ADVERTISEMENT

ಕೊರಟಗೆರೆ | ಕಾಟಾಚಾರಕ್ಕೆ ನಡೆದ ಜನಸ್ಪಂದನ: ನಿರಾಸೆ

ಬೇಸರದಿಂದಲೇ ಮನೆಯತ್ತ ಹೆಜ್ಜೆ ಹಾಕಿದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:36 IST
Last Updated 20 ಜೂನ್ 2024, 7:36 IST
ಕೊರಟಗೆರೆಯಲ್ಲಿ ನಡೆದ ಜನಸ್ಪಂಧನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿವಿಧ ಇಲಾಖೆಗಳಿಂದ ಮಾಹಿತಿ ಪಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ತಹಶೀಲ್ದಾರ್ ಕೆ.ಮಂಜುನಾಥ್ ಹಾಜರಿದ್ದರು
ಕೊರಟಗೆರೆಯಲ್ಲಿ ನಡೆದ ಜನಸ್ಪಂಧನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿವಿಧ ಇಲಾಖೆಗಳಿಂದ ಮಾಹಿತಿ ಪಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ತಹಶೀಲ್ದಾರ್ ಕೆ.ಮಂಜುನಾಥ್ ಹಾಜರಿದ್ದರು   

ಕೊರಟಗೆರೆ: ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದಿಂದ ಪಟ್ಟಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಆರಂಭವಾದ ಎರಡೇ ಗಂಟೆಯಲ್ಲೇ ಮುಗಿಸಲಾಯಿತು. ಬಹು ನಿರೀಕ್ಷೆಯಿಂದ ಅಹವಾಲು ಹಿಡಿದು ಬಂದಿದ್ದ ಸಾರ್ವಜನಿಕರು ಬೇಸರದಿಂದಲೇ ಮನೆಯತ್ತ ಹೆಜ್ಜೆ ಹಾಕಿದರು.

ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಾರ್ಯಕ್ರಮಕ್ಕೆ ತಡವಾಗಿ ಬಂದ ಕಾರಣ 11 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೊದಲಿಗೆ ಎಲ್ಲ ಇಲಾಖೆಗಳಿಂದ ಹಾಕಲಾಗಿದ್ದ ಮಳಿಗೆಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಒಂದಷ್ಟು ಫಲಾನುಭವಿಗಳಿಗೆ ಬಿತ್ತನೆ ಬೀಜ, ಸಸಿ, ಆದೇಶ ಪತ್ರ ಸೇರಿದಂತೆ ವಿವಿಧ ಸವಲತ್ತು ವಿತರಣೆ ಮಾಡಿದರು.

ಬಹಳಷ್ಟು ಜನರು ಸಮಸ್ಯೆಗಳ ಅರ್ಜಿ ಹಿಡಿದು ಜಿಲ್ಲಾಧಿಕಾರಿಗೆ ನೀಡಲು ಬಂದರು. ಹಲವರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಕೆಲವೇ ನಿಮಿಷದಲ್ಲಿ ಸ್ಥಳದಿಂದ ನಿರ್ಗಮಿಸಿದರು. ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದು ನಿರಾಸೆ ಮೂಡಿಸಿತು.

ADVERTISEMENT

‘ಈಗಾಗಲೇ ಅನೇಕ ಬಾರಿ ನಮ್ಮ ಕೆಲಸಕ್ಕಾಗಿ ಕಚೇರಿಗೆ ಅರ್ಜಿ ನಿಡಿದ್ದೇವೆ. ಈಗಲು ಅರ್ಜಿ ಕೊಟ್ಟಿದ್ದೇವೆ ಆದರೆ ಇಲ್ಲಿನ ವಾತಾವರಣ ನೋಡಿದರೆ ನಮ್ಮ ಕೆಲಸ ಆಗುತ್ತದೆ ಎಂಬ ಭರವಸೆ ಇಲ್ಲ’ ಎಂದು ಕೆಲವರು ಅಭಿಪ್ರಾಯಪಟ್ಟರು.

