ADVERTISEMENT

ಶಿರಾ: ಮನೆ ಮುಂದಿನ ದೃಷ್ಟಿ ಗೊಂಬೆಯಾದ ನಲ್ಲಿಗಳು

ಎಚ್.ಸಿ.ಅನಂತರಾಮು
Published 8 ಆಗಸ್ಟ್ 2024, 6:52 IST
Last Updated 8 ಆಗಸ್ಟ್ 2024, 6:52 IST
ಶಿರಾ ತಾಲ್ಲೂಕಿನ ಹುಯಿಲ್‌ದೊರೆ ಗ್ರಾಮದಲ್ಲಿ ಜೆಜೆಎಂ ಯೋಜನೆಯಲ್ಲಿ ಹಾಕಿರುವ ನಲ್ಲಿನ ಸುತ್ತ ಬೆಳದಿರುವ ಹುಲ್ಲು, ಗಿಡ
ಶಿರಾ ತಾಲ್ಲೂಕಿನ ಹುಯಿಲ್‌ದೊರೆ ಗ್ರಾಮದಲ್ಲಿ ಜೆಜೆಎಂ ಯೋಜನೆಯಲ್ಲಿ ಹಾಕಿರುವ ನಲ್ಲಿನ ಸುತ್ತ ಬೆಳದಿರುವ ಹುಲ್ಲು, ಗಿಡ   

ಶಿರಾ: ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್ ಯೋಜನೆ (ಜೆಜೆಎಂ) ಕಾಮಗಾರಿ ತಾಲ್ಲೂಕಿನಲ್ಲಿ ಮಂದಗತಿಯಲ್ಲಿ ಸಾಗಿದೆ.

ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್‌ನಡಿಯಲ್ಲಿ ₹209 ಕೋಟಿ ವೆಚ್ಚದಲ್ಲಿ 387 ಕಾಮಗಾರಿಗಳ ಗುರಿ ಹೊಂದಲಾಗಿದೆ. ಈಗಾಗಲೇ 290 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. ಅದರಲ್ಲಿ 63 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ 97 ಕಾಮಗಾರಿಗಳಿಗೆ ಟೆಂಡರ್ ಕರೆಯಬೇಕಿದೆ.

ಜಲಜೀವನ್ ಮಿಷನ್ ನಡಿ 264 ಹೊಸ ಟ್ಯಾಂಕ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 25 ಟ್ಯಾಂಕ್‌ಗಳ ಕಾಮಗಾರಿ ಪೂರ್ಣಗೊಂಡಿದೆ. ಕೆಲವೆಡೆ ಸುಸ್ಥಿತಿಯಲ್ಲಿರುವ ಹಳೆಯ ಟ್ಯಾಂಕ್‌ಗಳನ್ನು ಮರುಬಳಕೆ ಮಾಡಿಕೊಳ್ಳಲು ಚಿಂತಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ಗುತ್ತಿಗೆದಾರರು ಕಾಮಗಾರಿಗಳನ್ನು ಅರೆ ಬರೆಯಾಗಿ ನಡೆಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ADVERTISEMENT

ರಸ್ತೆ ಅಗೆದು ಅಧ್ವಾನ: ಜಲ ಜೀವನ್ ಮಿಷನ್ ಕಾಮಗಾರಿಗಾಗಿ ಹಳ್ಳಿಗಳಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಹೀಗೆ ಅಗೆದ ರಸ್ತೆಗಳನ್ನು ಗುತ್ತಿಗೆದಾರರು ಸೂಕ್ತವಾಗಿ ಮುಚ್ಚಿಲ್ಲ. ಇದರಿಂದಾಗಿ ಮಳೆ ಬಂದರೆ ರಸ್ತೆಗಳು ಕೆಸರುಮಯವಾಗಿದ್ದು ಓಡಾಡಲು ಕಷ್ಟವಾಗುತ್ತಿದೆ. ಕೆಲವೆಡೆ ಹೊಸದಾಗಿ ನಿರ್ಮಿಸಿರುವ ಸಿಮೆಂಟ್ ರಸ್ತೆಗಳನ್ನೂ ಅಗೆದು ಹಾಳು ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ..

