ಚಿಕ್ಕನಾಯಕನಹಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಪರ ಇದ್ದ ಅಲೆಯ ನಡುವೆಯೂ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಬಿ. ಸುರೇಶ್‌ಬಾಬು ಗೆಲುವಿನ ನಗೆ ಬೀರಿದ್ದಾರೆ.
ಬಿಜೆಪಿಯ ಪ್ರಬಲ ಅಭ್ಯರ್ಥಿ ಜೆ.ಸಿ. ಮಾಧುಸ್ವಾಮಿ ಎರಡನೇ ಸ್ಥಾನ ಪಡೆದರೆ, ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸೇರಿದ್ದ ಕೆ.ಎಸ್. ಕಿರಣ್‌ಕುಮಾರ್ ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದರು.
ಕ್ಷೇತ್ರದಲ್ಲಿ ಬಲವಾದ ಅಹಿಂದ ಮತ ಬ್ಯಾಂಕ್ ಹೊಂದಿರುವ ಜೆಡಿಎಸ್ ಕಳೆದೊಂದು ವರ್ಷದಿಂದ ಚುನಾವಣೆಗೆ ನಡೆಸಿದ ಸಂಘಟನಾ ಚಟುವಟಿಕೆ ಫಲ ಕೊಟ್ಟಿದೆ. ಕ್ಷೇತ್ರದ ಜನತೆ ಪ್ರಾರಂಭದಿಂದಲೂ ಮಾಜಿ ಸಚಿವ ಬಸವಯ್ಯ ಅವರ ಮನೆ ಮೇಲೆ ಇಟ್ಟಿದ್ದ ಅಭಿಮಾನ ಹಾಗೂ ಅವರ ಪುತ್ರ ಸುರೇಶ್‌ಬಾಬು ಜನರ ಜತೆ ಇಟ್ಟುಕೊಂಡಿದ್ದ ಒಡನಾಟ, ಪ್ರೀತಿಯನ್ನು ಮತವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತ, ನಾಯಕ ಸಮುದಾಯದ ಮುಖಂಡರು ಜೆಡಿಎಸ್ ಜೊತೆ ಗುರುತಿಸಿಕೊಂಡು ಪ್ರಚಾರ ನಡೆಸಿದ್ದು ನೆರವಾಗಿದೆ.
ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಕ್ಷೇತ್ರಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ತಂದು ಗುರುತರ ಅಭಿವೃದ್ಧಿ ಕೆಲಸ ಮಾಡಿದ್ದೇನೆಂದು ಹೇಳುತ್ತಾ ಮತಯಾಚಿಸಿದರೂ ಕ್ಷೇತ್ರದ ಮತದಾರ ಜೆ.ಸಿ. ಮಾಧುಸ್ವಾಮಿ ಅವರ ಕೈ ಹಿಡಿದಿಲ್ಲ. ಜನರಿಗೆ ಸ್ಪಂದಿಸಲಿಲ್ಲ ಎಂಬ ಆಪಾದನೆ ಮತ್ತು ಅವರ ನಿಷ್ಟುರ ಮಾತುಗಳೇ ಮುಳುವಾಗಿವೆ. ಬಿಜೆಪಿಯ ಕೆಲವರೇ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಸಾವಿರಾರು ಕೋಟಿ ರೂಪಾಯಿ ಕಾಮಗಾರಿ ನಡೆಸಿದರೂ ಸ್ಥಳೀಯ ಗುತ್ತಿಗೆದಾರರಿಗೆ ನೀಡಿಲ್ಲ ಎನ್ನುವ ಬೇಗುದಿ ಅವರ ಆಪ್ತವಲಯದಲ್ಲಿತ್ತು. ಬಹುಕಾಲದಿಂದ ಅವರ ಜತೆಗಿದ್ದ ಅನೇಕರು ಬೇರೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಸಹ ಫಲಿತಾಂಶದ ಮೇಲೆ ಪರಿಣಾಮ ಬೀರಿವೆ.
ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಕ್ಷೇತ್ರಕ್ಕೆ ಸಿಗಬೇಕಾದ ನೀರಿನ ಪಾಲು ಪಡೆದಿದ್ದೇನೆ. ಫಲಾನುಭವಿಗಳಿಗೆ ದೊರೆಯುವ ಅನುದಾನಗಳನ್ನು ಶೇ 100ರಷ್ಟು ಹಂಚಿದ್ದೇನೆ. ಅಭಿವೃದ್ಧಿ ಹಾಗೂ ಸವಲತ್ತು ಪಡೆದವರು ಮತನೀಡಿದರೆ ಗೆಲುವು ನಿರಾಯಾಸ ಎಂಬ ನಂಬಿಕೆಯಲ್ಲಿದ್ದರು. ಆದರೆ ಅದು ಹುಸಿಯಾಗಿದೆ.
ಲಿಂಗಾಯತ ಸಮುದಾಯದ ಕೆ.ಎಸ್. ಕಿರಣ್‌ಕುಮಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, ಮತ ವಿಭಜನೆಗೆ ಕಾರಣವಾಗಿದೆ ಎನ್ನಬಹುದು.
ಕೆ.ಎಸ್. ಕಿರಣ್‍ಕುಮಾರ್‌ಗೆ ಕ್ಷೇತ್ರದಲ್ಲಿ ಉತ್ತಮ ಹೆಸರಿದೆ. ಸರಳ, ಸಜ್ಜನ ಹಾಗೂ ಕಷ್ಟ ಎಂದು ಬಂದವರಿಗೆ ನೆರವಾಗುತ್ತಾರೆ ಎನ್ನುವ ಅಭಿಪ್ರಾಯವಿದ್ದರೂ ಅದು ಗೆಲುವಿನ ದಡ ಮುಟ್ಟಿಸಲು ನೆರವಾಗಿಲ್ಲ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಿತಿ ಸುಧಾರಣೆಗೆಯಾಗಿದೆ ಎನ್ನುವ ಆಶಾವಾದ ಪಕ್ಷದ ವಲಯದಲ್ಲಿದೆ.
ಅಭ್ಯರ್ಥಿಗಳು ಪಡೆದ ಮತ
ಅಭ್ಯರ್ಥಿ; ಪಡೆದ ಮತ
ಸಿ.ಬಿ. ಸುರೇಶ್‌ಬಾಬು (ಜೆಡಿಎಸ್); 70,329
ಜೆ.ಸಿ. ಮಾಧುಸ್ವಾಮಿ (ಬಿಜೆಪಿ);60,304
ಕೆ.ಎಸ್. ಕಿರಣ್‌ಕುಮಾರ್ (ಕಾಂಗ್ರೆಸ್); 50629
ನಾಗರಾಜು ಎಸ್.ಸಿ.(ಎಎಪಿ);1,767
undefined undefined
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.