್ವರ ದೇವಾಲಯದಲ್ಲಿ ಪತ್ತೆಯಾದ ಶಾಸನ   

ತುಮಕೂರು: ಗದಗ ಜಿಲ್ಲೆ ಲಕ್ಕುಂಡಿಯ ಹಾಲುಗೊಂಡ ಬಸವೇಶ್ವರ ದೇವಾಲಯದಲ್ಲಿ ಕಲ್ಯಾಣ ಚಾಲುಕ್ಯರ ಜಗದೇಕಮಲ್ಲನಿಗೆ ಸೇರಿದ ಶಿಲಾ ಶಾಸನ ಪತ್ತೆಯಾಗಿದೆ.

ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಎಂ.ಕೊಟ್ರೇಶ್‌, ದಾವಣಗೆರೆ ವಿ.ವಿ ಸಂಶೋಧನಾರ್ಥಿ ಜೆ.ಸುಧಾ ಸಂಶೋಧನೆ ನಡೆಸಿ ಶಾಸನ ಪತ್ತೆ ಮಾಡಿದ್ದಾರೆ.

ದೇವಾಲಯದ ಒಳಗೆ ನವರಂಗದ ಪೂರ್ವ ಭಾಗದ ತೊಲೆಯಲ್ಲಿ ಶಾಸನ ಕಂಡು ಬಂದಿದೆ. ದೇವಾಲಯದ ಪಶ್ಚಿಮಾಭಿಮುಖವಾಗಿದ್ದ ಛತ್ತಿನಲ್ಲಿ ಕಪ್ಪನೆ ಮೇಣದಲ್ಲಿ ಮುಚ್ಚಿಹೋಗಿದ್ದ ಶಾಸನವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಕಪ್ಪು ಮಿಶ್ರಿತ ನೀಲಿ ಛಾಯೆಯ ಬಳಪದ ಶಿಲೆಯಲ್ಲಿ ಈ ಶಾಸನ ಕೆತ್ತಲಾಗಿದೆ.

ADVERTISEMENT

‘18 ಸಾಲುಗಳನ್ನು ಹೊಂದಿರುವ ಶಾಸನವು ಕ್ರಿ.ಶ 1137-1147ರಲ್ಲಿ ಆಳ್ವಿಕೆ ಮಾಡಿದ್ದ ಕಲ್ಯಾಣ ಚಾಲುಕ್ಯರ ಜಗದೇಕಮಲ್ಲನಿಗೆ ಸೇರಿದೆ. ಶಾಸನದಲ್ಲಿ ಇಂದಿನ ಹಾಲುಗೊಂಡ ಬಸವೇಶ್ವರ ದೇವಾಲಯದ ಮೂಲ ರೂಪ ಗುರುತಿಸಬಹುದು. ಶಾಸನದಲ್ಲಿ ಅದನ್ನು ಹಾಳುಗೆಡವದಂತೆ ಎಚ್ಚರಿಕೆ ನೀಡಲಾಗಿದೆ. ದಾನ ದತ್ತಿಗಳ ವಿವರಣೆಗಳಿವೆ. ಕರ್ನಾಟಕದ ಶಾಸನಗಳ ಸಾಲಿಗೆ ಇದು ಒಂದು ಹೊಸ ಸೇರ್ಪಡೆ’ ಎಂದು ಪ್ರೊ.ಎಂ.ಕೊಟ್ರೇಶ್‌ ತಿಳಿಸಿದ್ದಾರೆ.

ಲಕ್ಕುಂಡಿಯಲ್ಲಿ ದೊರೆತ ಜಗದೇಕಮಲ್ಲನ ಮೊದಲ ಶಾಸನವಾಗಿದೆ. ಪ್ರಸ್ತುತ ಇರುವ ಹಾಲಗೊಂಡ ದೇವಾಲಯವನ್ನು 1 ಸಾವಿರ ವರ್ಷಗಳ ಹಿಂದೆ ಗವರೇಶ್ವರ ಎಂದು ಕರೆಯಲಾಗುತ್ತಿತ್ತು ಎಂಬ ಮಾಹಿತಿಯನ್ನು ಈ ಶಾಸನ ನೀಡುತ್ತದೆ. ಪರೋಪಕಾರ ಮಾಡುವ, ಬೇಡಿ ಬಂದವರಿಗೆ ಆಶ್ರಯ ನೀಡುವ ಕಲ್ಪವೃಕ್ಷದಂತಹ ಗುಣ ರಾಜನಲ್ಲಿತ್ತು ಎಂದು ಶಾಸನದಲ್ಲಿ ಉಲ್ಲೇಖಿಸಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.