‘ಕಾಮಗಾರಿಗಳು ಪೂರ್ಣಗೊಂಡಿದ್ದರೂ ಅವುಗಳನ್ನು ಇದುವರೆಗೂ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿಲ್ಲ. ಇದು ಗುತ್ತಿಗೆದಾರರಿಗೆ ಹೊರೆಯಾಗುತ್ತಿದೆ. ಕಾಮಗಾರಿ ಪೂರ್ಣಗೊಂಡು ಬಳಕೆಯಾಗದ ಕಾರಣ ಅವುಗಳ ರಕ್ಷಣೆ ಸವಾಲಾಗಿದೆ. ರಸ್ತೆ, ಚರಂಡಿ ಕಾಮಗಾರಿ ಮಾಡುವಾಗ ಕೆಲವೆಡೆ ಪೈಪ್‌ಲೈನ್ ಕಿತ್ತು ಹಾಕಲಾಗುತ್ತಿದೆ. ಬಿಲ್ ನೀಡಿದರೆ ನಮಗೆ ಅನುಕೂಲವಾಗುವುದು’ ಎನ್ನುತ್ತಾರೆ ಗುತ್ತಿಗೆದಾರರು.

ಗ್ರಾ.ಪಂ ಹಿಂದೇಟು: ಜೆಜೆಎಂ ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗಳು ಸಹ ಹಿಂದೇಟು ಹಾಕುತ್ತಿವೆ. ಇವುಗಳನ್ನು ಹಸ್ತಾಂತರ ಮಾಡಿಕೊಂಡರೆ ಇವುಗಳ ನಿರ್ವಹಣೆಯ ಹೊಣೆ ಒಂದು ವರ್ಷ ಗುತ್ತಿಗೆದಾರರೆ ಮಾಡುವುದರಿಂದ ಕುಡಿಯುವ ನೀರಿನ ವಿಚಾರದಲ್ಲಿ ಹೊಸದಾಗಿ ಬಿಲ್ ಮಾಡಿಕೊಳ್ಳಲು ಬರುವುದಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

ಗುತ್ತಿಗೆದಾರರ ಹಿಂದೇಟು: ತಾಲ್ಲೂಕಿನಲ್ಲಿ ಸಣ್ಣ, ಪುಟ್ಟ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪ್ರಾರಂಭಿಸಿದ್ದು ದೊಡ್ಡ ಗ್ರಾಮಗಳಲ್ಲಿ ಕೆಲಸವೇ ಪ್ರಾರಂಭವಾಗಿಲ್ಲ. ಅವಳಿ ಗ್ರಾಮಗಳಂತಿರುವ ಕಾಮಗೊಂಡನಹಳ್ಳಿಯಲ್ಲಿ ಕಾಮಗಾರಿ ಮಾಡಿದ್ದರೆ ಪಟ್ಟನಾಯಕನಹಳ್ಳಿಯಲ್ಲಿ ಕಾಮಗಾರಿ ಪ್ರಾರಂಭವಾಗಿಲ್ಲ. ಸಾಲ‌ ಮಾಡಿ ಕೆಲಸ ಮಾಡಿರುವ ಗುತ್ತಿಗೆದಾರರು ಬಿಲ್ ತಡವಾಗುತ್ತಿರುವುದರಿಂದ ಮುಂದಿನ ಕೆಲಸ ಮಾಡಲು ಕಷ್ಟವಾಗುತ್ತಿದೆ. ಕಾಮಗಾರಿ ಅಂದಾಜು ಪಟ್ಟಿ ತಯಾರು ಮಾಡುವ ಸಮಯದಲ್ಲಿ ಮನೆಗಳ ಸಂಖ್ಯೆಯನ್ನು ಕಡಿಮೆ‌ ಮಾಡಿದ್ದಾರೆ. ಸಿಮೆಂಟ್ ರಸ್ತೆಗಳನ್ನು ಅಗೆದು ಕಾಮಗಾರಿ ಮಾಡಿದಾಗ ರಸ್ತೆ ದುರಸ್ತಿ ಮಾಡಿಸಲು ಹಣ ನಿಗದಿ ಮಾಡಿಲ್ಲ. ಪೈಪ್‌ಗಳ ಗುಣಮಟ್ಟದ ಪರೀಕ್ಷೆಗೆ (ಸಿಪೆಟ್ ಟೆಸ್ಟ್) ₹12,500 ಖರ್ಚು ಬರುತ್ತಿದ್ದು ಅದನ್ನು ಸೇರಿಸಿಲ್ಲದ ಕಾರಣ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಗುತ್ತಿಗೆದಾರರು ನೋವು ತೋಡಿಕೊಳ್ಳುತ್ತಿದ್ದಾರೆ.

