ADVERTISEMENT

ಸರ್ಕಾರಿ ಕಾಲೇಜು ಮುನ್ನೆಲೆಗೆ ತನ್ನಿ: ಕೆ.ರಾಮಕೃಷ್ಣರೆಡ್ಡಿ

ಉದ್ಯೋಗ ಕೌಶಲ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 3:02 IST
Last Updated 12 ಮಾರ್ಚ್ 2024, 3:02 IST
   

ತುಮಕೂರು: ಪದವಿ ಮುಗಿಸಿದ ವಿದ್ಯಾರ್ಥಿಗಳು ಉದ್ಯೋಗಕ್ಕೆ ಅಲೆಯುವುದನ್ನು ತಪ್ಪಿಸಲು ಕೌಶಲ ತರಬೇತಿ ನೀಡುವ ಅಗತ್ಯವಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮಕೃಷ್ಣರೆಡ್ಡಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ವಾಧ್ವಾನಿ ಫೌಂಡೇಶನ್‌ ಸಹಭಾಗಿತ್ವದಲ್ಲಿ ಉದ್ಯೋಗ ಕೌಶಲ ತರಬೇತಿ ಹಾಗೂ ಬೋಧಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾಲೇಜು ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ ಉದ್ಯೋಗ ಕೌಶಲದ ಕುರಿತು ಬೋಧಕರಿಗೆ ತರಬೇತಿ ನೀಡುತ್ತಿದೆ. ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲದ ಮಹತ್ವ ತಿಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ADVERTISEMENT

ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಬೋಧಕರು ಫಲಿತಾಂಶದಲ್ಲಿ ಖಾಸಗಿ ಕಾಲೇಜಿಗೆ ಸಡ್ಡು ಹೊಡೆದು, ಸರ್ಕಾರಿ ಕಾಲೇಜುಗಳನ್ನು ಮುನ್ನೆಲೆಗೆ ತರುವ ಕೆಲಸ ಮಾಡಬೇಕು. ಸರ್ಕಾರವು ಶಿಕ್ಷಣ ಇಲಾಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಅಷ್ಟೇ ನಿಷ್ಠೆಯಿಂದ ಬೋಧಕರು ಉತ್ತಮ ಬೋಧನೆ ಮಾಡಬೇಕು. ಇಲ್ಲದಿದ್ದರೆ ನಮಗೆ ನಾವು ದ್ರೋಹ ಮಾಡಿಕೊಂಡಂತೆ ಎಂದು ಎಚ್ಚರಿಸಿದರು.

ವಾಧ್ವಾನಿ ಫೌಂಡೇಶನ್‌ ತರಬೇತುದಾರ ವಿನಯ್‌, ‘ಪದವಿ ಪೂರ್ಣಗೊಳಿಸಿದ ಯುವಕರು ಸ್ವಯಂ ಉದ್ಯೋಗ ಕಂಡುಕೊಂಡು ಬದುಕು ರೂಪಿಸಿಕೊಳ್ಳಬೇಕು’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್‌.ತರುನ್ನುಂ ನಿಖತ್‌, ‘ಉದ್ಯೋಗ ಕೌಶಲದಿಂದ ನಿರುದ್ಯೋಗ ನಿರ್ಮೂಲನೆಯಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಈ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆಯ ಮಂಜುನಾಥ್, ಹರಿಬಾಲಚಂದ್ರನ್, ಕೆ.ಸಿ.ಬಸವರಾಜ್, ವಿಶೇಷ ಶಿಕ್ಷಣಾಧಿಕಾರಿ ಶ್ರೀಕಾಂತ್‌, ಪ್ರೊ.ಗಂಗಾಧರ, ರೇಣುಕಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.