ಶಿರಾ: ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ ಎಂದು ತಾಲ್ಲೂಕು ಜೆಡಿಎಸ್ ಘಟಕ ಹೇಳಿದೆ.
ನಗರದಲ್ಲಿ ಗುರುವಾರ ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಆರ್.ಉಗ್ರೇಶ್, ತಾಲ್ಲೂಕು ಅಧ್ಯಕ್ಷ ಸತ್ಯಪ್ರಕಾಶ್, ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ರಹಮತ್ ವುಲ್ಲಾಖಾನ್, ನಗರಸಭೆ ಸದಸ್ಯ ಅಂಜಿನಪ್ಪ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮುಸ್ಲಿಂ ಸಮುದಾಯ ಸಂಪೂರ್ಣವಾಗಿ ಸಚಿವ ಜಮೀರ್ ಅವರ ಹಿಡಿತದಲ್ಲಿ ಇಲ್ಲ. ಜೆಡಿಎಸ್, ಬಿಜೆಪಿಯಲ್ಲಿ ಸಹ ಮುಸ್ಲಿಮರು ಗುರ್ತಿಸಿಕೊಂಡಿದ್ದಾರೆ. ಜನಾಂಗಕ್ಕೆ ದೇವೇಗೌಡ ಅವರ ಕೊಡುಗೆ ಅಪಾರವಾಗಿದೆ. ಅದನ್ನು ಮುಸ್ಲಿಮರು ಮರೆಯುವುದಿಲ್ಲ. ಜಮೀರ್ ಅಮಹದ್ ಖಾನ್ ಅವರು ಈ ಮಟ್ಟಕ್ಕೆ ಬೆಳೆಯಲು ಸಹ ದೇವೇಗೌಡರೇ ಕಾರಣ ಈ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೇಕು. ಹಣ ಹಾಗೂ ಅಧಿಕಾರದ ದರ್ಪದಿಂದ ಈ ರೀತಿ ಹೇಳಿಕೆ ನೀಡಿರುವುದನ್ನು ಯಾರೂ ಸಹಿಸುವುದಿಲ್ಲ ಎಂದರು.
ಸಚಿವ ಜಮೀರ್ ಹೇಳಿಕೆ ದ್ವೇಷ ಮೂಡಿಸುವ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡಲಿರುವುದರಿಂದ ತಕ್ಷಣ ಅವರ ಹೇಳಿಕೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಣ್ಣದ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿನ ಎಲ್ಲ ರೈತರು ಕಪ್ಪು ಬಣ್ಣ ಹೊಂದಿದ್ದಾರೆ. ಬಿಸಿಲಿನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕಪ್ಪು ಬಣ್ಣದಿಂದ ಇದ್ದಾರೆ. ಕಪ್ಪು ಬಣ್ಣದ ಬಗ್ಗೆ ಮಾತನಾಡುವ ಮೂಲಕ ಜನಾಂಗೀಯ ನಿಂದನೆ ಮಾಡಿದ್ದಾರೆ. ರಾಜಕೀಯದಲ್ಲಿ ಆರೋಗ್ಯಕರ ಟೀಕೆ ಮಾಡಬೇಕು. ಬೇರೆಯವರಿಗೆ ನೋವು ಮಾಡಬಾರದು ಎಂದರು.
ಸಚಿವ ಜಮೀರ್ ಮನಸ್ಸು ಪೂರ್ವಕವಾಗಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಅವರು ಎಲ್ಲೇ ಹೋದರೂ ಜೆಡಿಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಾರೆ ಎಂದು ಎಚ್ಚರಿಸಿದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಮುಡಿಮಡು ರಂಗಶ್ವಾಮಯ್ಯ, ಟಿ.ಡಿ.ಮಲ್ಲೇಶ್, ರೇಣುಕಮ್ಮ, ಜಯಮ್ಮ, ರಂಗನಾಥಗೌಡ, ಸುನೀಲ್, ಹಂದಿಕುಂಟೆ ಚಂದ್ರಶೇಖರ್ ಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.