ಗ್ರಾಮದಲ್ಲಿ ಚರಂಡಿ ಪಕ್ಕದಲ್ಲಿ ನಲ್ಲಿಗಳನ್ನು ಹಾಕಿದ್ದಾರೆ. ಕೆಲವೆಡೆ ಪ್ರಭಾವಿಗಳ ಮನೆಯ ಒಳಗೆ ನಲ್ಲಿ ಹಾಕಿಕೊಟ್ಟಿದ್ದಾರೆ ಎನ್ನುವ ದೂರುಗಳು ಇವೆ. ಕಾಮಗಾರಿ ಮಾಡಿ ವರ್ಷವಾದರೂ ಒಂದು ತೊಟ್ಟು ನೀರು ಕೊಟ್ಟಿಲ್ಲ. ಮನೆಯ ಮುಂದೆ ದೃಷ್ಟಿ ಗೊಂಬೆಗಳಂತೆ ಜೆಜೆಎಂ ನಲ್ಲಿಗಳು ನಿಂತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿರಾ ತಾಲ್ಲೂಕಿನ ಹುಯಿಲ್‌ದೊರೆ ಗ್ರಾಮದಲ್ಲಿ ಸಿಮೆಂಟ್ ರಸ್ತೆಯ ಮಧ್ಯ ಭಾಗದಲ್ಲಿ ಅಗೆದಿರುವುದು
ಶಿರಾ ತಾಲ್ಲೂಕಿನ ಹುಯಿಲ್‌ದೊರೆ ಗ್ರಾಮದಲ್ಲಿ ಸಿಮೆಂಟ್ ರಸ್ತೆಯ ಮಧ್ಯ ಭಾಗದಲ್ಲಿ ಅಗೆದಿರುವುದು
ಜೆಜೆಎಂ ಯೋಜನೆಯಲ್ಲಿ ಹುಯಿಲ್ ದೊರೆ ಗ್ರಾಮದಲ್ಲಿ ಅಪೂರ್ಣ ಕಾಮಗಾರಿ ಕೈಗೊಳ್ಳಲಾಗಿದೆ. ಕೆಲವೆಡೆ ನಲ್ಲಿಗಳಿಗೆ ಸಂಪರ್ಕ ಸಹ ನೀಡಿಲ್ಲ. ಸಿಮೆಂಟ್ ರಸ್ತೆಗಳನ್ನು ಅಗೆದಿದ್ದು ಅವುಗಳ ದುರಸ್ತಿ ಸಹ ಮಾಡಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.
ಹರೀಶ್, ಹುಯಿಲ್‌ದೊರೆ
ಹುಯಿಲ್‌ದೊರೆ ಗ್ರಾಮದಲ್ಲಿ ಜೆಜೆಎಂ ಯೋಜನೆಯ ಪೈಪ್ ಕಿತ್ತು ಹೋಗಿದೆ
ಮದಲೂರು ದಾಸರಹಳ್ಳಿ ಗ್ರಾಮದಲ್ಲಿ ಜೆಜೆಎಂ ಯೋಜನೆಯಲ್ಲಿ ಚರಂಡಿಯ ಎರಡು ಬದಿ ನಲ್ಲಿ ಹಾಕಿದೆ
ನಾದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಜೆಜೆಎಂ ಕಾಮಗಾರಿ ಉದ್ದರಾಮನಹಳ್ಳಿ ಮತ್ತು ಕೆರೆಯಾಗಲಹಳ್ಳಿಗೆ ಮಾತ್ರ ಸೀಮಿತವಾಗಿದೆ. ಪಟ್ಟನಾಯಕನಹಳ್ಳಿಯಲ್ಲಿ ಕಾಮಗಾರಿ ಪ್ರಾರಂಭಕ್ಕೆ ಇನ್ನು ಕಾರ್ಯಾದೇಶ ನೀಡಿಲ್ಲ. ಕೇಳಿದರೆ ತಾಂತ್ರಿಕ ತೊಂದರೆಯ ನೆಪ ಹೇಳುತ್ತಾರೆ. ಅಧಿಕಾರಿಗಳ ವಿಳಂಬ ನೀತಿಯಿಂದ ಸರ್ಕಾರಿ ಯೋಜನೆಗಳು ಹಳ್ಳ ಹಿಡಿಯುವಂತಾಗಿ ಜನತೆಗೆ ಇದರಿಂದ ಲಾಭ ಸಿಗುತ್ತಿಲ್ಲ.