40ಕ್ಕೂ ಹೆಚ್ಚು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದು ಹಕ್ಕು ಪತ್ರಕ್ಕೆ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದೇವೆ. ಆದರೂ ಈವರೆಗೆ ಹಕ್ಕುಪತ್ರ ನೀಡಿಲ್ಲ. ಈಗ ಏಕಾಏಕಿ ಸಾಗುವಳಿ ಮಾಡುತ್ತಿರುವ ಜಮೀನು ಅರಣ್ಯ ಇಲಾಖೆಗೆ ಸೇರುತ್ತದೆ ಎಂದು ನಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಇಷ್ಟು ವರ್ಷ ಇಲ್ಲದ ಅರಣ್ಯ ಭೂಮಿ ಈಗ ಎಲ್ಲಿಂದ ಬಂತು. ಈ ಬಗ್ಗೆ ಅನೇಕ ಬಾರಿ ಅರ್ಜಿ ಕೊಟ್ಟಿದ್ದೇವೆ. ಆದರೆ ಯಾವುದೇ ಉತ್ತರ ಸಿಕ್ಕಿಲ್ಲ. ಇಂದೂ ಸಹ ನಮ್ಮೂರಿನ ಹಲವು ರೈತರು ಹಕ್ಕು ಪತ್ರಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದೇವೆ. ಆದರೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯೇ ಹೊರಟು ಹೋಗಿದೆ’ ಎಂದು ಹೊಸಕೋಟೆ ಅಂಜನ್ ಮೂರ್ತಿ ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಭೂಮಿ ತೆರವುಗೊಳಿಸಿ ಗ್ರಾಮ ಠಾಣ ಮತ್ತು ನಿವೇಶನಕ್ಕೆ ಎರಡು ವರ್ಷದಿಂದ 20ಕ್ಕೂ ಹೆಚ್ಚು ಬಾರಿ ಇಲಾಖೆಗೆ ಅರ್ಜಿ ಕೊಟ್ಟಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಅರ್ಜಿ ನೀಡಿದ್ದೇವೆ. ಆದರೆ ಈವರೆಗೆ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಇಂದು ಜಿಲ್ಲಾಧಿಕಾರಿಗೆ ನೀಡಿದ ಅರ್ಜಿಯಲ್ಲಿ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ಹಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗಲೂ ಪರಿಹಾರ ಸಿಗುತ್ತದೆ ಎಂಬ ಭರವಸೆ ಇಲ್ಲ’ ಎಂದು ಹೊಸಹಳ್ಳಿ ಮಧು ಅಭಿಪ್ರಾಯ ವ್ಯಕ್ತಪಡಿಸಿದರು.

ಜನಸ್ಪಂದನ ಕಾರ್ಯಕ್ರಮ ಕೇವಲ ಕಾಟಾಚಾರಕ್ಕೆ ನಡೆದಂತಿದೆ. ಕಂದಾಯ ಹಾಗೂ ಭೂ ಮಾಪನ ಇಲಾಖೆಯಲ್ಲಿ ವರ್ಷಗಳು ಕಳೆದರೂ ಜನರ ಕೆಲಸ ಆಗುತ್ತಿಲ್ಲ. ಕಚೇರಿಗಳಲ್ಲಿ ದುಡ್ಡು ಕೊಡದ ಹೊರತು ಜನರ ಕೆಲಸ ಆಗುವುದಿಲ್ಲ ಎಂದು ಪ್ರದೀಪ್ ಅಸಮಾಧಾನ ವ್ಯಕ್ತಪಡಿಸಿದರು.

181 ಅರ್ಜಿ ಸ್ವೀಕಾರ
ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಇಲಾಖಾವಾರು ಅರ್ಜಿ ಸ್ವೀಕಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಅರ್ಜಿ ಸ್ವೀಕಾರ ಕೇಂದ್ರದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 101 ಅರ್ಜಿ ತಾಲ್ಲೂಕು ಪಂಚಾಯಿತಿ-25 ಪಟ್ಟಣ ಪಂಚಾಯಿತಿ-10 ಬೆಸ್ಕಾಂ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗ-ತಲಾ 6 ಅರ್ಜಿಗಳು ಸಲ್ಲಿಕೆಯಾದವು. ಒಟ್ಟು 181 ಅಹವಾಲುಗಳು ಸ್ವೀಕೃತವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.