ADVERTISEMENT

ತುಮಕೂರು: ವಿದ್ಯಾರ್ಥಿನಿಯರಿಗೆ ಆಶ್ರಯ ನೀಡದ ‘ಜಯಮಂಗಲಿ’

₹4 ಕೋಟಿ ವೆಚ್ಚದಲ್ಲಿ ಹಾಸ್ಟೆಲ್‌ ನಿರ್ಮಾಣ, ಬಳಕೆಗೆ ನೀಡದ ವಿ.ವಿ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 7:59 IST
Last Updated 16 ಅಕ್ಟೋಬರ್ 2024, 7:59 IST
ತುಮಕೂರಿನ ರೈಲು ನಿಲ್ದಾಣದ ರಸ್ತೆಯಲ್ಲಿ ನಿರ್ಮಿಸಿರುವ ವಿಶ್ವವಿದ್ಯಾಲಯದ ಹಾಸ್ಟೆಲ್‌ ಕಟ್ಟಡ
ತುಮಕೂರಿನ ರೈಲು ನಿಲ್ದಾಣದ ರಸ್ತೆಯಲ್ಲಿ ನಿರ್ಮಿಸಿರುವ ವಿಶ್ವವಿದ್ಯಾಲಯದ ಹಾಸ್ಟೆಲ್‌ ಕಟ್ಟಡ   

ತುಮಕೂರು: ನಗರದ ರೈಲು ನಿಲ್ದಾಣದ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿ ವಿಶ್ವವಿದ್ಯಾಲಯದಿಂದ ನಿರ್ಮಿಸಿರುವ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿನಿಯರ ಹಾಸ್ಟೆಲ್‌ ಉದ್ಘಾಟನೆಯಾಗಿ ಎರಡು ತಿಂಗಳು ಕಳೆದರೂ ಬಳಕೆಗೆ ನೀಡಿಲ್ಲ.

ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ ಯೋಜನೆ (ರೂಸಾ)ಯಲ್ಲಿ ₹2.07 ಕೋಟಿ, ವಿಶ್ವವಿದ್ಯಾಲಯದ ₹2 ಕೋಟಿ ಸೇರಿ ಒಟ್ಟು ₹4.07 ಕೋಟಿ ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇದಕ್ಕೆ ‘ಜಯಮಂಗಲಿ’ ಎಂದು ನಾಮಕರಣ ಮಾಡಲಾಗಿದೆ. ನೆಲ ಮಹಡಿ ಸೇರಿದಂತೆ ಮೂರು ಮಹಡಿಗಳನ್ನು ಹೊಂದಿದೆ. ಶೌಚಾಲಯ, ಊಟದ ಸಭಾಂಗಣ ಒಳಗೊಂಡಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಉದ್ಘಾಟನೆಯಾದ ದಿನದಿಂದ ಹಾಸ್ಟೆಲ್‌ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ.

ಈಗಿರುವ ಹಳೆಯ ಕಟ್ಟಡದಲ್ಲಿ 150 ವಿದ್ಯಾರ್ಥಿನಿಯರು ಉಳಿದುಕೊಂಡಿದ್ದಾರೆ. ಇಷ್ಟು ಸಂಖ್ಯೆಯ ಮಕ್ಕಳಿಗೆ ಕೊಠಡಿಗಳು ಸಾಲುತ್ತಿಲ್ಲ. ಈ ಸಮಸ್ಯೆ ನಿವಾರಣೆಗಾಗಿ ಹೊಸದಾಗಿ ಕಟ್ಟಡ ನಿರ್ಮಿಸಿದ್ದರೂ ಅದು ಬಳಕೆಗೆ ಸಿಗದೆ ವಿದ್ಯಾರ್ಥಿನಿಯರು ಪರದಾಡುತ್ತಿದ್ದಾರೆ. ಹಾಸ್ಟೆಲ್‌ಗೆ ದಾಖಲಾಗುವ ವಿದ್ಯಾರ್ಥಿನಿಯರು ವರ್ಷಕ್ಕೆ ₹20,100 ಹಣ ಪಾವತಿಸುತ್ತಿದ್ದಾರೆ. ಆದರೂ ಅವರಿಗೆ ಕನಿಷ್ಠ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ.