ಜಿ.ತುಳಸಮ್ಮ, ಪಟ್ಟನಾಯಕನಹಳ್ಳಿ ಗ್ರಾ.ಪಂ. ಸದಸ್ಯೆ
ಮದಲೂರು ದಾಸರಹಳ್ಳಿ ಗ್ರಾಮದಲ್ಲಿ ಜೆಜೆಎಂ ಯೋಜನೆಯಲ್ಲಿ ಚರಂಡಿಯ ಎರಡು ಬದಿ ನಲ್ಲಿ ಹಾಕಿದೆ
ಜೆಜೆಎಂ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ಪೈಪ್‌ಗಳ ಗುಣಮಟ್ಟ ಪರೀಕ್ಷೆ ಮಾಡಿದ ನಂತರ ಕಾಮಗಾರಿ ಮಾಡಲಾಗುತ್ತಿದೆ. ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಪ್ರತಿ ಕುಟುಂಬಕ್ಕೆ ಸಮಾನವಾಗಿ ಯಾವುದೇ ರೀತಿ ತಾರತಮ್ಯ ಮಾಡದೆ ನೀರು ಕೊಡುವ ಉದ್ದೇಶದಿಂದ ಕಾಮಗಾರಿ ಕೈಗೊಳ್ಳಲಾಗಿದೆ.
ಮಂಜು ಪ್ರಸಾದ್, ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಕಳ್ಳಂಬೆಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಗಾನಹಳ್ಳಿ ಅಜ್ಜೇನಹಳ್ಳಿ ಮತ್ತು ಲಕ್ಕನಹಳ್ಳಿ ಗ್ರಾಮಗಳಲ್ಲಿ ಮಾತ್ರ ಜೆಜೆಎಂ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿ ಆರು ತಿಂಗಳಲ್ಲಿ ಮುಗಿಸಬೇಕಾದ ಕಾಮಗಾರಿ ವರ್ಷವಾದರೂ ಮುಗಿದಿಲ್ಲ. ನಲ್ಲಿ ಸಂಪರ್ಕ ನೀಡಿಲ್ಲ ಪೈಪ್‌ಲೈನ್ ಹಾನಿ ಆಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಜೆಜೆಎಂ ಕಾಮಗಾರಿಯಿಂದ ಜನರಿಗೆ ಯಾವುದೇ ಪ್ರಯೋಜನ ದೊರೆಯದಂತಾಗಿದೆ.
ಅಭಿಷೇಕ್ ಕಳ್ಳಂಬೆಳ್ಳ, ಗ್ರಾ.ಪಂ. ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.