ADVERTISEMENT

ಈಗಾಗಲೇ ಪದವಿ ತರಗತಿಗಳು ಆರಂಭವಾಗಿದ್ದು, ಸ್ನಾತಕೋತ್ತರ ಪದವಿ ಪ್ರವೇಶಾತಿಯೂ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಹಾಸ್ಟೆಲ್‌ಗೆ ಪ್ರವೇಶ ಪಡೆಯುತ್ತಾರೆ. ಈ ವೇಳೆಗಾಗಲೇ ಅಗತ್ಯ ತಯಾರಿ ಮಾಡಿಕೊಳ್ಳಬೇಕಿತ್ತು. ಆದರೆ ಈವೆರಗೂ ಸರಿಯಾದ ಸಿದ್ಧತೆಗಳಾಗಿಲ್ಲ. ವಿದ್ಯಾರ್ಥಿನಿಯರು ಹಾಸ್ಟೆಲ್‌ ಕಡೆ ಹೆಜ್ಜೆ ಹಾಕುತ್ತಿರುವಾಗ ಬಾಕಿ ಕಾಮಗಾರಿ ಮುಗಿಸಲು ಮುಂದಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಿ, ಫರ್ನೀಚರ್‌ ಅಳವಡಿಸಲಾಗುತ್ತಿದೆ.

‘ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಹೆಚ್ಚಿನ ಭದ್ರತೆ ಇರುತ್ತದೆ. ಕಾಲೇಜು, ಹಾಸ್ಟೆಲ್‌ ಎರಡೂ ಕುಲಪತಿ, ಪ್ರಾಧ್ಯಾಪಕರ ಮೇಲುಸ್ತುವಾರಿಯಲ್ಲಿ ನಡೆಯುವುದರಿಂದ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ’ ಎಂಬ ಭಾವನೆಯಿಂದ ಸಾಕಷ್ಟು ಸಂಖ್ಯೆಯ ಪೋಷಕರು ತಮ್ಮ ಮಕ್ಕಳನ್ನು ವಿ.ವಿ ಹಾಸ್ಟೆಲ್‌ಗೆ ಸೇರಿಸುತ್ತಾರೆ. ಈಗ ಕೊಠಡಿಗಳ ಕೊರತೆ, ಹೊಸ ವಿದ್ಯಾರ್ಥಿ ನಿಲಯ ಬಳಕೆಗೆ ನೀಡದಿರುವುದರಿಂದ ಮಕ್ಕಳನ್ನು ಬೇರೆ ಹಾಸ್ಟೆಲ್‌ಗೆ ಸೇರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

‘ತರಾತುರಿಯಲ್ಲಿ ಹಾಸ್ಟೆಲ್‌ಗೆ ಚಾಲನೆ ನೀಡಿದ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ. ಉದ್ಘಾಟನಾ ಕಾರ್ಯಕ್ರಮ ಮುಗಿದ ನಂತರ ಕನಿಷ್ಠ ಇತ್ತ ಬಂದು ಪರಿಶೀಲನೆ ನಡೆಸಿ, ಕೆಲಸಕ್ಕೆ ವೇಗ ನೀಡಿಲ್ಲ. ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಪೂರ್ಣಗೊಳಿಸಲು ಯಾರೊಬ್ಬರು ಇಚ್ಛಾಶಕ್ತಿ ತೋರುತ್ತಿಲ್ಲ’ ಎಂದು ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಆರೋಪಿಸುತ್ತಿದ್ದಾರೆ.

ಬಳಕೆಗೆ ನೀಡಲು ಕ್ರಮ

ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೊಸ ಹಾಸ್ಟೆಲ್‌ ಬಳಕೆಗೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಬಾಕಿ ಕಾಮಗಾರಿ ಪೂರ್ಣಕ್ಕೆ ಈಗಾಗಲೆ ಕೆಲಸ ಆರಂಭಿಸಲಾಗಿದೆ. ಮುಂದಿನ ತಿಂಗಳು ಅಥವಾ ಡಿಸೆಂಬರ್‌ನಲ್ಲಿ ವಿದ್ಯಾರ್ಥಿನಿಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಪ್ರೊ.ಎಂ.ವೆಂಕಟೇಶ್ವರಲು ಕುಲಪತಿ ತುಮಕೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.